
ಬೆಳಗಾವಿ (ಅ.24): ರಾಜ್ಯದಲ್ಲಿ ಅಹಿಂದ ನಾಯಕತ್ವ ಇದ್ದೇ ಇದೆ. ಅದು ಇಲ್ಲದೇ ಸಂಘಟನೆ ಮಾಡಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕಾಕತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 2028ಕ್ಕೆ ಸಿಎಂ ಕ್ಲೈಮ್ ಮಾಡುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದರು.
ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವೈಯಕ್ತಿಕವಾಗಿದೆ. ಎಲ್ಲವನ್ನೂ ಕಾಕತಿಯಲ್ಲಿ ನಿಂತು ನಿರ್ಧಾರ ಮಾಡಲು ಆಗಲ್ಲ. ಡಿಸೆಂಬರ್ ಕ್ರಾಂತಿ ನಮಗೆ ಗೊತ್ತೇ ಇಲ್ಲ. ಸಿದ್ದರಾಮಯ್ಯನವರ ನಂತರ ಪಕ್ಷ ನಡೆಸುವ ವಿಚಾರ ಎಲ್ಲವನ್ನೂ ಕಾದು ನೋಡೋಣ ಎಂದ ಅವರು, ವಿಧಾನ ಪರಿಷತ್ತಿನ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ವೈಯಕ್ತಿಕ ನಿರ್ಧಾರ ಹೇಳಿದ್ದಾರೆ. ಅಂತಿಮವಾಗಿ ಯಾರು ನಾಯಕ ಎಂಬುದನ್ನು ಪಕ್ಷ, ಶಾಸಕರು ನಿರ್ಧಾರ ಮಾಡಬೇಕು. ಎಲ್ಲರನ್ನೂ ಜೊತೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇವೆ. ಅಂತಿಮವಾಗಿ ಪಕ್ಷವೆ ನಿರ್ಧಾರ ಮಾಡಬೇಕು ಎಂದರು.
ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವಾಲ್ಮೀಕಿ ಸಮಾಜವನ್ನು ಮೇಲೆತ್ತುವ ಕೆಲಸವಾಗಬೇಕಿದೆ ಎಂದು ಹೇಳಿದರು. ಸಮಾಜದ ಅಭಿವೃದ್ಧಿಗಾಗಿ ಇಂಥ ಕಾರ್ಯಕ್ರಮ ನಡೆಯಬೇಕು. ಸಮಾಜದ ಸ್ಥಿತಿ ಸುಧಾರಿಸುವ ಅದರ ಬಗ್ಗೆ ಚರ್ಚಿಸುವ ಕೆಲಸವಾಗ ಬೇಕಿದೆ ಎಂದು ಹೇಳಿದರು. ಡಾ.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಫಲವಾಗಿ ಇಂದು ಸಮಾಜ ಬೆಳಕಿಗೆ ಬಂದಿದೆ. ನಮ್ಮ ಸರ್ಕಾರ ಅನೇಕ ಯೋಜನೆಗಳು, ಸಾಲಸೌಲಭ್ಯಗಳನ್ನು ಸಮಾಜಕ್ಕೆ ನೀಡಿದೆ. ಅವುಗಳ ಸದುಪಯೋಗಪಡಿಸಿಕೊಂಡು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಮಾಜ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಕೆಲಸಗಳು ನಡೆಯಬೇಕು.
ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ದೇಶದಾದ್ಯಂತ ಜಾತೀಯತೆ ಹೆಚ್ಚುತ್ತಿದೆ. ರಾಜಕೀಯ ಲಾಭಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಮನೆಗಳಲ್ಲಿ ಯಾವುದೇ ಸಂಪ್ರದಾಯ, ದೇವರ ಪೂಜಾ ಪದ್ಧತಿಗಳಿದ್ದರೂ ನಾವೆಲ್ಲ ಹಿಂದೂಗಳು, ಸನಾತನ ಧರ್ಮದವರು ಎಂಬ ಭಾವನೆ ಬರಬೇಕಿದೆ. ರಾಮಾಯಣ ಮಹಾಕಾವ್ಯ ರಚಿಸಿದ್ದು ವಾಲ್ಮೀಕಿ ಮಹರ್ಷಿಗಳು, ಶ್ರೀರಾಮ ಕ್ಷತ್ರಿಯ, ಶ್ರೀಕೃಷ್ಣ ಗೊಲ್ಲರ ಕುಲದವ, ಅವರನ್ನು ಪೂಜಿಸುವರು ಬ್ರಾಹ್ಮಣರು. ಆದರೆ ಈಗ ಜನಿವಾರ ಧರಿಸುವವರು ಮಾತ್ರ ಹಿಂದುಗಳು ಎಂಬ ಭಾವನೆ ಬಿತ್ತುವ ಕೆಲಸ ನಡೆದಿದೆ.
ಹಿಂದು ಎಂದರೆ ಅದು ಜಾತಿಯ ಪ್ರತೀಕ ಅಲ್ಲ, ಅದೊಂದು ಜೀವನ ಪದ್ಧತಿ. ಉಳಿದೆಲ್ಲ ಸಂಸ್ಕೃತಿಗಳಿಗೆ ಆಧಾರಗಳಿವೆ, ಆದರೆ ಹಿಂದು ಮಾತ್ರ ಸನಾತನ, ಆದಿ ಅಂತ್ಯ ರಹಿತವಾದ ಪದ್ಧತಿಯಾಗಿದೆ. ದೇವನಿರ್ಮಿತ ದೇಶ ಭಾರತ. 15 ಲಕ್ಷವರ್ಷಗಳ ಹಿಂದೆ ಶ್ರೀರಾಮ ಸೇತು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳೇ ಖಚಿತಪಡಿಸಿದ್ದಾರೆ. ಮಹಾತ್ಮ ಗಾಂಧಿ ಅವರು ಭಾರತವನ್ನು ದೇವರನಾಡು ಎಂದು ಕರೆದಿದ್ದಾರೆ. ವಿಶ್ವದಲ್ಲಿ ಭಾರತ ಅತ್ಯಂತ ಬಲಿಷ್ಠ ಮತ್ತು ಶ್ರೀಮಂತ ರಾಷ್ಟ್ರವಾಗಲಿದೆ. ಸಾಧು ಸಂತರ ಮಾರ್ಗದರ್ಶನದಲ್ಲಿ ಒಗ್ಗಟ್ಟಿನಿಂದ ರಾಷ್ಟ್ರಕಟ್ಟುಲು ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.