ಬಿಜೆಪಿಯಲ್ಲಿ ಅನ್ಯಾಯ, ಬಿಎಸ್‌ವೈಗೆ ಆದ ಸ್ಥಿತಿ ವಿಜಯೇಂದ್ರನಿಗೂ ಬರಲಿದೆ: ಸಚಿವ ತಿಮ್ಮಾಪುರ

By Kannadaprabha NewsFirst Published Nov 26, 2023, 7:48 AM IST
Highlights

ಬಿಜೆಪಿಯಲ್ಲಿ ಸಾಕಷ್ಟು ನಾಯಕರಿಗೆ ಅನ್ಯಾಯಮಾಡಿದ್ದು, ನಮ್ಮ ಯಡಿಯೂರಪ್ಪ ಸಾಹೇಬರನ್ನು ಈ ಮುಂಚೆ ಯಾವ ರೀತಿಯಾಗಿ ಪಕ್ಷವು ನಡೆಸಿಕೊಂಡಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಪರಿಸ್ಥಿತಿ ಅವರ ಮಗನಿಗೂ ಬರಲಿದೆ ಎಂದು ಭವಿಷ್ಯ ನುಡಿದ ಸಚಿವ ಆರ್‌.ಬಿ.ತಿಮ್ಮಾಪುರ 

ಬಾಗಲಕೋಟೆ(ನ.26):  ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಕೆ ಕುರಿಯಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಕಷ್ಟು ನಾಯಕರಿಗೆ ಅನ್ಯಾಯಮಾಡಿದ್ದು, ನಮ್ಮ ಯಡಿಯೂರಪ್ಪ ಸಾಹೇಬರನ್ನು ಈ ಮುಂಚೆ ಯಾವ ರೀತಿಯಾಗಿ ಪಕ್ಷವು ನಡೆಸಿಕೊಂಡಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಪರಿಸ್ಥಿತಿ ಅವರ ಮಗನಿಗೂ ಬರಲಿದೆ ಎಂದು ಭವಿಷ್ಯ ನುಡಿದರು.

ಲಿಂಗಾಯತರು, ದಲಿತರು ಎಲ್ಲ ಸರ್ವ ಜನಾಂಗದವರನ್ನು ತುಳಿಯುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಯಾರನ್ನೂ ಸಹ ಅವರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಎಲ್ಲ ಮುಖಂಡರ ಪರಿಸ್ಥಿತಿಯೂ ಬಿಜೆಪಿಯಲ್ಲಿ ಹಾಗೆಯೇ ಇದೆ. ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ವಿ.ಸೋಮಣ್ಣ ಅವರಿಗೆ ಬೇಕೆಂದಲೇ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ, ಕ್ಷೇತ್ರ ಬದಲಿಸಿ ಅವರನ್ನು ಸೋಲಿಸಲಾಗಿದೆ. ಇಂಥ ಪಕ್ಷದಲ್ಲಿ ಇರುವುದು ಎಲ್ಲ ನಾಯಕರಿಗೂ ಬೇಡವಾಗಿದೆ ಎಂದರು.

ಪ್ರಧಾನಿ ಮೋದಿಗೆ ತಾಯಿ ಕರುಳು ಇಲ್ಲ: ಸಚಿವ ತಿಮ್ಮಾಪೂರ

ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಮುಖ್ಯ ಕೆಲಸವಾಗಿದೆ. ತಮ್ಮ ಸ್ವಾರ್ಥ ಸಾಧನೆಗೆ ಬಿಜೆಪಿ ಹೈಕಮಾಂಡ್‌ ಮುಖಂಡರು ಎಲ್ಲರನ್ನೂ ಬಲಿಕೊಡುತ್ತಿದ್ದಾರೆ. ಅಧಿಕಾರದ ಲಾಲಸೆಗೆ ಏನು ಬೇಕಾದರೂ ಮಾಡಲು ಅವರು ಸಿದ್ಧರಾಗಿದ್ದಾರೆ ಎಂದು ಆರೋಪಿಸಿದರು.

ನಮ್ಮ ರಾಜ್ಯದ ಜನ ಬುದ್ಧಿವಂತರಾಗಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕಪಾಠ ಕಲಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಮಣ್ಣುಮುಕ್ಕಿಸಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಲಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಕಾಲೆಳೆದ ಸಿಎಂ ಸಿದ್ದರಾಮಯ್ಯ: ಕಾರಣವೇನು?

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನರೇಂದ್ರ ಮೋದಿ ಪ್ರಚಾರಕ್ಕೆ ಮತ್ತು ರಾಜಕಾರಣ ಮಾಡಲು ರಾಜ್ಯಕ್ಕೆ ಬರುತ್ತಾರೆ. ಆದರೆ, ಈಗ ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ ಅವರು ಭೇಟಿ ನೀಡುತ್ತಿಲ್ಲ. ಮಳೆ ಹಾನಿ ಪರಿಹಾರ ನೀಡಲೂ ಬರಲಿಲ್ಲ ಎಂದು ವ್ಯಂಗ್ಯವಾಡಿದರು.

ಡಿಕೆಶಿ ನಮ್ಮ ಲೀಡರ್: ತಿಮ್ಮಾಪುರ

ಡಿಸಿಎಂ ಡಿ.ಕೆ.ಶಿವಕುಮಾರ ನಮ್ಮ ಲೀಡರ್. ಬಿಜೆಪಿಯವರು ಕುತಂತ್ರದಿಂದ ಅವರ ತೇಜೋವಧೆ ಮಾಡಲು ಹೊರಟಿದ್ದಾರೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು. ವಿಧಾನಸಭಾ ಅಧ್ಯಕ್ಷರ ಅನುಮತಿ ಇಲ್ಲದೇ ಹಿಂದಿನ ಸರ್ಕಾರ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಆದೇಶಿಸಿತ್ತು. ಹಣಕಾಸಿನ ವಿಚಾರವಾಗಿದ್ದರೇ ಇಡಿ ತನಿಖೆಗೆ ವಹಿಸಬೇಕಿತ್ತು. ಆದರೆ, ಡಿ.ಕೆ.ಶಿವಕುಮಾರ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರು ಕುತಂತ್ರ ನಡೆಸಿದ್ದರು ಎಂದು ದೂರಿದರು.

click me!