ಚಾರಿತ್ರ್ಯಹರಣ ಶಾಸಕ ಯತ್ನಾಳ್‌ಗೆ ಶೋಭೆ ತರಲ್ಲ: ಸಚಿವ ಎಂ.ಬಿ.ಪಾಟೀಲ್‌

By Kannadaprabha NewsFirst Published Dec 10, 2023, 8:29 PM IST
Highlights

ಇಸ್ಲಾಂ ಹಾಗೂ ಧರ್ಮಗುರು ಸೈಯ್ಯದ್ ಮೊಹಮ್ಮದ್ ತನ್ವೀರ್‌ ಪೀರಾ ಹಾಶ್ಮಿ ಅವರು ಐಸಿಸ್‌ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ವಿಷಯದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಬೇಕಿಲ್ಲ. 
 

ವಿಜಯಪುರ (ಡಿ.10): ಇಸ್ಲಾಂ ಹಾಗೂ ಧರ್ಮಗುರು ಸೈಯ್ಯದ್ ಮೊಹಮ್ಮದ್ ತನ್ವೀರ್‌ ಪೀರಾ ಹಾಶ್ಮಿ ಅವರು ಐಸಿಸ್‌ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ವಿಷಯದ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಬೇಕಿಲ್ಲ. ಯತ್ನಾಳರು ನೇರವಾಗಿ ಅಮಿತ್ ಶಾ ಬಳಿ ಹೋಗಿ ಕೇಂದ್ರದಿಂದಲೇ ತನಿಖೆ ಮಾಡಿಸಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಸವಾಲು ಹಾಕಿದರು.

 ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಸ್ಲಾಂ ಹಾಗೂ ಧರ್ಮಗುರು ಸೈಯ್ಯದ್ ಮೊಹಮ್ಮದ್ ತನ್ವೀರ್‌ ಪೀರಾ ಹಾಶ್ಮಿ ವಿರೋಧಿ ನಡೆ ಅನುಸರಿಸುತ್ತಾ ಬಂದಿದ್ದಾರೆ. ತಾಕತ್ತಿದ್ದರೆ ಯತ್ನಾಳ ಎನ್ಐಎ ಮೂಲಕ ಈ ಕುರಿತು ತನಿಖೆ ಮಾಡಿಸಲಿ. ಒಂದೊಮ್ಮೆ ತನ್ವೀರ್‌ ಪೀರಾ ವಿರುದ್ಧ ಆರೋಪ ಸಾಬೀತಾಗದಿದ್ದರೆ ಯತ್ನಾಳ ದೇಶ ತೊರೆಯಲಿ ಎಂದು ನಾನೇನು ಹೇಳಲಾರೆ. ಆದರೆ, ಆರೋಪ ಮಾಡಿದ ಅವರು ಆಗ ಏನು ಮಾಡುತ್ತಾರೆ ಎಂದು ಈಗಲೇ ಸ್ಪಷ್ಟವಾಗಿ ಹೇಳಲಿ ಎಂದರು.

Latest Videos

ಯತ್ನಾಳ ಮುಸ್ಲಿಮರನ್ನು ಧ್ಷೇಷ ಮಾಡುತ್ತಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ನಡೆದ ಕಾರ್ಯಕ್ರಮದ ನೆಪ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಗುರು ತನ್ವೀರ್‌ ಪೀರಾ ಹಾಶ್ಮಿ ವಿರುದ್ಧ ಐಸಿಸ್ ಸಂಪರ್ಕ ಇದೆ ಎಂದು ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳ ಜೊತೆಗಿನ ಫೋಟೋ ಹಾಕಿ ವೈರಲ್‌ ಮಾಡಿಸಿದ್ದಾರೆ. ಯತ್ನಾಳ ಅನಗತ್ಯವಾಗಿ ಮತ್ತೊಬ್ಬರ ಚಾರಿತ್ರ್ಯಹರಣದಂಥ ಹೀನಕೃತ್ಯ ಮಾಡಬಾರದು. ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಏನು ಪಾಕಿಸ್ತಾನದಲ್ಲಿ ಆಡಳಿತ ಮಾಡುತ್ತಿದ್ದಾರಾ?: ಎಂ.ಪಿ.ರೇಣುಕಾಚಾರ್ಯ

ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಮುಸ್ಲಿಮರ ಓಲೈಕೆ ಮಾಡುತ್ತಿದ್ದ ಯತ್ನಾಳ, ಬಿಜೆಪಿ ಸೇರುತ್ತಲೇ ಹಿಂದೂ ಹುಲಿ ಎಂದು ಬಿರುದು ಇರಿಸಿಕೊಂಡು ಓಡಾಡುತ್ತಿದ್ದಾರೆ. ಅವರು ಸಮಾನತೆ ಸಾರಿರುವ ಬಸವನಾಡಿನಲ್ಲಿ ಜನಿಸಿದ್ದಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು. ನಾನು ಹಿಂದೂ-ಮುಸ್ಲಿಂ ಇಬ್ಬರನ್ನೂ ಗೌರವಿಸುತ್ತೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ದೊಡ್ಡ ಕೊಡುಗೆ ನೀಡಿದ್ದಾರೆ. ಮುಸ್ಲಿಮರು ನಾವು ಸಹೋದರರು ಎಂದು ಸಂವಿಧಾನ ಸಾರಿದೆ. ಬಸವ ತತ್ವ ಕೂಡ ಇದನ್ನೇ ಹೇಳಿದೆ. ಶಾಸಕನಾದವನಿಗೆ ಮುಸ್ಲಿಂ ಶಾಸಕ, ಹಿಂದೂ ಶಾಸಕ ಎನ್ನಲಾಗುವುದಿಲ್ಲ. ಕ್ಷೇತ್ರದ ಎಲ್ಲ ಜನರಿಗೂ ಅವರು ಶಾಸಕರೇ. ಇದನ್ನು ಯತ್ನಾಳ ಮೊದಲು ಅರಿತುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!