ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡೇ ಮಾಡುತ್ತೇವೆ: ಸಚಿವ ಮಂಕಾಳ ವೈದ್ಯ

By Kannadaprabha News  |  First Published Aug 5, 2023, 8:55 PM IST

ಕುಮಟಾದಲ್ಲಿ ಸರ್ಕಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡದೇ ಇದ್ದರೆ ನಾವು ಮಾಡುತ್ತೇವೆ ಎಂದು ಹೇಳಿದ್ದು, ಅದಕ್ಕೆ ಬದ್ಧನಾಗಿದ್ದೇನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. 


ಕಾರವಾರ (ಆ.05): ಕುಮಟಾದಲ್ಲಿ ಸರ್ಕಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡದೇ ಇದ್ದರೆ ನಾವು ಮಾಡುತ್ತೇವೆ ಎಂದು ಹೇಳಿದ್ದು, ಅದಕ್ಕೆ ಬದ್ಧನಾಗಿದ್ದೇನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಶಾಸಕರಿಲ್ಲದೇ ಇದ್ದಾಗ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ ಎಂದು ಹೇಳಿದ್ದು, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಕುಮಟಾ ಅಥವಾ ಹೊನ್ನಾವರದಲ್ಲಿ ಮಾಡುತ್ತೇವೆ. 2-3 ಸ್ಥಳವನ್ನು ನೋಡಿದ್ದೇವೆ. ಅದು ಆಗುತ್ತದೆ. ನಾವು ಹಿಂದೆ ಶಾಸಕರಿದ್ದಾಗಲೇ ಕಾರವಾರ ವೈದ್ಯಕೀಯ ಕಾಲೇಜು ಮಂಜೂರಾತಿಯಾಗಿದೆ. 

ಜಿಲ್ಲೆಯ ಜನರಿಗೆ ಏನು ವ್ಯವಸ್ಥೆ ಬೇಕು ಅದನ್ನು ಮಾಡುತ್ತೇವೆ. ಆರು ತಿಂಗಳಲ್ಲಿ ಕಾರವಾರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗೇ ಆಗುತ್ತದೆ. ಅದರೊಂದಿಗೆ ಕುಮಟಾ ಅಥವಾ ಹೊನ್ನಾವರದಲ್ಲೂ ಆಗುತ್ತದೆ ಎಂದು ಭರವಸೆ ನೀಡಿದರು. ಪ್ರಸೂತಿ ತಜ್ಞರ ಕೊರತೆಯ ಬಗ್ಗೆ ಕೇಳಿದಾಗ, ಯಾರೇ ತಜ್ಞರು ಬಂದರು ಕೂಡಲೇ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದ ಅವರು, ಹಿಂದಿನ ಸರ್ಕಾರದಲ್ಲಿ ಸುಸಜ್ಜಿತ ಆ್ಯಂಬುಲೆನ್ಸ್‌ ತಾವು ನೀಡಿದ್ದೇವೆಂದು ಶಾಸಕರು ಹೇಳಿದ್ದಾರೆ. ಆದರೆ ಈಗ ಏನು ವ್ಯವಸ್ಥೆ ಇಲ್ಲ ಎನ್ನುವುದು ತಿಳಿಯಿತು. 

