ಸೂಲಿಬೆಲೆ ಆಟ ಇನ್ನು ನಡೆಯಲ್ಲ, ನಾಟಕ ಮಾಡಿದರೆ ಜೈಲಿಗೆ: ಸಚಿವ ಎಂ.ಬಿ.ಪಾಟೀಲ್‌

By Kannadaprabha NewsFirst Published Jun 5, 2023, 4:45 AM IST
Highlights

ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯಲ್ಲ. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಗ್ಯಾರಂಟಿ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. 

ವಿಜಯಪುರ (ಜೂ.05): ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯಲ್ಲ. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಗ್ಯಾರಂಟಿ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷ ಸೂಲಿಬೆಲೆ ಏನ್‌ ಮಾಡಿದ್ದಾರೆ ಕೇಳಿ, ನಾಲ್ಕು ವರ್ಷ ಅನಾಹುತ ಮಾಡಿದ್ದು, ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ದೂರಿದರು. ಇವರಿಗೇನು ಜನರು ಕೇಸರಿ ಗುತ್ತಿಗೆ ನೀಡಿಲ್ಲ. ಬಿಜೆಪಿ ಸರ್ಕಾರದಲ್ಲಿ ಹಿಜಾಬ್‌, ಹಲಾಲ್‌, ಉರಿಗೌಡ, ನಂಜೇಗೌಡ ಅಂತೆಲ್ಲ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ ಬಿಜೆಪಿ, ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. 

ರೋಸಿಹೋದ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಿದೆ. ಮಾಧ್ಯಮಗಳೂ ಸೇರಿದಂತೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಕಾಂಗ್ರೆಸ್‌ ಪಕ್ಷಕ್ಕೆ ಅದ್ಭುತ ಬಹುಮತದ ಸರ್ಕಾರ ರಚನೆಗೆ ಮತದಾರ ಪ್ರಭುಗಳು ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರ ಎಲ್ಲ ಸಮುದಾಯಗಳ ರಕ್ಷಣೆ ವಿಷಯದಲ್ಲಿ ವಿಶೇಷ ಕಾಳಜಿ ತೋರಲಿದೆ ಎಂದು ಹೇಳಿದರು. ಗೋಹತ್ಯೆ ನಿಷೇಧ ಕಾನೂನು, ಮುಸ್ಲಿಮರಿಂದ ಕಿತ್ತುಕೊಂಡ ಶೇ 4ರಷ್ಟು ಮೀಸಲಾತಿ, ಮತಾಂತರ ನಿಷೇಧ ಕಾನೂಮು ಹಿಂಪಡೆಯುವುದು ಸೇರಿದಂತೆ ಅಹಿಂದ ಸಂಘಟನೆಯ ಬೇಡಿಕೆ ಈಡೇರಿಸುವ ಕುರಿತು ಕಾಂಗ್ರೆಸ್‌ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಭಾರತದ ಜನ ಬಿಜೆಪಿಯನ್ನು ಸೋಲಿಸುತ್ತಾರೆ: ರಾಹುಲ್‌ ಗಾಂಧಿ

