ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿಗೆ ಇದಕ್ಕಿಂತ ವೈಫಲ್ಯ ಬೇಕಾ?: ಸಚಿವ ಕೃಷ್ಣ ಬೈರೇಗೌಡ

By Kannadaprabha News  |  First Published Jul 1, 2023, 1:35 PM IST

ಕರ್ನಾಟಕದಲ್ಲಿ ಅವರು ಬೀದಿಗಿಳಿದು, ಒಬ್ಬರಿಗೊಬ್ಬರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಆಡುತ್ತಿರುವ ಮಾತುಗಳು, ಅವರಿಗೆ ಏನಾದರೂ ಜವಾಬ್ದಾರಿ ಇದೆಯಾ..? ಜನರ ಬಗ್ಗೆ ಏನಾದರೂ ಕಾಳಜಿ ಇದೆಯಾ ಎಂದು ಪ್ರಶ್ನಿಸಿದ ಸಚಿವ ಕೃಷ್ಣ ಬೈರೇಗೌಡ 
 


ಬೆಳಗಾವಿ(ಜು.01):  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 47 ದಿನಗಳಾದರೂ ಇದುವರೆಗೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಇದಕ್ಕಿಂತ ರಾಜಕೀಯ ನಾಯಕತ್ವದ ವೈಫಲ್ಯ ಇನ್ಯಾವುದಾದರೂ ಇದೆಯಾ ಎಂದು ಬಿಜೆಪಿ ನಾಯಕರ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅವರು ಬೀದಿಗಿಳಿದು, ಒಬ್ಬರಿಗೊಬ್ಬರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಆಡುತ್ತಿರುವ ಮಾತುಗಳು, ಅವರಿಗೆ ಏನಾದರೂ ಜವಾಬ್ದಾರಿ ಇದೆಯಾ..? ಜನರ ಬಗ್ಗೆ ಏನಾದರೂ ಕಾಳಜಿ ಇದೆಯಾ ಎಂದು ಪ್ರಶ್ನಿಸಿದರು.

Latest Videos

undefined

ಕೇಂದ್ರದಿಂದ ಅಕ್ಕಿ ವಿಚಾರದಲ್ಲಿ ರಾಜಕೀಯ, ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬರಲೆಂದು ವಿರೋಧ, ಬಿಜೆಪಿ ಎಂಎಲ್‌ಸಿ ವಿಶ್ವನಾಥ

ಅಧಿಕಾರ ಕಳೆದುಕೊಂಡ ಮೇಲೆ ಈವರೆಗೂ ಅವರಿಗೆ ಜನರ ಬಗ್ಗೆ ಕಾಳಜಿ ಬಂದಿಲ್ಲ. ಅಧಿಕಾರದ ಕಚ್ಚಾಟ ಮತ್ತು ಚುನಾವಣೆ ಬಗ್ಗೆ ಮಾತಾಡುತ್ತಿರುವುದನ್ನು ಬಿಟ್ಟರೆ ಜನ ಕಲ್ಯಾಣದ ಬಗ್ಗೆ ಅವರು ಗಮನ ಕೊಡಲಿಲ್ಲ. ಇವರ ರಾಜಕೀಯ ಕಚ್ಚಾಟ ಎಲ್ಲರಿಗೂ ಹೇಸಿಗೆ ತರಿಸುತ್ತಿದೆ. ಅದರ ನಡುವೆ ರಾಜ್ಯದಲ್ಲಿ ನಾವು ಸುಭದ್ರ ಸರ್ಕಾರ ಕೊಡುತ್ತಿದ್ದೇವೆ. ಜನರ ಕಲ್ಯಾಣಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ. ಕೊಟ್ಟಮಾತನ್ನು ಉಳಿಸಿಕೊಳ್ಳಲು ಒಂದೊಂದೆ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.

ಶ್ರಮ ಯಾರೋ ಪಡುತ್ತಾರೆ, ಅಧಿಕಾರ ಇನ್ಯಾರೋ ಅನುಭವಿಸುತ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಶ್ರಮ ಪಟ್ಟಿದ್ದೇವೆ. ಎಲ್ಲರ ಶ್ರಮದಿಂದ ಇಂದು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮ ಮೇಲೆ ಜನರು ಇಟ್ಟಿರುವ ನಿರೀಕ್ಷೆಯಂತೆ ಜನರ ಕಲ್ಯಾಣ ಮಾಡುವುದು ನಮ್ಮ ಗುರಿ. ಬಿಜೆಪಿ ಸರ್ಕಾರಗಳಿಂದ ರಾಜ್ಯದಲ್ಲಿ ದುಡಿಯುವ ವರ್ಗದ ಜನರ ಜೀವನ ಸಂಕಷ್ಟದಲ್ಲಿದೆ. ಅವರ ಮೇಲೆ ಯದ್ವಾ ತದ್ವಾ ಟ್ಯಾಕ್ಸ್‌ ಹಾಕಿ, ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದ್ದರಿಂದ ಇವತ್ತು ಬಡವರ ಜೀವನ ಕಷ್ಟವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ, ರೈತರ ಆದಾಯ ಕುಸಿದು ಬೀಳುವಂತೆ ಮಾಡಿದ್ದಾರೆ. ದ್ವಿಗುಣ ಅಲ್ಲ ದೇಶದ ರೈತರ ಆದಾಯ ಅರ್ಧವಾಗಿದೆ. ಇಂತಹ ಸಂಕಷ್ಟದಲ್ಲಿ ಜನ ಬದುಕುತ್ತಿರುವಾಗ, ಜನರ ನೆರವಿಗೆ ಬರಬೇಕು ಎಂದು ನಾವು ಅಧಿಕಾರಕ್ಕೆ ಬಂದಿದ್ದೇವೆ. ಹಾಗಾಗಿ ಅದೇ ನಮಗೆ ಮುಖ್ಯವಾಗಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಪ್ರತಿಯೊಬ್ಬರಿಗೂ ಸಣ್ಣಪುಟ್ಟ ಆಸೆಗಳು ಇರುತ್ತವೆ ಎಂದರು.

click me!