ಈ ಜನ್ಮದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ: ಈಶ್ವರಪ್ಪ

By Kannadaprabha NewsFirst Published Jul 2, 2021, 9:02 AM IST
Highlights

* ಕಾಂಗ್ರೆಸ್ಸಲ್ಲಿ 5 ಜಾತಿ ನಾಯಕರಿಂದ ಸಿಎಂ ಹುದ್ದೆಗೆ ಸ್ಪರ್ಧೆ
* ಬಿಜೆಪಿಯಲ್ಲಿ ಕೆಲವರ ಹೇಳಿಕೆಯಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿರುವುದು ನಿಜ
* ಶಾಸಕರ ಬಾಯಿ ಮುಚ್ಚಲು ಸಿದ್ದರಾಮಯ್ಯ ಮುಂದಾಗಿಲ್ಲ

ಬೆಂಗಳೂರು(ಜು.02):  ‘ಕಾಂಗ್ರೆಸ್‌ನಲ್ಲಿ ಜಾತಿಗೊಬ್ಬರಂತೆ ಐದು ಜಾತಿಗಳ ಮುಖಂಡರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ. ಅವರ ಕನಸು ಕನಸಾಗಿಯೇ ಉಳಿಯಲಿದೆ. ಈ ಜನ್ಮದಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಟೀಕಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುರುಬ ಸಮುದಾಯದಿಂದ ಮಾಜಿ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪರಿಶಿಷ್ಟ ಜಾತಿ ಸಮುದಾಯದಿಂದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಲಿಂಗಾಯತ ಸಮುದಾಯದಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್‌, ಮುಸ್ಲಿಂ ಸಮುದಾಯದಿಂದ ಮಾಜಿ ಸಚಿವ ತನ್ವೀರ್‌ ಸೇಠ್‌ ಅವರನ್ನು ಘೋಷಣೆ ಮಾಡಿಕೊಂಡಿದ್ದಾರೆ ಎಂದರು.

ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಶಾಸಕರ ಬಾಯಿ ಮುಚ್ಚಲು ಸಿದ್ದರಾಮಯ್ಯ ಮುಂದಾಗಿಲ್ಲ. ಶಿವಕುಮಾರ್‌ ಕೂಡ ಯಾರ ಬಾಯಿಯನ್ನೂ ಮುಚ್ಚಿಸಿಲ್ಲ. ಯಾರೂ ಕೂಡಾ ಇಂತಹ ಹೇಳಿಕೆ ಕೊಡಬಾರದು ಎಂಬ ಸೂಚನೆ ನೀಡುತ್ತಿಲ್ಲ ಎಂದು ಲೇವಡಿ ಮಾಡಿದರು.

ಜಾರಕಿಹೊಳಿಗೆ ಸಚಿವ ಸ್ಥಾನ ವಿಚಾರ: ಗಿಣಿ ತಂದುಕೊಡಿ ಶಾಸ್ತ್ರ ಹೇಳ್ತೀನಿ!

ಬಿಜೆಪಿಯಲ್ಲಿ ಕೆಲವರು ಹೇಳಿಕೆ ನೀಡುವುದರಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿರುವುದು ನಿಜ. ಅದನ್ನು ನೆಪ ಮಾಡಿಕೊಂಡು ಬಿಜೆಪಿ ಸರ್ಕಾರ ಬಿದ್ದು ಹೋಗುತ್ತದೆ, ಚುನಾವಣೆ ಬರುತ್ತದೆ ಎಂದು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವವರ ಹೆಸರನ್ನು ಮುನ್ನಲೆಗೆ ತರಲಾಗಿದೆ. ಸಾಮಾಜಿಕ ನ್ಯಾಯ ಹೇಳುವ ಕಾಂಗ್ರೆಸ್‌ ಜಾತಿಗೊಂದು ಮುಖ್ಯಮಂತ್ರಿ ಹೆಸರನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಿ. ದೇಶದಲ್ಲಿ ಕಾಂಗ್ರೆಸ್‌ ಎಲ್ಲಿಂದ ಎಂದು ಹುಡುಕುವ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿಯಾಗಲು ಬಡಿದಾಟ ನಡೆಯುತ್ತಿದೆ. ಯುವ ಕಾಂಗ್ರೆಸ್‌ನಲ್ಲೂ ಬಡಿದಾಟ ನಡೆದಿದ್ದು, ಡಿ.ಕೆ.ಶಿವಕುಮಾರ್‌ ಅವರ ಕಾಲನ್ನು ಎಳೆಯಲಾಗುತ್ತಿದೆ ಎಂದು ಕಿಡಿಕಾಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈಶ್ವರಪ್ಪ, ಬಿಜೆಪಿಯಲ್ಲಿ ಕೆಲವರು ನೀಡುತ್ತಿರುವ ಹೇಳಿಕೆಗಳಿಂದ ಪಕ್ಷದ ಹಿತೈಷಿಗಳು, ಕಾರ್ಯಕರ್ತರಿಗೆ ಬೇಸರ ಆಗಿತ್ತು. ಆದರೆ, ನಮ್ಮ ಹೈಕಮಾಂಡ್‌ ಸುಮ್ಮನಿರದೆ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ರಾಜ್ಯಕ್ಕೆ ಕಳಿಸಿಕೊಟ್ಟು ಸಮಸ್ಯೆ ಬಗೆಹರಿಸಿದೆ ಎಂದರು.

ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಬಗ್ಗೆ ನೇರವಾಗಿ ಹೇಳದ ಈಶ್ವರಪ್ಪ ಅವರಿಗೆ ನೀವು ಸನ್ಯಾಸಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತನಗೆ ಒಬ್ಬ ಗಂಡು ಮಗು, ನಾಲ್ವರು ಹೆಣ್ಣು ಮಕ್ಕಳು ಮತ್ತು ಎಂಟು ಮೊಮ್ಮಕ್ಕಳಿದ್ದಾರೆ ಎಂದು ತಮಾಷೆಯಾಗಿ ಹೇಳಿದರು.
 

click me!