ತಾಯಿ ಆಶೀರ್ವಾದ ಪಡೆದ ಎಂ.ಬಿ.ಪಾಟೀಲ: ಮೂರನೇ ಬಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ತಾಯಿ ಕಮಲಾಬಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ತಾಯಿಗಿಂತಲೂ ಮಿಗಿಲಾದ ದೇವರಿಲ್ಲ. ಮಮತೆ, ಪ್ರೀತಿ-ವಾತ್ಸಲ್ಯ ತ್ಯಾಗ, ಅನುಕಂಪ ಹೀಗೆ ಎಲ್ಲ ಪದಗಳ ಮೂರ್ತರೂಪವೇ ತಾಯಿ. ನನ್ನ ಬೆಳವಣಿಗೆ, ಏಳಿಗೆ, ಶ್ರೇಯಸ್ಸು-ಯಶಸ್ಸು ಎಲ್ಲದಕ್ಕೂ ನನ್ನ ತಾಯಿಯೇ ಕಾರಣ.  ತಾಯಿಯ ಆಶೀರ್ವಾದ ಪಡೆದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ರಾಜಕೀಯ ಮತ್ತು ಸಾಮಾಜಿಕವಾಗಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಎಂ.ಬಿ. ಪಾಟೀಲರು ತಮ್ಮ ಈ ಸಾಧನೆಗಳಿಗೆ ಕಾರಣರಾದವರನ್ನು ಸದಾ ಸ್ಮರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತಾವು ಆಯ್ಕೆಯಾಗಲು ಕಾರಣರಾದ ಮತದಾರರು, ಜಲಸಂಪನ್ಮೂಲ ಸಚಿವರಾಗಿ ಜನಮೆಚ್ಚುವ ಕೆಲಸ ಮಾಡಲು ಮಾರ್ಗದರ್ಶನ ನೀಡಿ ಆಶೀರ್ವದಿಸಿದ ನಡೆದಾಡುವ ದೇವರು ಎಂದೇ ಹೆಸರಾಗಿರುವ ಶ್ರೀಸಿದ್ಧೇಶ್ವರ ಸ್ವಾಮೀಜಿಗಳು ಹಾಗೂ ಉತ್ತಮ ಸಂಸ್ಕಾರ ಪಡೆಯಲು ಹಾಗೂ ರಾಜಕೀಯವಾಗಿ ಸಾಧನೆ ಮಾಡಲು ಸ್ಫೂರ್ತಿಯಾಗಿರುವ ತಮ್ಮ ತಂದೆ ಬಿ.ಎಂ.ಪಾಟೀಲ ಅವರ ಬಗ್ಗೆ ಎಂ.ಬಿ.ಪಾಟೀಲರು ಸಮಯ ಸಿಕ್ಕಾಗಲೆಲ್ಲ ಉಪಕಾರ ಸ್ಮರಣೆ ಮಾಡುತ್ತಿರುತ್ತಾರೆ. ಈಗಲೂ ಅಷ್ಟೇ, ಸಚಿವರಾದ ನಂತರ ವಿಜಯಪುರಕ್ಕೆ ಮೊದಲ ಬಾರಿಗೆ ಆಗಮಿಸಿದ ಅವರು, ನಾನಾ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ, ತಮ್ಮ ತಾಯಿಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಸಹೋದರ ಮತ್ತು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮತ್ತು ಕುಟುಂಬ ಸದಸ್ಯರು ಕೂಡ ಉಪಸ್ಥಿತರಿದ್ದರು.

ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್‌.ಡಿ.ಕುಮಾರಸ್ವಾಮಿ

ಮಾಜಿ ಸಚಿವ ದಿ.ಬಿ.ಎಂ.ಪಾಟೀಲರ ಪತ್ನಿಯಾಗಿದ್ದರೂ ಮೊದಲಿನಿಂದಲೂ ಕಮಲಾಬಾಯಿ ಪಾಟೀಲ ಅವರು ಜನಸಾಮಾನ್ಯರೊಂದಿಗೆ ಸರಳವಾಗಿ ಬೆರೆಯುತ್ತ ಮನೆಗೆ ಬಂದವರನ್ನು ಅತಿಥಿಗಳೆಂದು ಪ್ರೀತಿ ಮತ್ತು ಆದರದಿಂದ ಅತಿಥಿ ಸತ್ಕಾರ ಮಾಡುತ್ತ ಗೌರವ ತೋರಿಸುತ್ತಿದ್ದಾರೆ. ಈಗಲೂ ಕೂಡ ಅದೇ ರೀತಿ ಸರಳ ಜೀವನ ನಡೆಸುವ ಮೂಲಕ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಈಗ ವಿಜಯಪುರಕ್ಕೆ ಬಂದ ನಂತರ ಸಚಿವರು ತಾಯಿಯ ದರ್ಶನದ ಬಳಿಕ ಬಿ.ಎಲ್‌.ಡಿ.ಇ ಸಂಸ್ಥೆಯ ಆವರಣದಲ್ಲಿರುವ ದಿ.ಬಿ.ಎಂ.ಪಾಟೀಲ ಅವರ ಗದ್ದುಗೆಗೆ ತೆರಳಿ ನಮನ ಸಲ್ಲಿಸಿದರು. ಅಲ್ಲದೇ, ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿಹಾಗೂ ಬಂಥನಾಳ ಶಿವಯೋಗಿಗಳ ದೇವಸ್ಥಾನಕ್ಕೆ ತೆರಳಿ ನಮಸ್ಕರಿಸಿದರು. ನಂತರ ಜ್ಞಾನಯೋಗಾಶ್ರಮಕ್ಕೆ ತೆರಳಿ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಉಪಸ್ಥಿತರಿದ್ದರು.

click me!