
ಅಳ್ನಾವರ (ಅ.05): ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕಕಕ್ಕೆ ಮಾತ್ರವಲ್ಲದೆ ದೇಶಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಸಚಿವ ಸಂತೋಷ್ ಲಾಡ್, ದೇಶವನ್ನು ಮಾರಾಟದ ಹಂತಕ್ಕೆ ಬಿಜೆಪಿ ತಂದು ನಿಲ್ಲಿಸಿದೆ ಎಂದು ಕಿಡಿಕಾರಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ ಸಾಲ, ಬಂಗಾರ, ದಿನಗೂಲಿ ವ್ಯವಸ್ಥೆ ಹಾಗೂ ಡಾಲರ್ ಹೆಚ್ಚಳದಿಂದ ದೇಶವನ್ನು ಮಾರಾಟಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ದೂರಿದರು.
ಕೇಂದ್ರ ಸರ್ಕಾರವೇ ಜಿಎಸ್‌ಟಿ ಹೆಚ್ಚಿಸಿ ಇದೀಗ ತಾವೇ ಕಡಿಮೆ ಮಾಡುವ ಮೂಲಕ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಜಿಎಸ್‌ಟಿ ಆರಂಭದಿಂದ ಈ ವರೆಗೆ ಪ್ರತಿ ತಿಂಗಳು ₹ 1.27 ಲಕ್ಷ ಕೋಟಿಗೂ ಅಧಿಕ ಕ್ರೋಡೀಕರಣವಾಗಿದೆ. ಅದರಲ್ಲಿ ಶೇ.60ರಷ್ಟು ಬಡವರು ಜಿಎಸ್‌ಟಿ ಕಟ್ಟಿದ್ದಾರೆ. ಇದರಿಂದ ಒಳಹರಿವಿನ ಸಹಾಯಧನ ಯಾವುದು ಇಲ್ಲ ಎಂದಿರುವ ಸಚಿವರು, ಮತಗಳ್ಳತನ, ಭ್ರಷ್ಟಾಚಾರ, ಕಾರ್ಯಕ್ಷಮತೆ ಇಲ್ಲದೆ ಇರುವುದು ಹಾಗೂ ವಿದೇಶದಲ್ಲಿ ಭಾರತಕ್ಕೆ ಆಗುತ್ತಿರುವ ಅನ್ಯಾಯ ಮುಚ್ಚಿಡಲು ಜಿಎಸ್‌ಟಿ ಕಡಿಮೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಮುಖ್ಯಮಂತ್ರಿ ಬದಲಾವಣೆಗೆ ಕುರಿತು ಕೇಳಿದ ಪ್ರಶ್ನೆಗೆ, ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹವಾಗಿದೆ. ಆಡಳಿತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ಲಾಡ್ ಸ್ಪಷ್ಟಪಡಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಶ್ರೀಕಾಂತ ಗಾಯಕವಾಡ, ವಶಿಂ ಪಠಾಣ, ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ, ಅನ್ವರಖಾನ್ ಬಾಗೇವಾಡಿ ಸೇರಿದಂತೆ ಇತರರು ಇದ್ದರು.
ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಸ್ವ-ಸಹಾಯ ಗುಂಪುಗಳ ಮಹಿಳೆಯರೆ ನಿರ್ವಹಿಸಲು ಅವಕಾಶವಾಗುವಂತೆ ಅಕ್ಕ ಕೆಫೆ ರೂಪಿಸಲಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದು ದೊಡ್ಡ ಕೊಡುಗೆ ನೀಡಲಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಹತ್ತಿರದ ಕಟ್ಟಡದಲ್ಲಿ ಕಬ್ಬೆನೂರು ಗ್ರಾಮದ ಕಾಮಧೇನು ಮಹಿಳಾ ಸ್ವ-ಸಹಾಯ ಸಂಘ ಆರಂಭಿಸಿರುವ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಜೀವನೋಪಾಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ರಾಜ್ಯ ಸರ್ಕಾರ ಅಕ್ಕ ಕೆಫೆಯನ್ನು ಬಜೆಟ್‌ನಲ್ಲಿ ಘೋಷಿಸಿದೆ. ಸರ್ಕಾರದ ಆದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟಕುವ ದರದಲ್ಲಿ ಒದಗಿಸಲು ಮಹಿಳೆಯರೇ ನಡೆಸುವ 50 ಕೆಫೆ ಸಂಜೀವಿನಿ (ಅಕ್ಕ ಕೆಫೆ) ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ. ಅದರಂತೆ ಜಿಲ್ಲಾ ಕೇಂದ್ರ ಸ್ಥಾನ ಮತ್ತು ಎಲ್ಲ ತಾಲೂಕು ಕೇಂದ್ರ ಸ್ಥಾನಗಳಲ್ಲಿ ಅಕ್ಕ ಕೆಫೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.