ನೀರಾವರಿ ಖಾತೆ ಕೈ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ಎಂ.ಬಿ.ಪಾಟೀಲ

By Girish Goudar  |  First Published Jun 4, 2023, 11:44 AM IST

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಜನತೆ ಅಧಿಕಾರ ನೀಡಿದ್ದಾರೆ. ಜನತೆಗೆ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ: ಸಚಿವ ಎಂ.ಬಿ.ಪಾಟೀಲ 


ವಿಜಯಪುರ(ಜೂ.04):  ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಗದ್ದುಗೆ ಹಿಡಿದಿದೆ. ಮತದಾರರು ಸುಭದ್ರ ಸರ್ಕಾರ ನೀಡಿದ್ದಾರೆ. ಬಹಳಷ್ಟು ಜನರು ಅತಂತ್ರ ಸರ್ಕಾರ ನಿರ್ಮಾಣವಾಗುತ್ತದೆ ಎಂದಿದ್ದರು. ಅವರ ನಿರೀಕ್ಷೆಯನ್ನು ರಾಜ್ಯದ ಮತದಾರರು ಹುಸಿಗೊಳಿಸಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ ಎಂದು ಬೃಹತ್‌ ಮತ್ತು ಮಧ್ಯಮ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.

ಶನಿವಾರ ಸಂಜೆ ನಡೆದ ಬೃಹತ್‌ ರೋಡ್‌ ಶೋ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಿಜಯಪುರ ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್‌ ಹಮೀದ್‌ ಮುಶ್ರೀಫ್‌ ಶಾಸಕರಾಗಬೇಕಿತ್ತು. ಆದರೆ ಆಗಲಿಲ್ಲ. ನಾವು ನಮ್ಮ ಪಕ್ಷದ ವರಿಷ್ಠರು ಅವರ ಕೈಬಿಡುವುದಿಲ್ಲ ಎಂದರು.

Latest Videos

undefined

ಶ್ರೀಸಾಮಾನ್ಯರ ಬಸ್‌ ಡಕೋಟಾನಾ?: ನಾರಾಯಣಸ್ವಾಮಿ ಟೀಕೆಗೆ ಸಚಿವ ಎಂ.ಬಿ.ಪಾಟೀಲ್‌ ತಿರುಗೇಟು

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಜನತೆ ಅಧಿಕಾರ ನೀಡಿದ್ದಾರೆ. ಜನತೆಗೆ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ನಾನು ನೀರಾವರಿ ಸಚಿವನಾಗಿದ್ದಾಗ ಹಲವಾರು ನೀರಾವರಿ ಕಾಮಗಾರಿ ಯೋಜನೆ ಮಾಡಿದ್ದೇನೆ. ಈಗ ನಮ್ಮ ಸರ್ಕಾರ ಉಳಿದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂದರು.

ನಾನು ಬಯಸಿ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವನಾಗಿದ್ದೇನೆ. ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕಿದೆ. ಬೆಂಗಳೂರು ಹೊರತುಪಡಿಸಿ, ಇತರೆ ಭಾಗ ಹಾಗೂ ವಿಜಯಪುರ ಜಿಲ್ಲೆಗೆ ಕೈಗಾರಿಕೆಗಳನ್ನು ತರುತ್ತೇನೆ. ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುತ್ತೇವೆ. ದೇಶದಲ್ಲೇ ರಾಜ್ಯ ನಂಬರ್‌ ಒನ್‌ ಮಾಡುತ್ತೇವೆ. ವಿಶ್ವದಲ್ಲೆ ರಾಜ್ಯದ ಹೆಸರು ಮಾಡುತ್ತೇವೆ ಎಂದು ಹೇಳಿದರು.

ಕೋಮುಭಾವನೆ ಬಿತ್ತುವ ಕೆಲಸ ನಾಲ್ಕು ವರ್ಷದಲ್ಲಿ ಆಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಎಂ.ಬಿ.ಪಾಟೀಲ ಅವರು, ಎಲ್ಲರೂ ಸಹೋದರತೆಯಿಂದ ಬದುಕಬೇಕಿದೆ. ಜನರ ಬದುಕು ಕಟ್ಟುವ ಕೆಲಸ ಆಗಬೇಕು. ಜನರ ಭಾವನೆ ಕೆರಳಿ, ಸುವ ಕೆಲಸ ಆಗಬಾರದು ಎಂದು ತಿಳಿಸಿದರು.

ನಾಗಠಾಣ ಶಾಸಕ ವಿಠಲ ಕಟಕದೊಂಡ, ಅಬ್ದುಲ್‌ ಹಮೀದ್‌ ಮುಶ್ರೀಫ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಜು ಆಲಗೂರ ಹಾಗೂ ಇತರರು ಇದ್ದರು.

