ಅದಾನಿ ಮೇಲೆ ಎರಡೂವರೆ ಸಾವಿರ ಕೋಟಿ ಲಂಚ ಆರೋಪದ FIR ಆಗಿದೆ. ಆ ಪ್ರಕರಣದಲ್ಲೂ ಇ.ಡಿ, ಸಿಬಿಐ ಏನೂ ಮಾಡದೆ ನಾಟಕ ಮಾಡ್ತಿದ್ದಾರೆ ಎಂದು ಕೆಂಡ ಕಾರಿದ ಕಂದಾಯ ಸಚಿವ ಕೃಷ್ಣಬೈರೇಗೌಡ
ಕೋಲಾರ(ಡಿ.15): ದೇಶದಲ್ಲಿ ಇ.ಡಿ, ಸಿಬಿಐ ಇರೋದು ಕೇವಲ ಕಾಂಗ್ರೆಸ್‌ಗೆ ಎನ್ನುವಂತಾಗಿದೆ. ಈಗ ಇ.ಡಿ, ಸಿಬಿಐನವರು ಏನ್ ಮಾಡ್ತಿದ್ದಾರೆ. ಲಂಚದ ಆರೋಪ ಮಾಡಿದ್ದು ಸಿಎಂ ಅಲ್ಲ ಆರೋಪ ಮಾಡಿದ್ದು ಅನ್ವರ್ ಮಾಣಿಪ್ಪಾಡಿ. ಈ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಡ ಹಾಕಿದ್ದಾರೆ. ಈಗಲೂ ಅನ್ವರ್ ಮಾಣಿಪ್ಪಾಡಿ ಬಿಜೆಪಿಯ ಓರ್ವ ಪ್ರಮುಖ ನಾಯಕರಾಗಿದ್ದಾರೆ. ಪ್ರತಿದಿನ ಸುಳ್ಳು ಆರೋಪಗಳಿಗೆ ಇ.ಡಿ, ಸಿಬಿಐ ನೋಟೀಸ್ ನೀಡ್ತಾರೆ. ಸಿಬಿಐಗೆ ಸಾಂವಿಧಾನಿಕ ಜವಾಬ್ದಾರಿ ಇದ್ದರೆ ತನಿಖೆ ಮಾಡಬೇಕು. ಸತ್ಯಾಸತ್ಯತೆ ಹೊರಬರಲು ಇದು ತನಿಖೆಯಾಗಬೇಕು ಎಂದು ಬಿಜೆಪಿ ವಿರುದ್ಧ ಕಂದಾಯ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಅದಾನಿ ಮೇಲೆ ಎರಡೂವರೆ ಸಾವಿರ ಕೋಟಿ ಲಂಚ ಆರೋಪದ FIR ಆಗಿದೆ. ಆ ಪ್ರಕರಣದಲ್ಲೂ ಇ.ಡಿ, ಸಿಬಿಐ ಏನೂ ಮಾಡದೆ ನಾಟಕ ಮಾಡ್ತಿದ್ದಾರೆ ಎಂದು ಕೆಂಡ ಕಾರಿದ್ದಾರೆ.
ವಿಜಯೇಂದ್ರರಿಂದ 150 ಕೋಟಿ ಆಮಿಷ, ಮಾಣಿಪ್ಪಾಡಿ ಆರೋಪದ ಸತ್ಯಾಸತ್ಯತೆ ಹೊರಬರಲಿ: ನಸೀರ್ ಅಹ್ಮದ್
ಕೋವಿಡ್ ಹಗರಣ ತನಿಖೆ ದ್ವೇಷ ರಾಜಕೀಯ ಎಂಬ ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಬೈರೇಗೌಡ ಅವರು, ಹೆಣದಲ್ಲಿ ಹಣ ಮಾಡಿದ್ದನ್ನು ಮರೆಯಬೇಕಾ?. ಕಳಪೆ ಸಾಮಗ್ರಿ, ಟೆಸ್ಟಿಂಗ್ ನಲ್ಲಿ ಡಬಲ್ ದುಡ್ಡು ಮಾಡಿದ್ರು. ಸಾವಿನಲ್ಲೂ ಹಣ ಮಾಡಿದ ಸಂಸ್ಕೃತಿಯನ್ನು ಬಿಟ್ಟು ಬಿಡಬೇಕಾ?.. ನ್ಯಾಯಾಂಗ ತನಿಖೆಯ ವರದಿ ಆಧರಿಸಿ ಕಾನೂನು ಕ್ರಮ ಆರಂಭಿಸಿದ್ದೇವೆ ಎಂದು ಜಗದೀಶ್ ಶೆಟ್ಟರ್‌ಗೆ ಸಚಿವ ಕೃಷ್ಣಬೈರೇಗೌಡ ತಿರುಗೇಟು ನೀಡಿದ್ದಾರೆ.
ಮಾರಕ ಖಾಯಿಲೆ ದೇಶ ಪ್ರಪಂಚವನ್ನು ಬುಡಮೇಲೆ ಮಾಡುವಾಗ ಅದರಲ್ಲೂ ದುಡ್ಡು ಮಾಡಿದ್ರು. ಇದು ಯಾವ ಮಾನವೀಯ ಧರ್ಮ, ಹಿಂದೂ ಧರ್ಮದ ಹೆಸರಲ್ಲಿ ಮತ ಹಾಕಿಸಿಕೊಂಡು, ಹಿಂದೂ ಧರ್ಮಕ್ಕೆ ಮಾಡಿದ ಅಪಚಾರ ಅಲ್ಲವೇ. ಸತ್ಯ ಸಂಗತಿ ಹೊರಗೆ ಬರಬೇಕೆಂದರೆ, ತನಿಖೆಯಾಗಲಿ. ದುಡ್ಡು ಯಾರು ಮಾಡೊಲ್ಲ ಎಂದಲ್ಲ, ಎಲ್ಲರೂ ಸಾಚಾಗಳು ಅಲ್ಲ, ಆದರೆ ಸಾವಿನಲ್ಲೂ ದುಡ್ಡು ಮಾಡಿದ್ದು ಕೋವಿಡ್ ನಲ್ಲಿ. ಇದು ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿಗೆ ತಪ್ಪು ಎನ್ನಿಸಲ್ಲ. ಮಾನವೀಯತೆ ಇಲ್ಲದೆ ದುಡ್ಡು ಮಾಡಿದ್ದಾರೆ. ಇವರು ಮನುಷ್ಯರಾ ಅಥವಾ ರಾಕ್ಷಸೀ ಪ್ರವೃತ್ತಿಗೆ ಸೇರಿದವರಾ ಎಂಬ ಬಗ್ಗೆ ತನಿಖೆ ಆಗುತ್ತಿದೆ ಎಂದು ತಿಳಿಸಿದ್ದಾರೆ.