ಕಾವೇರಿ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಮೌನ ಸರಿಯಲ್ಲ. ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಕೂಡಲೇ ಸಮಸ್ಯೆ ಪರಿಹರಿಸುವ ಕಾರ್ಯವನ್ನು ಅವರು ಮಾಡಬೇಕಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಹುಬ್ಬಳ್ಳಿ (ಸೆ.25): ಕಾವೇರಿ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಮೌನ ಸರಿಯಲ್ಲ. ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಕೂಡಲೇ ಸಮಸ್ಯೆ ಪರಿಹರಿಸುವ ಕಾರ್ಯವನ್ನು ಅವರು ಮಾಡಬೇಕಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಇಲ್ಲಿನ ಹೊಸೂರು ಬಸ್ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏಕೆ ಹಿಂದೆ ಇಂಥ ಸಮಸ್ಯೆಗಳಾದಾಗ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಿಲ್ವಾ? ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಒಂದು ಸಮರ್ಪಕವಾದ ನಿರ್ಣಯ ಕೈಗೊಳ್ಳಬಹುದು. ಅದ್ಯಾಕೆ ಪ್ರಧಾನಿಗಳು ಈ ವಿಷಯದಲ್ಲಿ ಮೌನ ವಹಿಸಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯದ ಸಂಸದರೂ ಈ ಕುರಿತು ಮಾತನಾಡುತ್ತಿಲ್ಲ. ಏಕೆ ಎಂಬುದನ್ನು ಅವರನ್ನೇ ಕೇಳಿ ಎಂದರು.
ಶಾಂತಿಯುತ ಬಂದ್‌ಗೆ ಮನವಿ: ಕರ್ನಾಟಕದಲ್ಲಿ ನೆಲ, ಜಲ, ಭಾಷೆ ವಿಷಯದಲ್ಲಿ ಅನ್ಯಾಯವಾದಾಗ ಬಂದ್, ಪ್ರತಿಭಟನೆ ಸಹಜ. ಬಂದ್ ಮಾಡಲಿ ಆದರೆ, ಆಸ್ತಿ-ಪಾಸ್ತಿ ನಷ್ಟವಾಗದಂತೆ ಬಂದ್ ಮಾಡುವಂತೆ ಮನವಿ ಮಾಡುವೆ ಎಂದರು. ಕಾವೇರಿ ವಿಚಾರದಲ್ಲಿ ಸರ್ಕಾರದಿಂದ ತಪ್ಪು ಹೆಜ್ಜೆ ಇಟ್ಟಿದೆ ಎಂಬುದಕ್ಕೆ ಉತ್ತರಿಸಿ, ನಾವು ಯಾವುದೇ ತಪ್ಪು ಹೆಜ್ಜೆ ಇಟ್ಟಿಲ್ಲ. ಮಳೆ ಬಾರದೆ ಇದ್ದರೆ ನಮ್ಮ ತಪ್ಪಾ? ಅದು ಪ್ರಕೃತಿ ವಿಕೋಪ. ಕಳೆದ ಬಾರಿ 600 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಯಿತು. ನಮ್ಮ ಬಳಿ ನೀರು ಇಲ್ಲದಿರುವುದು ಸುಪ್ರೀಂ ಕೋರ್ಟಿಗೆ ಗೊತ್ತಿಲ್ಲವೇ? ಮೊದಲಿನಿಂದಲೂ ಪ್ರತಿವರ್ಷ ಕನಿಷ್ಠ ಪ್ರಮಾಣದ ನೀರು ಹರಿದು ಹೋಗುತ್ತದೆ ಅಷ್ಟೆ ಎಂದರು.
ಕಾವೇರಿದ ಕಾವೇರಿ ಕಿಚ್ಚು: ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ?
ಬಂದ್‌ನ ಸ್ವರೂಪ ನೋಡಿ ಬಸ್ ಓಡಿಸುವ ಬಗ್ಗೆ ನಿರ್ಧಾರ: ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಕರೆನೀಡಲಾಗಿರುವ ಬೆಂಗಳೂರು ಬಂದ್ ದಿನದಂದು ಸಾರಿಗೆ, ಕೆಎಸ್ಸಾರ್ಟಿಸಿ ಬಸ್ ಸಂಚಾರ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಬಂದ್ ಸ್ವರೂಪ ನೋಡಿಕೊಂಡು ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಹಿಂದೆಯೂ ರಾಜ್ಯದ ನೀರು, ಭಾಷೆ ಸಮಸ್ಯೆ ಕುರಿತು ಬಂದ್ ಕರೆ ಕೊಟ್ಟಾಗ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಈ ಬಾರಿ ಏನಾಗುತ್ತೋ ನೋಡೋಣ ಎಂದು ತಿಳಿಸಿದರು. ಬಸ್ ರಸ್ತೆಗಿಳಿಸೋ ಕುರಿತು ಈಗಲೇ ಏನೂ ಹೇಳಲಿಕ್ಕಾಗಲ್ಲ. ಹೋರಾಟ ಯಾವ ರೀತಿ ಇರುತ್ತದೆ ಎಂಬುದರ ಮೇಲೆ ಅದು ನಿರ್ಧಾರವಾಗಲಿದೆ. ಬಂದ್ ಕುರಿತು ನಿರ್ಧರಿಸಲು ಯೂನಿಯನ್‌ಗಳಿವೆ, ಅವರು ಬೆಂಬಲ ವ್ಯಕ್ತಪಡಿಸಬೇಕೋ, ಬೇಡವೋ ಎಂದು ತೀರ್ಮಾನ ಮಾಡುತ್ತಾರೆ ಎಂದರು.