ಕೇಂದ್ರ ಸರ್ಕಾರದ ನಕಾರಾತ್ಮಕ ಅಂಶಗಳು ಎಲ್ಲೂ ಪ್ರಚಾರವಾಗುತ್ತಿಲ್ಲ. ಪ್ರಧಾನಮಂತ್ರಿಗಳು ನಿತ್ಯ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ದಿನವೂ ಪ್ರಚಾರದಲ್ಲಿರುತ್ತಾರೆ. ಇದಕ್ಕಾಗಿಯೇ ಕೇಂದ್ರ ₹6.50 ಸಾವಿರ ಕೋಟಿ ಖರ್ಚು ಮಾಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಪಾದಿಸಿದರು.
ಬಳ್ಳಾರಿ (ಫೆ.12): ಕೇಂದ್ರ ಸರ್ಕಾರದ ನಕಾರಾತ್ಮಕ ಅಂಶಗಳು ಎಲ್ಲೂ ಪ್ರಚಾರವಾಗುತ್ತಿಲ್ಲ. ಪ್ರಧಾನಮಂತ್ರಿಗಳು ನಿತ್ಯ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ದಿನವೂ ಪ್ರಚಾರದಲ್ಲಿರುತ್ತಾರೆ. ಇದಕ್ಕಾಗಿಯೇ ಕೇಂದ್ರ ₹6.50 ಸಾವಿರ ಕೋಟಿ ಖರ್ಚು ಮಾಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಿದರೆ ಅವರಿಗೆ ಪ್ರಚಾರದ ಅವಶ್ಯಕತೆ ಇಲ್ಲ. ಆದರೆ, ಕೆಲಸ ಮಾಡದೆ ಬರೀ ಪ್ರಚಾರದಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಚರ್ಚೆಯಾಗಬೇಕು. ಚರ್ಚೆ ಮಾಡಲು ಕೇಂದ್ರ ಸಿದ್ಧವಿಲ್ಲ ಎಂದು ದೂರಿದರು.
ಸುಪ್ರೀಂ ಸೂಚಿಸಿದ ಜಾಗದಲ್ಲಿ ಮಂದಿರವಿಲ್ಲ: ಕಳೆದ ಬಾರಿ ಪುಲ್ವಾಮ ದಾಳಿಯಿಟ್ಟುಕೊಂಡು ಚುನಾವಣೆ ಎದುರಿಸಿದ ಬಿಜೆಪಿ, ಬಳಿಕ ಆ ಕುರಿತ ಚರ್ಚೆಯನ್ನೇ ಮಾಡಲಿಲ್ಲ. ಕಳೆದ 9 ವರ್ಷಗಳ ಕಾಲ ಶ್ರೀರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಿಲ್ಲ. ಇದೀಗ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ. ಅವರ ಕಾರ್ಯಕ್ರಮಗಳ ಬಗ್ಗೆ ಅವರಿಗೇ ನಂಬಿಕೆ ಇಲ್ಲ ಎಂದು ಟೀಕಿಸಿದರು.
ರಾಮಮಂದಿರ ತೀರ್ಪು ಭಾರತದ ಜಾತ್ಯತೀತತೆ ಪ್ರತಿಬಿಂಬ: ಅಮಿತ್ ಶಾ
ದೇಶದ ಬಹುತೇಕ ಬಿಜೆಪಿ ನಾಯಕರು ಹಿಂದೂ -ಮುಸ್ಲಿಂ ಎಂದು ಮಾತನಾಡುತ್ತಿದ್ದಾರೆಯೇ ವಿನಃ ದೇಶದ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಬುಲೆಟ್ ಟ್ರೇನ್ ಬಿಡುವುದಾಗಿ ಪ್ರಧಾನಿಯವರು ಹೇಳಿದ್ದರು. ಈ ವರೆಗೂ ಬುಲೆಟ್ ಟ್ರೇನ್ ಬರಲಿಲ್ಲ. ನಾವು ಟಿಕೆಟ್ ತೆಗೆದುಕೊಂಡು ಟ್ರೇನ್ ಎದುರು ನೋಡುತ್ತಿದ್ದೇನೆ ಎಂದು ಟೀಕಿಸಿದರಲ್ಲದೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕರ್ನಾಟಕವನ್ನು ತಾಲಿಬಾನ್‌ಗೆ ಹೋಲಿಸಿದ್ದರು. ಆಗ ಯಾರೂ ಖಂಡಿಸಲಿಲ್ಲ. ಕಾಂಗ್ರೆಸ್ ಎಂದಾಕ್ಷಣ ಮಾಧ್ಯಮಗಳ ಎದುರು ಬಿಜೆಪಿ ನಾಯಕರು ಪ್ರತ್ಯಕ್ಷವಾಗಿಬಿಡುತ್ತಾರೆ ಎಂದು ಬಿಜೆಪಿ ನಾಯಕರ ನಡೆಯನ್ನು ಖಂಡಿಸಿದರು.
