ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.45 ಮಕ್ಕಳಿಗೆ, ಶೇ.55 ಸರ್ಕಾರಕ್ಕೆ, ಸ್ಯಾಮ್ ಪಿತ್ರೋಡಾ ಸಂಪತ್ತಿನ ಮರು ಹಂಚಿಕೆ ವಿವಾದ

By Suvarna News  |  First Published Apr 24, 2024, 2:05 PM IST

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ವಿದೇಶದ ಉತ್ತರಾಧಿಕಾರ ತೆರಿಗೆ ಮತ್ತು ಆಸ್ತಿ ಹಂಚಿಕೆ ಬಗ್ಗೆ ಮಾತನಾಡಿದ್ದು ಆಸ್ತಿ ಮರುಹಂಚಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


ನವದೆಹಲಿ (ಏ.24): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಅವರು ಉತ್ತರಾಧಿಕಾರ ತೆರಿಗೆ ಬಗ್ಗೆ ನೀಡಿದ ಹೇಳಿಕೆ ಈಗ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. 

ಇದೀಗ ಸಂಪತ್ತಿನ ಮರುಹಂಚಿಕೆ ವಿಚಾರವನ್ನು ಸಮರ್ಥಿಸಿಕೊಂಡಿರುವ  ಸ್ಯಾಮ್ ಪಿತ್ರೋಡಾ ಅವರು  ಅಮೆರಿಕದ ಉತ್ತರಾಧಿಕಾರ ತೆರಿಗೆ (Inheritance Tax) ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ವ್ಯಕ್ತಿಯ ಸಂಪತ್ತಿನ ಮೇಲೆ 55% ತೆರಿಗೆ ಹಾಕಲಾಗುತ್ತದೆ. ವ್ಯಕ್ತಿಯ ಮಕ್ಕಳು, ಕುಟುಂಬಕ್ಕೆ ಕೇವಲ 45 ಪ್ರತಿಶತ  ಆಸ್ತಿಯನ್ನು ಹಂಚಲಾಗುತ್ತದೆ ಎಂದಿದ್ದಾರೆ.

ಏ.26ರಂದು ಭರ್ಜರಿ 32,000 ಕೋಟಿ ರೂ ಮೌಲ್ಯದ ಸರ್ಕಾರಿ ಬಾಂಡ್‌ ಹರಾಜು: ಹಣಕಾಸು ಸಚಿವಾಲಯ

Tap to resize

Latest Videos

ಓರ್ವ ವ್ಯಕ್ತಿ 100 ಮಿಲಿಯನ್‌ ಡಾಲರ್‌ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಆತನ 45 ಪ್ರತಿಶತ ಸಂಪತ್ತು ಮಾತ್ರ ಆತನ ಮಕ್ಕಳಿಗೆ ವರ್ಗಾವಣೆಯಾಗುತ್ತದೆ. ಮಿಕ್ಕಿರುವ 55% ಸಂಪತ್ತು ಸರ್ಕಾರಕ್ಕೆ ಹೋಗುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು. ಇಂತಹ ಯಾವುದೇ ಕಾನೂನು ಭಾರತದಲ್ಲಿ ಇಲ್ಲ. ಯಾರಾದರೂ 10 ಶತಕೋಟಿ ಮೌಲ್ಯದವರು ಮೃತಪಟ್ಟರೆ ಅವರ ಮಕ್ಕಳು ಕೂಡ 10 ಶತಕೋಟಿ ಪಡೆಯುತ್ತಾರೆ. ಮತ್ತು ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಈ ರೀತಿಯ ವಿಷಯಗಳ ಬಗ್ಗೆ ಜನ  ಚರ್ಚಿಸಬೇಕಾದ ಅಗತ್ಯ ಇದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಸಂಪತ್ತಿನ ಹಂಚಿಕೆಯನ್ನು ಉತ್ತಮಗೊಳಿಸುವ ನೀತಿಯನ್ನು ರೂಪಿಸಲು ಮುಂದಾಗಿದೆ. ಭಾರತದಲ್ಲಿ ಕನಿಷ್ಠ ವೇತನ ಇಲ್ಲ. ಬಡವರಿಗೆ ಇಷ್ಟು ಪ್ರಮಾಣದಲ್ಲಿ ಹಣವನ್ನು ನೀಡಬೇಕು ಎಂದು ಕಾನೂನು ತಂದರೆ ಅದು ಸಂಪತ್ತಿನ ಮರು ಹಂಚಿಕೆ. ಇದು ಜನರ ಹಿತಾಸಕ್ತಿಯಾಗಿದೆಯೇ ಹೊರತು ಕೇವಲ ಅತಿ ಶ್ರೀಮಂತರ ಹಿತಾಸಕ್ತಿಯಲ್ಲ ಎಂದು ಅಮೆರಿಕದ ಚಿಕಾಗೋದಿಂದ ವಿಡಿಯೋ ಮೂಲಕ  ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಕಣದಲ್ಲಿ ಕಾಂಗ್ರೆಸ್‌ ಘೋ‍ಷಣೆ ಮಾಡಿರುವ ಸಂಪತ್ತಿನ ಮರುಹಂಚಿಕೆ ವಿಚಾರ ಭರ್ಜರಿಯಾಗಿ ಚರ್ಚೆ ಆಗುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮಲ್ಲಿ ಎಷ್ಟು ಆಸ್ತಿ ಇದೆ, ಎಷ್ಟು ಮನೆಗಳಿವೆ ಎಂದು ವಿಚಾರಿಸಿ ಅವುಗಳಲ್ಲಿ ಒಂದನ್ನು ಕಾಂಗ್ರೆಸ್‌ ತೆಗೆದುಕೊಂಡು ಕಬಳಿಸುತ್ತದೆ, ಮಾತೆಯರ ಮಾಂಗಲ್ಯದ ಮೇಲೂ ಕಾಂಗ್ರೆಸ್‌ ಕಣ್ಣಿಟ್ಟಿದ್ದು, ಅಧಿಕಾರಕ್ಕೆ ಬಂದರೆ ಅದನ್ನು ಮುಸ್ಲಿಮರಿಗೆ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