Tap to resize

Latest Videos

undefined

ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಗೊಳಿಸಿ: ಸಚಿವ ನಾರಾಯಣಸ್ವಾಮಿ

ಹಿಂದೆ ಹೀಗಾಗಿದೆ ಹಾಗಾಗಿದೆ ಎಂದು ದೂರುತ್ತಿದ್ದರೆ ಜನರಿಗೆ ಸಹಾಯ ಆಗುವುದಿಲ್ಲ. ಅರ್ಥವಿಲ್ಲ. ಈಗ ಏನಾಗಬೇಕು ಅದನ್ನು ಮಾಡಲು ಸರ್ಕಾರ ಬದ್ಧವಾಗಿದೆ. ಅವರು ಮಾಡಿಲ್ಲ ಎನ್ನುತ್ತಿದ್ದರೆ ನಾವು ದೊಡ್ಡವರಾಗುವುದಿಲ್ಲ. ಅವರಿಗೆ ನಾವು, ನಮಗೆ ಅವರು ಕೌಂಟರ್‌ ನೀಡುತ್ತಿರಬೇಕಾಗುತ್ತದೆ ಎಂದು ಹೇಳಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ಬಗ್ಗೆ ಕೇಳಿದಾಗ, ನಷ್ಟದಲ್ಲಿದೆ ಎನ್ನುವುದು ಸತ್ಯಸಂಗತಿಯಾಗಿದೆ. ನಷ್ಟದಿಂದ ಹೊರತರಲು ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ. ಸಮಯಾವಕಾಶ ಬೇಕು. ಮೀನುಗಾರರಿಗೆಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ಓದಿಗೆ ತೊಂದರೆಯಾದರೆ ಕಠಿಣ ಕ್ರಮ: ಮಕ್ಕಳ ಶಿಕ್ಷಣಕ್ಕೆ ತೊಂದರೆ ಆದರೆ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಕೆ ನೀಡಿದರು. ನಗರದ ಜಿಪಂನಲ್ಲಿ  ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯದ ಕುರಿತಾಗಿ ಪಟ್ಟಿಮಾಡಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ನಿರ್ಲಕ್ಷ್ಯ ಮಾಡಿ ಸಮಸ್ಯೆಗಳು ಇದೆ ಎಂದು ದೂರು ಬಂದರೆ, ಮಕ್ಕಳ ಓದಿಗೆ ತೊಂದರೆ ಆದರೆ ನಿಮ್ಮ ವಿರುದ್ಧ ಕಠಿಣ ಕ್ರಮವಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಕಾರವಾರ ಡಿಡಿಪಿಐ ಲತಾ ನಾಯಕ ಮಾತನಾಡಿ, 124 ಶಿಕ್ಷಕರ ಕೊರತೆ ಪ್ರಾಥಮಿಕ ವಿಭಾಗದಲ್ಲಿ, 12 ಶಿಕ್ಷಕರ ಕೊರತೆ ಪ್ರೌಢಶಾಲೆಯಲ್ಲಿ ಇದೆ. ಬಿಸಿಯೂಟಕ್ಕೆ ಆಹಾರ ಸಾಮಗ್ರಿ ಪೂರೈಕೆಯಾಗಿದೆ. ಸಮವಸ್ತ್ರ, ಪಠ್ಯಪುಸ್ತಕ ಪೂರೈಕೆಯಾಗಿದೆ ಎಂದು ಮಾಹಿತಿ ನೀಡಿದರು. ಸಚಿವ ವೈದ್ಯ ಮಾತನಾಡಿ, ಹಳೆ ಕಟ್ಟಡವನ್ನೇ ದುರಸ್ತಿ ಮಾಡುತ್ತಾ ಇರಬೇಡಿ. ಹೊಸ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿ. ಹಲವು ಶಾಲೆಗಳಲ್ಲಿ ಶೌಚಾಲಯ ಇಲ್ಲದ ಬಗ್ಗೆ ಗಮನಕ್ಕೆ ಬಂದಿದೆ. ಅಂತಹ ಶಾಲೆಗಳನ್ನು ಪಟ್ಟಿಮಾಡಿ ಪ್ರಸ್ತಾವನೆ ಕಳಿಸಬೇಕು. ಶಾಲೆಗೆ ಯಾವುದೇ ಕೆಲಸಕ್ಕೂ ಹಣ ನೀಡಲು ಸರ್ಕಾರ ಸಿದ್ಧವಿದೆ. ಸರ್ಕಾರ ಹಾಗೂ ತಮ್ಮ ಪ್ರಥಮ ಆದ್ಯತೆ ಶಿಕ್ಷಣಕ್ಕೆ ಆಗಿದೆ ಎಂದರು.

ಮಿಡಿ ಹಾಕಿದ್ರೆ ದೇವೀರಮ್ಮನ ದರ್ಶನ ಇಲ್ಲ: ದೇಗುಲದ ಹೊಸ ನಿಯಮ ಏನ್‌ ಹೇಳುತ್ತೆ?

ಶಾಸಕ ಸತೀಶ ಸೈಲ್‌ ಮಾತನಾಡಿ, ಬಂದ್‌ ಆದ ಶಾಲೆಗಳ ಜಾಗವನ್ನು ಅತಿಕ್ರಮಣ ಮಾಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ನೀಡಬೇಕು. ಸ್ಮಾರ್ಚ್‌ ಕ್ಲಾಸ್‌ ಯೋಜನೆ ಜಾರಿಗೆ ಬಂದಿದ್ದು, ಹಲವು ಶಾಲೆಗಳಲ್ಲಿ ನೆಟ್‌ವರ್ಕ್ ಇಲ್ಲ. ಅಂತಹ ಶಾಲೆಗಳಿಗೆ ಸ್ಮಾರ್ಚ್‌ಕ್ಲಾಸ್‌ ಉಪಕರಣ ನೀಡಿದರೆ ಏನು ಪ್ರಯೋಜನವಿದೆ. ಅದರ ಬದಲು ಯಾವ ಶಾಲೆಗೆ ಉಪಯೋಗವಾಗುತ್ತದೆ ಅಂತಹ ಕಡೆ ನೀಡಿ. ನೆಟ್‌ವರ್ಕ್ ಇಲ್ಲದ ಕಡೆ ಬೇರೆ ಯಾವ ರೀತಿ ವ್ಯವಸ್ಥೆ ಮಾಡಬಹುದು ಎಂದು ಯೋಚಿಸಿ ಎಂದು ಸಲಹೆ ನೀಡಿದರು.

click me!