ಚಿಕ್ಕಮಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಸಚಿವ ಸತೀಶ್‌ ಜಾರಕಿಹೊಳಿ ಭರವಸೆ

Kannadaprabha News   | Kannada Prabha
Published : Jun 09, 2025, 06:29 PM IST
Satish Jarkiholi-03 New

ಸಾರಾಂಶ

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಈ ಜಿಲ್ಲೆಯಲ್ಲಿ ಭಾರತದ ಭೂಪಟದಲ್ಲಿ ಗುರುತಿಸುವ ಕೆಲಸ ಮಾಡುವುದಾಗಿ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು.

ಚಿಕ್ಕಮಗಳೂರು (ಜೂ.09): ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಈ ಜಿಲ್ಲೆಯಲ್ಲಿ ಭಾರತದ ಭೂಪಟದಲ್ಲಿ ಗುರುತಿಸುವ ಕೆಲಸ ಮಾಡುವುದಾಗಿ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾನುವಾರ ಭೇಟಿ ನೀಡಿ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಚಿಕ್ಕಮಗಳೂರಿಗೆ ಇನ್ನೂ 2 ಬಾರಿ ಭೇಟಿ ನೀಡಿದರೆ ನನಗೆ ಇಲ್ಲಿನ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಜಿಲ್ಲೆಯಲ್ಲಿ ಹೆಚ್ಚು ಪ್ರವಾಸಿ ತಾಣಗಳಿವೆ. ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿದರೆ ಜಿಲ್ಲೆ ಆರ್ಥಿಕ ಸಬಲೀಕರಣ ಹೊಂದಲಿದೆ.

ಈ ನಿಟ್ಟಿನಲ್ಲಿ ಮತ್ತೊಮ್ಮೆ ಜಿಲ್ಲೆಯಲ್ಲಿ ಪರಿವೀಕ್ಷಣೆ ನಡೆಸಿ ಅಗತ್ಯವಿರುವ ಅನುದಾನ ನೀಡಲಾಗುವುದು ಎಂದು ಹೇಳಿದರು. ಧಾರವಾಡ ಮತ್ತಿತರೆ ಜಿಲ್ಲೆಯಲ್ಲಿ ಇರುವಂತೆ ಈ ಜಿಲ್ಲೆಯಲ್ಲೂ ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಇರುವ ಬಗ್ಗೆ ತಿಳಿದಿದ್ದೇನೆ. ಈ ಬಗ್ಗೆ ಕಂದಾಯ ಮತ್ತು ಅರಣ್ಯ ಸಚಿವರ ಗಮನ ಸೆಳೆದು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ವೀಕ್ಷಿಸಿದ್ದೇನೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಈ ಕಚೇರಿ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಲಾಗುವುದು. ಬೆಳಗಾವಿಯ ನಾಲ್ವರು ಅಧ್ಯಕ್ಷರನ್ನು ಇಲ್ಲಿಗೆ ಕರೆಸಿ ಸಹಾಯ ಮಾಡುವ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

