
ಮಹಾಲಿಂಗಪುರ (ಅ.05): ಜಗದ್ಗುರುಗಳು, ಪೂಜ್ಯರನ್ನು ಎಂದಾದರೂ ಉಚ್ಚಾಟನೆ ಮಾಡಲಿಕ್ಕೆ ಆಗುತ್ತದಾ? ಅವರಿಗೆ ಭಕ್ತರೇ ಆಸ್ತಿ, ಭಕ್ತರೇ ರಿಜಿಸ್ಟ್ರಾರ್, ಭಕ್ತರೇ ಉತಾರ್, ಅವರೇ ಹಕ್ಕುಪತ್ರ. ಇನ್ನು ಮುಂದೆ ಯಾರೂ ಗುರುಗಳನ್ನು ಪೀಠದಿಂದ ಉಚ್ಚಾಟನೆ ಮಾಡಿದ್ದಾರೆ ಅನ್ನಬೇಡಿ. ಉಚ್ಚಾಟನೆ ಮಾಡುವ ಪವರ್ ಅವರಿಗಿಲ್ಲ. ಆ ಪವರ್ ನಿಮಗಿದೆ. ಸ್ವಾಮೀಜಿಗಳು ಅಂತಹದ್ದೇನು ಕೆಟ್ಟ ಕೆಲಸ ಅವರು ಮಾಡಿಲ್ಲ. ಸಮಾಜ ಕೂಡಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಯತ್ನಾಳ ಟ್ರಸ್ಟ್‌ನವರಿಗೆ ತಿರುಗೇಟು ನೀಡಿದರು.
ಮದಭಾಂವಿಯ ಸಮಾವೇಶದಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಏನೂ ಸುಡುಗಾಡು ಇರಲಿಲ್ಲ. ಪೀಠದಲ್ಲಿನ ಪಂಕಾ ಹೇಗೆ ತಿರುಗುತ್ತಿತ್ತು. ಸ್ಪ್ರಿಂಗ್ ಹೋಗಿದ್ದ ಒಂದು ಸೋಫಾ ಇತ್ತು. ಅದರ ಮೇಲೆ ಕೂತರೆ ತಗ್ಗಿನಲ್ಲಿ ಕೂತಂತೆ ಆಗಿತ್ತು. ಎಬ್ಬಿಸಲಿಕ್ಕೆ ಇಬ್ಬರು ಜನ ಬೇಕಾಗಿತ್ತು. ನಾನೇ ನೋಡಿ ಬೇರೆ ಸೋಫಾ ಸೆಟ್ ಕೊಟ್ಟು ಕಳಿಸಿದ್ದೇನೆ. ಮಠದಲ್ಲಿ ಡೈನಿಂಗ್ ಟೇಬಲ್ ಇಲ್ಲ, ಒಳ್ಳೆಯ ಮಂಚ ಇಲ್ಲ. ಎಸಿ ಇಲ್ಲ, ಮಚ್ಛರದಾನಿಗೆ ತೂತುಗಳು ಬಿದ್ದಿವೆ. ಅಂತಹ ಮಠದಲ್ಲಿ ಸ್ವಾಮೀಜಿಗಳು ಇದ್ದರು. ಅಂತಹ ಸ್ವಾಮೀಜಿಗಳನ್ನು ಇವಾಗ ಉಚ್ಚಾಟನೆ ಮಾಡಿದ್ದಾರೆ. ಉಚ್ಚಾಟನೆ ಮಾಡಿದವರ ಸೊಂಡಿ ನೋಡಿ ಹೇಗಿದೆ ಎಂದು ಮಾತಿನಿಂದ ತಿವಿದರು.
