ಜೆಡಿಎಸ್ ವರಿಷ್ಠರು ಪಕ್ಷದಲ್ಲಿ ಯಾರನ್ನು ಬೆಳೆಯಲು ಬಿಡುವುದಿಲ್ಲ. ಒಬ್ಬರನ್ನು ತೆಗೆಯಲು ಮತ್ತೊಬ್ಬರನ್ನು ಹುಟ್ಟುಹಾಕುತ್ತಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸಿದರು.
ಮಂಡ್ಯ (ಏ.02): ಜೆಡಿಎಸ್ ವರಿಷ್ಠರು ಪಕ್ಷದಲ್ಲಿ ಯಾರನ್ನು ಬೆಳೆಯಲು ಬಿಡುವುದಿಲ್ಲ. ಒಬ್ಬರನ್ನು ತೆಗೆಯಲು ಮತ್ತೊಬ್ಬರನ್ನು ಹುಟ್ಟುಹಾಕುತ್ತಾರೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಆರೋಪಿಸಿದರು. ಪಟ್ಟಣದ ಬಸವೇಶ್ವರ ನಗರದ ತಮ್ಮ ನಿವಾಸದ ಆವರಣದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ನನ್ನ ಕೊಡುಗೆ ಏನೂ ಇರಲಿಲ್ಲ. ಆದರೆ, ಮಾಜಿ ಸ್ಪೀಕರ್ ಕೃಷ್ಣರನ್ನು ಮಟ್ಟ ಹಾಕಲು ನನ್ನನ್ನು ಹುಟ್ಟು ಹಾಕಿದರು. 40 ವರ್ಷಗಳ ಕಾಲ ಪಕ್ಷ ಕಟ್ಟಿದ ಕೃಷ್ಣ ಅವರಿಗೆ ಟಿಕೆಚ್ ತಪ್ಪಿಸಿ ನನಗೆ ಟಿಕೆಚ್ ನೀಡಿದರು. ನನ್ನನ್ನು ಮುಗಿಸಲು ಮತ್ತೊಬ್ಬರನ್ನು ಹುಟ್ಟು ಹಾಕಿದರು ಎಂದು ದೂರಿದರು.
ಒಬ್ಬರನ್ನು ಮುಗಿಸಲು ಮತ್ತೊಬ್ಬರನ್ನು ಹುಟ್ಟು ಹಾಕುವುದೇ ಜೆಡಿಎಸ್ ವರಿಷ್ಠರ ಕೆಲಸ. ನಾನು ಆ ಪಕ್ಷದಲ್ಲಿದ್ದೆ. ಅವರ ಮನೆ ಅನ್ನ ತಿಂದಿದ್ದೇನೆ. ಅವರನ್ನು ಟೀಕೆ ಮಾಡೊಲ್ಲ. ಆದರೆ, ನನ್ನ ನೋವನ್ನು ಹೇಳುತ್ತಿದ್ದೇನೆ ಅಷ್ಟೆ. ಎಚ್.ಡಿ.ದೇವೇಗೌಡರ ಕುಟುಂಬ ಯಾರನ್ನು ತಾನೆ ಬೆಳೆಯಲು ಬಿಟ್ಟಿದೆ. ಜೆಡಿಎಸ್ ಪಕ್ಷದಲ್ಲಿ ಶೇ.99 ರಷ್ಟು ನಾಯಕರು ಭಯದ ವಾತಾವರಣದಲ್ಲಿದ್ದಾರೆ. ಈ ಬಗ್ಗೆ ಮೇಲುಕೋಟೆ ಶಾಸಕ ಪುಟ್ಟರಾಜುರವರ ಅಂತರಾಳ ಕೇಳಿ ಅದರ ಬಗ್ಗೆ ಹೇಳ್ತಾರೆ. ಆತ್ಮಪೂರ್ವಕವಾಗಿ ಯಾರು ಜೆಡಿಎಸ್‌ನಲ್ಲಿ ಇಲ್ಲ ಎಂದು ಕಿಡಿಕಾರಿದರು.
ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ಮುಖಂಡರ ವಿರೋಧ
ಎಚ್.ಡಿ.ಕುಮಾರಸ್ವಾಮಿ 14 ತಿಂಗಳು ಮುಖ್ಯಮಂತ್ರಿಯಾಗಿ ಮಂಡ್ಯಕ್ಕೆ ಏನೂ ವಿಶೇಷ ಯೋಜನೆ ರೂಪಿಸಲಿಲ್ಲ. 2018ರಲ್ಲಿ ಏಳಕ್ಕೆ ಏಳು ಜೆಡಿಎಸ್ ಶಾಸಕರು ಇದ್ದರೂ ಅಭಿವೃದ್ಧಿ ಮಾತ್ರ ಶೂನ್ಯವಾಯಿತು. ಇದನ್ನು ಅರಿತು ತಾಲೂಕಿನ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಸೇರಬೇಕಾಯಿತು ಎಂದರು. ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಉಸಿರು ಕಟ್ಟುವ ವಾತಾವರಣವಿತ್ತು. ಆ ಪಕ್ಷದಲ್ಲಿ ಇರಲು ಸಾಧ್ಯವಾಗದೇ ನಮ್ಮ ತಾಲ್ಲೂಕಿನವರೇ ಆದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲೆಂಬ ಏಕೈಕ ಉದ್ದೇಶದಿಂದ ಬಿಜೆಪಿ ಸೇರಬೇಕಾಯಿತು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ನಾನು ಜಲ್ಲಿ, ಕಲ್ಲು ಹೊಡೆಯುತ್ತಿಲ್ಲ. ಇವರು ಜಲ್ಲಿ ಕಲ್ಲು ಹೊಡೆಯುತ್ತಿರುವುದರಿಂದ ನಾವು ಮಾಡಿಸಿದ ರಸ್ತೆಗಳನ್ನು ಕಿತ್ತು ಹಾಕಿಕೊಂಡು ಬರ್ತಿದ್ದಾರೆ. ಎಲ್ಲೆಡೆ ನಾನು ಅದನ್ನ ಹೇಳಿಕೊಂಡು ಬರಬೇಕಾ.? ಇನ್ಮೇಲೆ ಶುರುವಾಗುತ್ತೆ ಎಂದು ಚಿಟುಕೆ ಹೊಡೆದು ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ವಿರುದ್ಧ ಗುಡುಗಿದರು. ವಿಪಕದವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಬಾಂಬೆ ಸುಳ್ಳ, ಬಾಂಬೆ ಕಳ್ಳ ಅಂತಾರೆ. ನಾನು ನಯಾಪೈಸೆ ಕಳ್ಳತನ ಮಾಡಿದ್ದರೆ ಒಂದೆ ಒಂದು ದಾಖಲೆ ಕೊಡಲಿ. ಇವರ ಮನೆಗೆ ನುಗ್ಗಿ ಏನಾದ್ರು ಮಾಡಿದ್ರೆ ಹೇಳಲಿ.
ಆಮ್ ಆದ್ಮಿ ಪಕ್ಷದ ಹಿನ್ನಡೆಗೆ ಬಿಜೆಪಿ ಹುನ್ನಾರ: ಮುಖ್ಯಮಂತ್ರಿ ಚಂದ್ರು
ಕೋವಿಡ್ ಕಾಲದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಪ್ರಾಣದ ಹಂಗನ್ನು ತೊರೆದು ಜನ ಸಾಮಾನ್ಯರ ಜೀವವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.