ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ಕಟ್ಟಾ ಹಿಂದುತ್ವವಾದಿಯಾಗಿದ್ದು, ಮೈಯೆಲ್ಲಾ ಹಿಂದುತ್ವವನ್ನೇ ತುಂಬಿಕೊಂಡಿದ್ದು, ಇಂತಹ ಯತ್ನಾಳ್ ವಿರುದ್ಧ ವಿಜಯಪುರದಲ್ಲಿ ಮೌಲ್ವಿ ಜೊತೆಗೆ ವ್ಯಾಪಾರ ಪಾಲುದಾರಿಕೆ ಹೊಂದಿದ್ದಾರೆಂಬುದು ಕಾಂಗ್ರೆಸ್ಸಿಗರು ಸೃಷ್ಟಿಸಿದ ಸುಳ್ಳಷ್ಟೇ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ (ಡಿ.10): ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ಕಟ್ಟಾ ಹಿಂದುತ್ವವಾದಿಯಾಗಿದ್ದು, ಮೈಯೆಲ್ಲಾ ಹಿಂದುತ್ವವನ್ನೇ ತುಂಬಿಕೊಂಡಿದ್ದು, ಇಂತಹ ಯತ್ನಾಳ್ ವಿರುದ್ಧ ವಿಜಯಪುರದಲ್ಲಿ ಮೌಲ್ವಿ ಜೊತೆಗೆ ವ್ಯಾಪಾರ ಪಾಲುದಾರಿಕೆ ಹೊಂದಿದ್ದಾರೆಂಬುದು ಕಾಂಗ್ರೆಸ್ಸಿಗರು ಸೃಷ್ಟಿಸಿದ ಸುಳ್ಳಷ್ಟೇ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ಸಿನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ.
ಯಾವುದೇ ದಾಖಲೆಗಳೂ ಇಲ್ಲ. ಆದರೂ, ಯತ್ನಾಳ್ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದರು. ಶಾಸಕ ಯತ್ನಾಳ್‌ರ ಬಗ್ಗೆ ಕಾಂಗ್ರೆಸ್ ಸುಳ್ಳು ಆರೋಪ ಮಾಡಿ, ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನ ನಡೆಸಿದೆ. ವಿಜಯಪುರದ ಮೌಲ್ವಿ ವಿರುದ್ಧ ಯತ್ನಾಳ್ ವ್ಯವಹಾರಿಕ ಪಾಲುದಾರಿಕೆ ಹೊಂದಿರುವ ಬಗ್ಗೆ ಕಾಂಗ್ರೆಸ್ಸಿಗರ ಆರೋಪದ ಹಿನ್ನೆಲೆಯಲ್ಲಿ ಮೌಲ್ವಿ ಬಗ್ಗೆ ಹೆಚ್ಚಿನ ತನಿಖೆಗೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಯತ್ನಾಳರ ಬಿಜೆಪಿಗೆ ಕರೆ ತಂದಿದ್ದೇ ಬಿಎಸ್‌ವೈ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಪದೇ ಪದೇ ಮಾತನಾಡುವುದು ಸರಿಯಲ್ಲ. ಹೀಗೇ ಮಾತನಾಡುತ್ತಾ ಹೋದರೆ ಬಸವನಗೌಡ ಪಾಟೀಲ್ ಯತ್ನಾಳ್ ವಿಲನ್ ಆಗುತ್ತಾರಷ್ಟೇ. ಯತ್ನಾಳ್ ಹಿರಿಯ ನಾಯಕರು, ಕೇಂದ್ರ ಸಚಿವರಾಗಿದ್ದವರು. ಹೀಗೆ ಸ್ವಪಕ್ಷದವರ ವಿರುದ್ಧವೇ ಮಾತನಾಡುತ್ತಿದ್ದರೆ ವಿಲನ್ ಆಗುತ್ತೀರಷ್ಟೇ ಎಂದು ರೇಣುಕಾಚಾರ್ಯ ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ಏನು ಪಾಕಿಸ್ತಾನದಲ್ಲಿ ಆಡಳಿತ ಮಾಡುತ್ತಿದ್ದಾರಾ?: ಎಂ.ಪಿ.ರೇಣುಕಾಚಾರ್ಯ
ಕೇಂದ್ರದ ನಾಯಕರು ಅಳೆದು ತೂಗಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ್ದಾರೆ. ಹಿಂದೆ ನೀವು ಜೆಡಿಎಸ್‌ಗೆ ಹೋದಾಗ ಮತ್ತೆ ಬಿಜೆಪಿಗೆ ಕರೆ ತಂದಿದ್ದೇ ಯಡಿಯೂರಪ್ಪನವರು. ಇಂತಹ ಬಿಎಸ್‌ವೈ ಬಗ್ಗೆಯೇ ಕೇಂದ್ರ ನಾಯಕರಿಗೆ ದೂರು ನೀಡುತ್ತಾರೆ. ಹೀಗೆ ಮುಂದುವರಿದರೆ ನಾವೂ ಕೇಂದ್ರ ನಾಯಕರ ಬಳಿ ಹೋಗಿ ಮಾತನಾಡುತ್ತೇವೆ ಎಂದು ಹೇಳಿದರು.