ಸಚಿವ ರಾಜಣ್ಣ ಪುತ್ರ ರಾಜೇಂದ್ರ ಸಿಎಂ ಭೇಟಿಯಾಗಿ ಹನಿಟ್ರ್ಯಾಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ಹೈಕಮಾಂಡ್ ನಾಯಕರು ಸಹ ಈ ಬಗ್ಗೆ ಮಾಹಿತಿ ಪಡೆದಿದ್ದು, ತನಿಖೆಗೆ ಸೂಚಿಸಿದ್ದಾರೆ.
ಬೆಂಗಳೂರು: ಹನಿಟ್ರ್ಯಾಪ್ ವಿಚಾರ ಕುರಿತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ನೀಡಿ ಇಡೀ ಬೆಳವಣಿಗೆಯ ವಿವರ ನೀಡಿದ್ದಾರೆ. ಈ ವೇಳೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ಅದರಂತೆ ಎರಡ್ಮೂರು ದಿನಗಳಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ದೂರು ನೀಡಲು ನಿರ್ಧರಿಸಿರುವುದಾಗಿ ರಾಜೇಂದ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದರ ನಡುವೆ ಹನಿಟ್ರ್ಯಾಪ್ ಕುರಿತು ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಲು ಸಚಿವ ರಾಜಣ್ಣ ಮತ್ತು ರಾಜೇಂದ್ರ ಜತೆಗೂಡಿ ಶೀಘ್ರ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ, ಹನಿಟ್ರ್ಯಾಪ್ ವಿಚಾರವಾಗಿ ತನಿಖೆ ನಡೆಯಬೇಕು ಎಂಬುದನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಮುಖ್ಯಮಂತ್ರಿಗಳಿಗೆ ತೋರಿಸಿದ್ದೇನೆ. ಅದಕ್ಕೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಹಿರಿಯ ವಕೀಲರೊಂದಿಗೆ ಚರ್ಚಿಸಿ, ಸೋಮವಾರ ಅಥವಾ ಮಂಗಳವಾರ ಮತ್ತೊಮ್ಮೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ನಂತರ ಸಾಕ್ಷಿ ಸಹಿತ ಡಿಜಿ ಅವರಿಗೆ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ದಲಿತ ನಾಯಕನ ತುಳಿಯಲೆತ್ನ:
ರಾಜಣ್ಣ ದಲಿತ ಸಮುದಾಯದ ನಾಯಕ. ರಾಜ್ಯಾದ್ಯಂತ ಅವರದ್ದೇ ಆದ ಛಾಪು ಇದೆ. ದಲಿತ ನಾಯಕನನ್ನು ತುಳಿಯಬೇಕು ಎಂಬ ಷಡ್ಯಂತ್ರ ನಡೆಸಲಾಗಿದೆ. ತಮ್ಮ ಮೇಲೆ ಹನಿಟ್ರ್ಯಾಪ್ ಮಾಡಿದ್ದಾರೆಂಬ ಅನುಮಾನವನ್ನೂ ರಾಜಣ್ಣ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುವಂತೆ ನನಗೆ ಸೂಚಿಸಿದ್ದರು. ಅದರಂತೆ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದರು.
ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಬೇಕು ಎಂದು ಮೂರು ತಿಂಗಳಿನಿಂದ ಪ್ರಯತ್ನ ನಡೆಯುತ್ತಿದೆ. ಪ್ರತಿದಿನವೂ ಟ್ರ್ಯಾಪ್ ಮಾಡಲು ಬರುತ್ತಿರಲಿಲ್ಲ. ಯಾವಾಗಲೋ ಒಮ್ಮೆ ಬರುತ್ತಿದ್ದರು. ಸರ್ಕಾರಿ ಮನೆಯಲ್ಲಿ ಸಿಸಿ ಟಿವಿ ಕ್ಯಾಮರಾ ಇಲ್ಲದ ಕಾರಣ ನಿಖರವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ತುಮಕೂರಿನ ಕ್ಯಾತಸಂದ್ರದ ಮನೆಗೆ ಬಂದಿಲ್ಲ, ಮಧುಗಿರಿಯ ಮನೆಗೆ ಬಂದಿದ್ದರು ಎನ್ನುವ ಮಾಹಿತಿಯಿದೆ. ಆದರೆ, ಯಾರು ಈ ಕೃತ್ಯ ಮಾಡಿದ್ದಾರೆಂಬುದು ತನಿಖೆಯಿಂದಲೇ ತಿಳಿಯಬೇಕು ಎಂದು ಹೇಳಿದರು.