ನಾಳೆ ಸತ್ತ ಮೇಲೆ ನಮ್ಮನ್ನು ಗೋರಿಯಲ್ಲಿ ಇಡುತ್ತಾರಾ? ಯಾರೋ ಕೊಟ್ಟ ಆಸ್ತಿ, ಯಾರೋ ಕುಟುಂಬದವರ ಅಡಳಿತ. ಪೀಠದಿಂದ ಉಚ್ಚಾಟನೆ ಮಾಡಿದರೆ ನಾವೇನು ತಲೆಕೆಡಿಸಿಕೊಳ್ಳುವುದು ಅವಶ್ಯಕತೆ ಇಲ್ಲ. ಸಾಧುಗೆ ಸಂತನಿಗೆ ಆಸ್ತಿ ವ್ಯಾಮೋಹವೇ ಇರಬಾರದು. ನಾವು ಸಿದ್ದೇಶ್ವರ ಸ್ವಾಮೀಜಿಗಳನ್ನು ನೋಡಿದ್ದೇವೆ. ಅವರ ಬಟ್ಟೆಗೆ ಪಾಕೆಟ್ ಇರಲಿಲ್ಲ. ಬಟ್ಟೆ ಮೇಲೆ ರಂಧ್ರ ಬಿದ್ದರೆ ತಾವೇ ಹೊಲಿದುಕೊಳ್ಳುತ್ತಿದ್ದರು. ಚಪ್ಪಲಿ ಸವೆದರೂ ಅವುಗಳನ್ನೇ ಬಳಸುತ್ತಿದ್ದರು. ಸ್ವಂತ ಕಾರು ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.
ಸಮಾವೇಶದಲ್ಲಿ ಶಾಸಕ ಸಿದ್ದು ಸವದಿ ಅವರತ್ತ ನೋಡುತ್ತ ಮಾತನಾಡಿದ ಶಾಸಕ ಯತ್ನಾಳ ಸಿದ್ದು ಅಣ್ಣ ಸವದಿ ಅವರು ನನ್ನನ್ನ (ಬಿಜೆಪಿಗೆ) ತೆಗೆದುಕೊಳ್ಳದಿದ್ದರೆ. ನಮ್ಮದೇ ಹೊಸ ಭಗವಾ ಝೇಂಡಾ ಪಕ್ಷ ರಚನೆ ಆಗಲಿದ್ದು, ರಾಜ್ಯದಲ್ಲಿ ನನ್ನ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ನಮ್ಮ ಜೊತೆಗೆ ನೀವು ಬರದಿದ್ದರೆ. ನಾವು ಪ್ರಮಾಣವಚನ ಸ್ವೀಕಾರ ಮಾಡುವುದನ್ನುಟಿವಿ ಒಳಗೆ ನೋಡಬೇಕಾಗುತ್ತದೆ ಎಂದು ಹಾಸ್ಯ ಚಟಾಕೆ ಹಾರಿಸಿದ ಅವರು, ಪ್ರಮಾಣ ವಚನ ದಿವಸ 11 ಜೆಸಿಬಿಗಳ ಪೂಜೆಯಾಗುತ್ತದೆ. ದೇಶದ ವಿರುದ್ಧ ಮಾತನಾಡಿದರೆ ಯೋಗಿ ಅಣ್ಣನ ಹಾಗೆ ಕ್ರಮ ಆಗಲಿದೆ. ಅಭಿವೃದ್ಧಿಗೂ ಜೆಸಿಬಿ ಬೇಕೇ ಬೇಕಲ್ಲ. ಕೆನಾಲ್ ತೋಡಲೂ ಜೆಸಿಬಿ ಬೇಕು. ರಾಜ್ಯದಲ್ಲೂ ಯೋಗಿ ಮಾದರಿ ಜೆಸಿಬಿ ಘರ್ಜನೆಯ ಉದಾಹರಣೆಯನ್ನು ಯತ್ನಾಳ ನೀಡಿದರು. ಇನ್ನು ಮುಂದೆ ರಾಜ್ಯದಲ್ಲಿ ಹಣದ ಮೇಲೆ ಚುನಾವಣೆ ನಡೆಯುವುದಿಲ್ಲ. ಎಲ್ಲರ ಕಡೆ ಹಣ ತೆಗೆದುಕೊಂಡು ಜನರು ಮಾಡೋದನ್ನೇ ಮಾಡುತ್ತಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.