ಬಳ್ಳಾರಿ ಅಭ್ಯರ್ಥಿ ಗೆಲುವು ಖಚಿತ: ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇವೆ. ಬಳ್ಳಾರಿ ಲೋಕಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಯಾರಿಗೇ ಟಿಕೆಟ್ ಕೊಟ್ಟರೂ ಗೆಲುವಿಗೆ ಎಲ್ಲ ನಾಯಕರು ಶ್ರಮಿಸುತ್ತಾರೆ. ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟದ್ದು ಎಂದರು. ಜೀನ್ಸ್ ಅಪೆರಲ್ ಪಾರ್ಕ್‌ಗೆ ಇನ್ನು ನಾಲ್ಕು ವರ್ಷಗಳ ಕಾಲವಕಾಶವಿದೆ. ಖಂಡಿತ ನಿರ್ಮಿಸುತ್ತೇವೆ. ರಾಜ್ಯದಲ್ಲಿ 3.5 ಲಕ್ಷ ಹೊರಗುತ್ತಿಗೆ ಕಾರ್ಮಿಕರಿದ್ದು, ಕಾರ್ಮಿಕರ ಹಿತ ಕಾಯುತ್ತಿದ್ದೇವೆ. ಅರ್ಹರಿಗೆ ಕಾರ್ಮಿಕ ಕಾರ್ಡ್‌ಗಳನ್ನು ನೀಡುತ್ತಿದ್ದೇವೆ ಎಂದರು.
ಕೈ ನಾಯಕರ ಮನೆಗಳ ಮೇಲಷ್ಟೇ ದಾಳಿ: ನಗರ ಶಾಸಕರ ಕಚೇರಿ ಹಾಗೂ ಮನೆಗಳ ಮೇಲಿನ ದಾಳಿಗೆ ಸಂಬಂಧಿಸಿದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹತ್ತು ವರ್ಷಗಳಲ್ಲಿ ಬಿಜೆಪಿ ನಾಯಕರ ಮನೆಗಳ ಮೇಲೆ ಇಡಿ- ಐಟಿ- ಸಿಬಿಐ ಮತ್ತಿತರ ದಾಳಿಯಾದ ಉದಾಹರಣೆಗಳಿಲ್ಲ. ದಾಳಿಗಳೇನಿದ್ದರೂ ವಿಪಕ್ಷಗಳ ನಾಯಕರಿಗೆ ಸೀಮಿತ. ಇದು ಹೊಸದಲ್ಲ ಎಂದರು.
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವಿಲ್ಲ: ಸಚಿವ ಈಶ್ವರ ಖಂಡ್ರೆ
ರಣಾವತ್ ಹೇಳಿಕೆ ಚರ್ಚೆ ಯಾಕಾಗಲಿಲ್ಲ?: ಬಿಜೆಪಿಯ ಕಂಗನಾ ರಣಾವತ್ ಅವರು ಚೀನಾದವರು 50 ಕಿಮೀ ಒಳಗೆ ಬಂದಿದ್ದಾರೆ ಎಂದರು. ಭಿಕ್ಷೆಯಿಂದ ಸ್ವಾತಂತ್ರ್ಯ ಬಂದಿದೆ ಎಂದರು. ಆದರೆ, ಯಾವುದೇ ಚರ್ಚೆಗಳಾಗಲಿಲ್ಲ. ಈಶ್ವರಪ್ಪ ಅವರು ಏನು ಮಾತನಾಡಿದರೂ ಚರ್ಚೆಯಾಗುವುದಿಲ್ಲ. ಆದರೆ, ಕಾಂಗ್ರೆಸ್‌ನವರು ಮಾತನಾಡಿದರೆ ಮಾತ್ರ ಚರ್ಚೆಯಾಗುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಸಚಿವ ಲಾಡ್ ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರಿಗೆ ಕೇಂದ್ರದವರು ಭೇಟಿಯಾಗಲು ಅವಕಾಶ ನೀಡಿಲ್ಲ. ನಮ್ಮ ತೆರಿಗೆ ಹಣವನ್ನು ನಾವು ಕೇಳುವುದು ತಪ್ಪಾ? ಇದಕ್ಕಾಗಿ ನಾವು ಹೋರಾಟ ಮಾಡಬಾರದೇ ಎಂದು ಕೇಳಿದರು. ಲೋಕಸಭಾ ಚುನಾವಣೆ ಬಳಿಕವೂ ಗ್ಯಾರಂಟಿ ಕಾರ್ಯಕ್ರಮ ಮುಂದುವರಿಯುತ್ತವೆ. ರದ್ದಾಗುತ್ತವೆ ಎಂಬುದು ಸುಳ್ಳು ಎಂದರು.