ನೀರಾವರಿ ಖಾತೆ ಕೈ ತಪ್ಪಿದ್ದಕ್ಕೆ ಬೇಸರ

ನೀರಾವರಿ ಖಾತೆ ಕೈ ತಪ್ಪಿದ್ದಕ್ಕೆ ಮಾಧ್ಯಮಗಳ ಎದುರು ಎಂ.ಬಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಎಂ.ಬಿ.ಪಾಟೀಲ್ ನೀರಾವರಿ ಖಾತೆಗಾಗಿ ಬೇಡಿಕೆ ಇಟ್ಟಿದ್ದರು. ನನಗೆ ನೀರಾವರಿ ಸಚಿವನಾಗುವ ಆಸೆ ಇತ್ತು., ರಾಜಕೀಯದಿಂದಾಗಿ ನೀರಾವರಿ ಖಾತೆ ಸಿಗಲಿಲ್ಲ. ಸಿಎಂ ಅವರಿಗೆ ಖಾತೆ ನೀಡುವ ಪರಮಾಧಿಕಾರ ಇರುತ್ತೆ. ಬೇರೆ ಇಲಾಖೆಯ ಜವಾಬ್ದಾರಿವಹಿಸುವಂತೆ ಸಿಎಂ ಸಲಹೆ ನೀಡಿದ್ದರು. ಆದರೆ ನಾನು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಖಾತೆ ತೆಗೆದುಕೊಂಡೆ ಅಂತ ತಿಳಿಸಿದ್ದಾರೆ. 

ಈ ಹಿಂದೆ ಎಂ.ಬಿ.ಪಾಟೀಲ್ ನೀರಾವರಿ ಇಲಾಖೆ ನಿಭಾಯಿಸಿದ್ದರು. ಈ ಬಾರಿಯು ಸಿಎಂ ಸಿದ್ದರಾಮಯ್ಯ ಬಳಿ ನೀರಾವರಿ ಇಲಾಖೆಗಾಗಿಯೇ ಬೇಡಿಕೆ ಇಟ್ಟಿದ್ದರು. ಕೊನೆಗೆ ನೀರಾವರಿ ಖಾತೆ ಡಿಸಿಎಂ ಡಿಕೆಶಿ ಪಾಲಾಗಿದೆ. 
ಸರ್ವಾಜನಾಂಗದ ಶಾಂತಿಯ ತೋಟವನ್ನ ಹದಗೆಡಿಸುವ ಕೆಲಸವನ್ನ ಬಿಜೆಪಿ ಮಾಡಿದೆ. ಜನರ ಬದುಕಿಗೆ ಅವಶ್ಯಕತೆ ಇರದ ಕೆಲಸಗಳನ್ನ ಮಾಡಿದೆ. ಬಡವರ ಬದುಕು ಸುಧಾರಿಸಲು ‌ಹಿಂದಿನ ಸರ್ಕಾರ ಕೆಲಸ ಮಾಡಿಲ್ಲ. ನಾವು ಶಾಂತಿಯ ತೋಟವನ್ನ ಹಾಳಾಗಲು ಬಿಡೋದಿಲ್ಲ ಅಂತ ಹೇಳುವ ಮೂಲಕ ಬಿಜೆಪಿ ವಿರುದ್ಧ ಎಂ.ಬಿ. ಪಾಟೀಲ್‌ ಹರಿಹಾಯ್ದಿದ್ದಾರೆ. 

ಸಿಎಂ 5 ಗ್ಯಾರಂಟಿಗಳನ್ನ ಜಾರಿ ಮಾಡಿದ್ದಾರೆ. ಸಿಎಂ ಹಣಕಾಸಿನ ಪಾಂಡಿತ್ಯ ಹೊಂದಿದ್ದಾರೆ. ದೇಶದಲ್ಲಿ ಹಣಕಾಸಿನ ಪಾಂಡಿತ್ಯ ಹೊಂದಿದ್ದ ಸಿಎಂ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಅಂತ ಹೇಳಿದ್ದಾರೆ. 

ನಾಳೆ ಬೃಹತ್ ಕೈಗಾರಿಕೆ ಇಲಾಖೆ ಮೀಟಿಂಗ್ 

ನಾಳೆ‌ ಮಧ್ಯಾಹ್ನ 3 ಗಂಟೆಗೆ ಬೃಹತ್ ಕೈಗಾರಿಕೆ ಇಲಾಖೆ ಮೀಟಿಂಗ್ ಇದೆ. ವಿಜಯಪುರ ಜಿಲ್ಲೆ ನೀರಾವರಿ ಹಾಗೂ ಉದ್ಯೋಗದಲ್ಲಿ ಅಭಿವೃದ್ಧಿ ಆಗಬೇಕಿದೆ. ದೇಶ ಮಾತ್ರವಲ್ಲ, ಇಡಿ ವಿಶ್ವ ನಮ್ಮ ಕಡೆ ನೋಡುವಂತೆ ಆಗಬೇಕಿದೆ. ಆ ಗತವೈಭವ ಮತ್ತೆ ಬರಲಿದೆ ಅಂತ ಹೇಳಿದ್ದಾರೆ.