ರಾಜಕೀಯವಾಗಿ ತುಳಿಯಬೇಕೆಂದರೆ ಹೋರಾಟ ಮಾಡಬಹುದು. ಆದರೆ, ಈ ರೀತಿ ಯಾರೂ ಮಾಡಬಾರದು. ರಾಜಣ್ಣ ಅಂತಲ್ಲ, ಮುಂದೆಯೂ ಈ ರೀತಿ ಯಾರ ಮೇಲೂ ಆಗಬಾರದು ಎಂಬ ಕಾರಣಕ್ಕಾಗಿ ತನಿಖೆ ನಡೆಯಬೇಕು. ಅದಕ್ಕಾಗಿ ದೂರು ನೀಡುತ್ತೇನೆ ಎಂದು ತಿಳಿಸಿದರು.
ಮಾಹಿತಿ ಪಡೆದುಕೊಂಡ ಹೈಕಮಾಂಡ್
ಬೆಂಗಳೂರು : ದೇಶಾದ್ಯಂತ ಸದ್ದು ಮಾಡಿರುವ ಹನಿಟ್ರಾಪ್ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಪಡೆದಿದೆ. ಸಹಕಾರ ಸಚಿವ ರಾಜಣ್ಣ ಹನಿಟ್ರ್ಯಾಪ್ ವಿಚಾರ ಸದನದಲ್ಲಿ ಚರ್ಚೆಯಾಗಿರುವ ಕುರಿತು ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಕ್ರವಾರ ಕರೆ ಮಾಡಿ ನಡೆದಿರುವ ಘಟನೆಗಳ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ತೀವ್ರ ವಿರೋಧದ ನಡುವೇ ಮುಸ್ಲಿಮರಿಗೆ 4% ಗುತ್ತಿಗೆ ಮೀಸಲು ಮಸೂದೆ ಪಾಸ್, ಗೌರ್ನರ್ ಒಪ್ಪಿದರೆ ಜಾರಿ!
ಜತೆಗೆ, ಇಂತಹ ಗಂಭೀರ ವಿಚಾರ ಸದನದಲ್ಲಿ ಚರ್ಚೆ ಬದಲಾಗಿ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿತ್ತಲ್ಲ ಎಂದು ಉಭಯ ನಾಯಕರಿಗೂ ತಿಳಿಸಿದ್ದಾರೆ ಎನ್ನಲಾಗಿದೆ.
ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ರಾಜಣ್ಣ ಸದನದಲ್ಲಿ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಈ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ಶಾಸಕರು ಶುಕ್ರವಾರ ಸದನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಲ್ಲದೆ, ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸುವಂತೆ ಹೈಡ್ರಾಮಾ ಸೃಷ್ಟಿಸಿದ್ದರು. ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಶುಕ್ರವಾರ ಸಂಜೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಈ ವೇಳೆ, ಸಚಿವ ರಾಜಣ್ಣ ಸದನದಲ್ಲಿ ಹನಿಟ್ರ್ಯಾಪ್ ವಿಷಯ ನೇರವಾಗಿ ಸದನದಲ್ಲಿ ಪ್ರಸ್ತಾಪಿಸುವುದಕ್ಕಿಂತ ಪಕ್ಷದ ವೇದಿಕೆಯಲ್ಲಿ ಮೊದಲು ಚರ್ಚೆಯಾಗಬೇಕಿತ್ತು. ಇಲ್ಲವೇ, ಹೈಕಮಾಂಡ್ ಗಮನಕ್ಕಾದರೂ ಈ ವಿಚಾರ ತರಬಹುದಿತ್ತಲ್ಲ ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ಹನಿಟ್ರ್ಯಾಪ್ ಪ್ರಕರಣ: ಯಾರೇ ಆಗಿದ್ದರೂ ಸುಮ್ಮನೆ ಬಿಡೋಲ್ಲ, ಮಟ್ಠಹಾಕುತ್ತೇವೆ, ಸಿಎಂ ಖಡಕ್ ವಾರ್ನಿಂಗ್!