ಮಳೆಯಿಂದ ಯಾವ ಜಿಲ್ಲೆಯಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿಯೇ ನಾನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಳೆ ಹಾನಿ ಪರಿಶೀಲನೆ ನಡೆಸಿ ವಾಸ್ತವವಾಗಿ ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಬೇಕು ಎಂದು ನಿರ್ಧರಿಸುತ್ತಿದ್ದೇವೆ ಎಂದು ಹೇಳಿದರು. ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳನ್ನು ಸಚಿವರು ವೀಕ್ಷಣೆ ಮಾಡಿದ್ದಾರೆ. ಮಹಲ್‌ನಿಂದ ಕೆಮ್ಮಣ್ಣುಗುಂಡಿಯವರೆಗೆ 15 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಈಗಿರುವ ಅಡೆ ತಡೆ ಸರಿಪಡಿಸಿ ರಸ್ತೆ ಮಾಡಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಸತೀಶ್‌ ಜಾರಕಿಹೊಳಿ ಅವರು ಯಾವುದೇ ಜಿಲ್ಲೆಗೆ ಪ್ರವಾಸ ಕೈಗೊಂಡರೂ ಆ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ತೆರಳಿ ಕಾರ್ಯಕರ್ತರ ಭೇಟಿ ಮಾಡುವ ಪರಿಪಾಠವನ್ನು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಕಾರ್ಯಕರ್ತರಿಗೆ ಕೆಲಸ ಮಾಡಲು ಇನ್ನಷ್ಟು ಬಲ ಬಂದಂತಾಗುತ್ತದೆ ಎಂದು ಹೇಳಿದರು. ಈಗಾಗಲೇ ಲೋಕೋಪಯೋಗಿ ಇಲಾಖೆ ಸಚಿವರು ಎರಡು ಬಾರಿ ಕಾಫಿನಾಡು ಜಿಲ್ಲೆಗೆ ಭೇಟಿ ನೀಡಿ ಇಲ್ಲಿ ಆಗಿರುವ ಮಳೆಹಾನಿ ಪರಿಶೀಲನೆ ನಡೆಸಿದ್ದಾರೆ. ಇದರಿಂದಾಗಿ ನಮ್ಮ ಜಿಲ್ಲೆಗೆ ಹೆಚ್ಚಿನ ಅನುದಾನ ಬರುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ, ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಡಾ.ವಿಜಯ್‌ಕುಮಾರ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ರೇಖಾ ಹುಲಿಯಪ್ಪಗೌಡ, ತನೋಜ್‌ನಾಯ್ಡು, ಪ್ರಶಾಂತ್, ಮಹಮದ್ ಹನೀಫ್, ಅಕ್ಬರ್, ಹಿರೇಮಗಳೂರು ರಾಮಚಂದ್ರ ಇದ್ದರು. ಶೇ. 70 - 30ರ ಅನುಪಾತದಲ್ಲಿ ಅಧಿಕಾರರಾಜ್ಯದಲ್ಲಿ ಕೆಪಿಸಿಸಿಯಿಂದ ಭರ್ತಿ ಮಾಡಬೇಕಾದ ಹಲವು ಹುದ್ದೆಗಳು ಇನ್ನೂ ಬಾಕಿ ಉಳಿದಿವೆ. ಇದರಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಶೇ. 70ರಷ್ಟು ಸ್ಥಾನ ಹಾಗೂ ಹೊಸದಾಗಿ ಪಕ್ಷಕ್ಕೆ ಬಂದವರಿಗೆ ಶೇ. 30 ರಷ್ಟು ಸ್ಥಾನ ನೀಡುವ ಬಗ್ಗೆ ಆಯಾ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಈ ರೀತಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡಿದಲ್ಲಿ ಅವರು ಯಾವುದೇ ಗೊಂದಲವಿಲ್ಲದೆ ಪಕ್ಷಕ್ಕಾಗಿ ದುಡಿಯುತ್ತಾರೆ. ಇದರಿಂದಾಗಿ ಮುಂದಿನ ವಿಧಾನಸಭೆ ಚುನಾವಣೆ ಮಾತ್ರವಲ್ಲದೆ ಎಲ್ಲ ಚುನಾವಣೆ ಗೆಲ್ಲಲು ಸಾಧ್ಯವಾಗಲಿದೆ ಎಂದು ಹೇಳಿದರು. ಪಕ್ಷದ ಹಲವು ಹಿರಿಯರು ನಾವು ಪಕ್ಷಕ್ಕೆ ಅಧಿಕಾರ ಇಲ್ಲದಿರುವ ಸಂದರ್ಭದಲ್ಲಿಯೂ ಪಕ್ಷಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದೇವೆ. ಇದೀಗ ಪಕ್ಷ ಅಧಿಕಾರಕ್ಕೆ ಬಂದಿದೆ. ಹೀಗಾಗಿ ನಮಗೂ ಅಧಿಕಾರ ನೀಡುವಂತೆ ಹಲವು ಹಿರಿಯರು ಬೇಡಿಕೆ ಮುಂದಿ ಡುತ್ತಿದ್ದಾರೆ. ಹಿರಿಯರ ಬೇಡಿಕೆಯನ್ನೂ ಪರಿಗಣಿಸಬೇಕು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