ಗೋಹತ್ಯಾ ಕಾಯ್ದೆ ರೈತರಿಗೆ ಅನಕೂಲವಾಗುವಂತೆ ಮಾರ್ಪಾಡು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ‌ ಇಲಾಖೆ ಸಚಿವ ವೆಂಕಟೇಶ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್‌, ಇದು ಸೂಕ್ಷ್ಮ ವಿಚಾರವಾಗಿದ್ದು, ಇದನ್ನು‌ ನಮ್ಮ ಪಕ್ಷ ಹಾಗೂ ವರಿಷ್ಠರು ನಿರ್ಧಾರ ಮಾಡುತ್ತಾರೆ ಅಂತ ಹೇಳಿದ್ದಾರೆ. 

ರಾಜ್ಯದಲ್ಲಿ ಕೆಲವು ಕೈಗಾರಿಕಾ ಪ್ರದೇಶದಲ್ಲಿ ಬೇರೆ ಬೇರೆ ಅಡ್ಡಾಗಳು ಇವೆ, ಎಲ್ಲವನ್ನೂ ತನಿಖೆ ಮಾಡಲಾಗುವುದು. ಕೈಗಾರಿಕೆ ಜಾಗಗಳು ಅದಕ್ಕೆ ಮಾತ್ರ ಬಳಕೆ ಆಗಬೇಕು, ರಿಯಲ್‌ ಎಸ್ಟೇಟ್ ದಂಧೆ ಮಾಡಲು ಬಿಡುವುದಿಲ್ಲ. ಅಕ್ರಮಗಳು ಆಗಿದ್ರೆ ತನಿಖೆ ನಡೆಸಲಾಗುವುದು ಅಂತ ತಿಳಿಸಿದ್ದಾರೆ. 

Vijayapura: ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೆ?: ಎಂ.ಬಿ.ಪಾಟೀಲರೋ? ಶಿವಾನಂದ ಪಾಟೀಲರೋ ಎಂಬ ಕುತೂಹಲ

ಅಹಿಂದ ವರ್ಗದ ನಾಲ್ಕು ಬೇಡಿಕೆಗಳನ್ನು ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಎಲ್ಲ ಜಾತಿ, ಧರ್ಮಗಳಿಗೂ ರಕ್ಷಣೆ ಕೊಡುವ ಕೆಲಸ ನಾವು ಮಾಡುತ್ತೇವೆ. ರಾಜಕೀಯ ಲಾಭಕ್ಕಾಗಿ ದ್ವೇಷ ಬಿತ್ತುವ ಕೆಲಸ ಮಾಡ್ತಾರೆ, ಅದನ್ನು ಖಂಡಿಸುತ್ತೇನೆ. ಇಡಿ ರಾಜ್ಯದಲ್ಲಿ ಒಂದೇ ಒಂದು ಮನೆ ಕಟ್ಟಿಲ್ಲ, ಭಾವನೆಗಳನ್ನು ಕೆರಳಿಸುವ ಕೆಲಸ ಬಿಜೆಪಿ‌ ಮಾಡಿದೆ. ಬಿಜೆಪಿ ಅವಧಿಯಲ್ಲಿ ಆದಂತಹ ಅಕ್ರಮಗಳನ್ನ ತನಿಖೆ ಮಾಡಲಾಗುವುದು. ಕೊರೋನಾ ಸಂದರ್ಭದಲ್ಲಿ ಆಗಿದ್ದು, 40 ಪರ್ಸೆಂಟ್, ನೀರಾವರಿ ಇಲಾಖೆ ಸೇರಿದಂತೆ ಎಲ್ಲವನ್ನೂ ತನಿಖೆಯನ್ನ ಮಾಡಿಸುತ್ತೇವೆ. ಯೋಜನೆಗಳ ಎಷ್ಟಿಮೇಟ್ ಹೆಚ್ಚಳ ಮಾಡುವಂತಹದ್ದು ತನಿಖೆ ಮಾಡಲಾಗುವುದು ಅಂತ ತಿಳಿಸಿದ್ದಾರೆ. 

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಬಿ. ಪಾಟೀಲ್,  ಬಿಜೆಪಿ, ಆರ್ ಎಸ್ ಎಸ್ ಅಜೆಂಡ್ ನಿರ್ಮಿಸಲು ಹೋಗಿದ್ರು, ನಂಜೆಗೌಡ-ಉರಿಗೌಡ ಸೇರಿದಂತೆ ಎಲ್ಲವನ್ನೂ ತೆಗೆದು ಹಾಕಲಾಗುವುದು. ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣ, ಪುಲೆ ಸೇರಿದಂತೆ ಮಹಾನ ನಾಯಕರ ಬಗ್ಗೆ ಸೇರ್ಪಡೆ ಮಾಡಲಾಗುವುದು. ಕೇಸರಿ ಬಣ್ಣ ಬರೀ ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ. ನಮ್ಮ ದೇವಸ್ಥಾನಗಳ ಮೇಲೆ ಕೇಸರಿ ಧ್ವಜವನ್ನೇ ಹಾರಿಸಲಾಗುತ್ತದೆ. ನಮ್ಮ ಮನೆಯಲ್ಲೂ ಕೇಸರಿ ಬಣ್ಣ ಬಳಕೆ ಮಾಡ್ತೀವಿ ಅಂತ ಹೇಳಿದ್ದಾರೆ.

click me!