ಪಿಎಂ ಮೋದಿ ಮತ್ತು ಬಿಜೆಪಿ ಹೇಳಿಕೆಗಳ ಬಗ್ಗೆ ಟ್ವೀಟ್ ಮಾಡಿದ್ದ ಪಿತ್ರೋಡ ಅವರು ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿಯವರು ಮತ್ತು ಬಿಜೆಪಿ ಹರಡುತ್ತಿರುವ ಸುಳ್ಳುಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಸಂಪತ್ತನ್ನು ಅವರಿಂದ ಕಿತ್ತು ಇವರಿಗೆ ಹಂಚುವುದಿಲ್ಲ. ವಿವಿಧ ನೀತಿ, ಯೋಜನೆಗಳ ಮೂಲಕ ಬಡವರಿಗೆ ಸಂಪತ್ತು ಪಡೆಯುವ ಶಕ್ತಿ ಹೆಚ್ಚಿಸಲಾಗುವುದು ಎಂದು ಕಾಂಗ್ರೆಸ್ ಹೇಳುತ್ತಿದೆ.  ನಾನು ಒಬ್ಬ ವ್ಯಕ್ತಿಯಾಗಿ ಅಮೇರಿಕಾದಲ್ಲಿ ಪಿತ್ರಾರ್ಜಿತ ತೆರಿಗೆಯ ಕುರಿತು ಹೇಳಿದ್ದನ್ನು ಗೋದಿ ಮಾಧ್ಯಮಗಳು ತಿರುಚಿರುವುದು ದುರದೃಷ್ಟಕರ. ಈ ಬಗ್ಗೆ ಮೋದಿ ಕಾಮೆಂಟ್‌ಗಳು, ಮಂಗಳಸೂತ್ರ, ಚಿನ್ನ ಕಸಿದುಕೊಳ್ಳುವುದು ಇವೆಲ್ಲ ಅವಾಸ್ತವಿಕವಾಗಿದೆ ಎಂದಿದ್ದರು.

ಇನ್ನು ಪಿತ್ರೋಡಾ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಇದು ಪಿತ್ರೊಡಾ  ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಕಾಂಗ್ರೆಸ್‌ ಪಕ್ಷದ ಅಭಿಪ್ರಾಯವಲ್ಲ ಎಂದು ವಕ್ತಾರ ಜೈರಾಂ ರಮೇಶ್‌ (Jairam Ramesh) ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಚರ್ಚಿಸಲು, ವ್ಯಕ್ತಪಡಿಸಲು ಮುಕ್ತ ಅವಕಾಶವಿದೆ. ಆದರೆ ಅದರ ಅರ್ಥ ಅವರ ಅಭಿಪ್ರಾಯಗಳು ಯಾವಾಗಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹೇಳಿಕೆಯನ್ನು ಪ್ರತಿಬಿಂಬಿಸುತ್ತದೆ  ಎಂದಿದ್ದಾರೆ.

click me!