ಕಾಂಗ್ರೆಸ್ಸಿಗರು ಯಾರನ್ನಾದರೂ ಸುಡುತ್ತಾರೆ. ಸುಟ್ಟವರನ್ನು ರಕ್ಷಣೆಯನ್ನೂ ಮಾಡುತ್ತಾರೆ ಎಂದು ಮುಖಂಡರೋರ್ವರು ವಾಗ್ದಾಳಿ ನಡೆಸಿದ್ದಾರೆ
ಶಿವಮೊಗ್ಗ (ನ.17): ಅಧಿಕಾರದ ಆಸೆಗೆ ಕಾಂಗ್ರೆಸ್ಸಿಗರು ಯಾರನ್ನಾದರೂ ಸುಡುತ್ತಾರೆ. ಸುಟ್ಟವರನ್ನು ರಕ್ಷಣೆಯನ್ನೂ ಮಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಡಿ.ಜೆ.ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಬಂಧನಕ್ಕೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಕೆಎಸ್ ಈಶ್ವರಪ್ಪ ತನ್ನ ಮನೆ ಸುಡಲು ಕಾಂಗ್ರೆಸ್ಸಿಗರೇ ಕಾರಣ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದರು ಎಂದರು.
ದೇಶದ್ರೋಹಿ ಸಂಘಟನೆಗಳು ತುಂಬಾ ದಿನದಿಂದ ಪ್ಲಾನ್ ಮಾಡಿ ಈ ಕೆಲಸ ಮಾಡಿದ್ದರು. ಅವರೆಲ್ಲರ ಬಂಧನ ಈಗಾಗಲೇ ಆಗಿದೆ. ಆರಂಭದಲ್ಲಿ ಸರ್ಕಾರವೇ ಈ ಕೆಲಸ ಮಾಡಿದೆ ಎಂದು ಬಿಂಬಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಅಖಂಡ ಶ್ರೀನಿವಾಸ ಮೂರ್ತಿ ಬೆನ್ನಿಗೆ ನಿಂತಿಲ್ಲ ಎಂದು ಈಶ್ವರಪ್ಪ ಹೇಳಿದರು.
ಕರ್ನಾಟಕದಲ್ಲಿ ಮರಾಠ ಪ್ರಾಧಿಕಾರಕ್ಕೆ ಆಕ್ರೋಶ, ಸಿಎಂ ರಾಜೀನಾಮೆಗೆ ಆಗ್ರಹ
ತಾವು ಅಧಿಕಾರಕ್ಕೆ ಬರಲು ಯಾರು ತಮ್ಮ ಬೆನ್ನ ಹಿಂದೆ ನಿಲ್ಲುತ್ತಾರೆಯೋ ಅವರ ಬೆನ್ನ ಹಿಂದೆ ಸಿದ್ದರಾಮಯ್ಯ, ಡಿಕೆಶಿ ನಿಲ್ಲುತ್ತಾರೆ. ದೇಶದ್ರೋಹಿಗಳನ್ನು ರಕ್ಷಣೆ ಮಾಡುವುದೇ ಕಾಂಗ್ರೆಸ್ ಅಜೆಂಡಾ. ಸ್ವಾತಂತ್ರಾ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಗಾಂಧೀಜಿ ಹೇಳಿದ್ದರು. ಆದರೆ ಕಾಂಗ್ರೆಸ್ ವಿಸರ್ಜನೆಯಾಗಿರಲಿಲ್ಲ. ಇದೀಗ ಕಾಂಗ್ರೆಸ್ ನಾಯಕರೇ ಕಾಂಗ್ರೆಸನ್ನು ವಿಸರ್ಜನೆ ಮಾಡಲಾರಂಭಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.