
ಬೆಂಗಳೂರು (ಆ.01): ಪಕ್ಷದ ಸಂಘಟನೆ ಹಾಗೂ ಲೋಕಸಭೆ ಚುನಾವಣೆ ಸೇರಿದಂತೆ ಇತರೆ ವಿಚಾರಗಳ ಕುರಿತು ವರಿಷ್ಠರ ಜತೆ ಚರ್ಚಿಸುವ ಸಂಬಂಧ ಆ.2ರಂದು ದೆಹಲಿಗೆ ತೆರಳುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಸಚಿವರಾಗಿರುವ ಹಿನ್ನೆಲೆಯಲ್ಲಿ ನಮ್ಮ ಸ್ಥಾನವನ್ನು ಬೇರೆಯವರಿಗೆ ನೀಡಬೇಕಾಗಿದೆ. ಕೆಪಿಸಿಸಿಗೆ ನೂತನ ಕಾರ್ಯದರ್ಶಿಗಳ ನೇಮಕವಾಗಬೇಕು. ಈ ಬಗ್ಗೆ ವರಿಷ್ಠರಿಗೆ ಮನವಿ ಮಾಡಲಾಗುವುದು. ಹೊಸ ತಂಡದ ರಚನೆ ಕುರಿತು ಚರ್ಚೆ ನಡೆಯಲಿದೆ. ಕೆಪಿಸಿಸಿ ಕಚೇರಿಗೆ ಹೋಗಿ ನಾವು ಕೂರಲು ಆಗುವುದಿಲ್ಲ.
ಅದಕ್ಕೆ ಬದಲಾವಣೆ ಅನಿವಾರ್ಯ ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರಿಗೆ ಅದಕ್ಕಿಂತ ಕೆಳಗಿನ ಹುದ್ದೆ ನೀಡಲು ಬರುವುದಿಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನಿಸುತ್ತಾರೆ. ಸಚಿವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿಲ್ಲ. ಈಗ ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷವು ಅಂತಿಮವಾಗಿ ತೀರ್ಮಾನ ಮಾಡಲಿದೆ ಎಂದು ಹೇಳಿದ ಅವರು, ಸಚಿವರ ಕಾರ್ಯವೈಖರಿ ಕುರಿತು ಈಗಲೇ ರಿಪೋರ್ಟ್ ಕೊಡಲಿಕ್ಕೆ ಆಗುವುದಿಲ್ಲ. ಸಚಿವರಿಗೆ ಕನಿಷ್ಠ ಆರು ತಿಂಗಳ ಸಮಯ ಬೇಕಾಗುತ್ತದೆ ಎಂದರು.
ನಗರಸಭೆಯ ಭ್ರಷ್ಟಾಚಾರ ಕ್ಲೀನ್ ಮಾಡುವೆ: ಶಾಸಕ ಪ್ರದೀಪ್ ಈಶ್ವರ್
ಸಿಎಂ ಇಳಿಸೋ ಹರಿ ಹೇಳಿಕೆ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ: ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ ಕುಟುಂಬದ ಭಾಗ. ಅವರು ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಮಾಡಿದ್ದಾರೆ. ‘ಸಿಎಂ ಸ್ಥಾನಕ್ಕೆ ಕೂರಿಸೋದೂ ಗೊತ್ತು, ಇಳಿಸೋದೂ ಗೊತ್ತು’ ಎಂಬ ಅವರ ಹೇಳಿಕೆ ಕರ್ನಾಟಕಕ್ಕೆ ಸಂಬಂಧಪಟ್ಟಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಎಂದು ಲೋಕೋಪಯೋಗಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ಹೈಕಮಾಂಡ್‌ಗೆ ಕೇಳಬೇಕು. ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಕಾಗಿಲ್ಲ. ಅವರು ಹೇಳಿರುವುದು ಬೇರೆ ರಾಜ್ಯಗಳ ವಿಚಾರ. ಕೆಲವು ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ’ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಯಿಂದ ಕುಟುಂಬದ ಆರ್ಥಿಕ ಸ್ಥಿತಿ ಸದೃಢ: ಸಚಿವ ಚಲುವರಾಯಸ್ವಾಮಿ
ಮುಂದಿನ ಸಲ ನಾನು ಸಿಎಂ ರೇಸಲ್ಲಿ: ‘ಮುಂದಿನ ಸಲ ನಾನು ಸಿಎಂ ರೇಸಲ್ಲಿ ಇರುತ್ತೇನೆ’ ಎಂದು ಸಚಿವ ಹಾಗೂ ಕೆಪಿಸಿಸಿ ಕಾರಾರಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಅವರು ಮಾತನಾಡಿ, ‘ಇನ್ನು ಪ್ರಸ್ತುತ ಮುಖ್ಯಮಂತ್ರಿ ರೇಸ್‌ನಲ್ಲಿ ನಾನು ಇಲ್ಲ. ಮುಂದಿನ ಬಾರಿಗೆ ನಾನೂ ಕೂಡ ರೇಸ್‌ನಲ್ಲಿ ಇರುತ್ತೇನೆ’ ಎಂದು ಹೇಳಿದರು. ‘ಆಗಸ್ಟ್ 2ಕ್ಕೆ ಹೈಕಮಾಂಡ್ ಸಭೆ ಕರೆದಿದ್ದಾರೆ. ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಲಿವೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.