ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ವಿರೋಧ ಮಾಡಿದವರು ಉತ್ತರ ಕುಮಾರನೂ ಒಬ್ಬ: ಸುಧಾಕರ್
ಕೋಲಾರ(ಜು.22): ನಾನು ಸಿದ್ದರಾಮಯ್ಯನವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಉತ್ತರ ಕುಮಾರನಂತವರು ಇನ್ನಷ್ಟುಮಂದಿ ಹೋಗಿ ಆಹ್ವಾನಿಸಿದರು ಅವರು ಕೋಲಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ವಿರೋಧ ಮಾಡಿದವರು ಉತ್ತರ ಕುಮಾರನೂ ಒಬ್ಬ. 2023ರಲ್ಲಿ ಸಿದ್ದರಾಮಯ್ಯನವರನ್ನು ಮುಗಿಸಲು ಕೋಲಾರದಲ್ಲಿ ಉತ್ತರ ಕುಮಾರನ ತಂಡ ಖೆಡ್ಡ ಸೃಷ್ಟಿಸಿದೆ ಎಂದು ಶಾಸಕ ರಮೇಶ್ ಕುಮಾರ್ ಅವರನ್ನು ಪರೋಕ್ಷವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದರು.
ನಗರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಾಧನ ಸಮಾವೇಶ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ವರ್ತೂರು ಪ್ರಕಾಶ್ ಆಯ್ಕೆಯಾಗುವುದು ಖಚಿತ. ಹೇಳಿ ಮಾಡುವುದು ಬೇರೆ. ಆದರೆ ಅವರು ಮಾಡಿ ಹೇಳುತ್ತಿದ್ದಾರೆ ಎಂದರು.
ಗಾಂಧಿಗಳಿಂದಾಗಿ 4 ತಲೆಮಾರಿಗೆ ಸಂಪತ್ತು ಮಾಡಿದ್ದೇವೆ: ರಮೇಶ್ ಕುಮಾರ್
ಹಾಲಿ ಶಾಸಕರ ಸ್ವಯಂ ನಿವೃತ್ತಿ
ಕೋಲಾರ ನಗರದೊಳಗೆ ಹೋದರೆ ಏನಕ್ಕೆ ಬಂದ್ವಿ ಅನಿಸುತ್ತಿದೆ. ಇದಕ್ಕಾಗಿ ಹಾಲಿ ಶಾಸಕರು ಸ್ವಾಭಾವಿಕವಾಗಿ ಮುಂದುವರೆಯುವುದು ಬಿಟ್ಟು ಸ್ವಯಂ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಖಾಲಿ ಡಬ್ಬ ಕಾಂಗ್ರೆಸ್ ಮುಖ್ಯಮಂತ್ರಿ ಕುರ್ಚಿಗಾಗಿ ಇಬ್ಬರು ಕಿತ್ತಾಡುತ್ತಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ವರ್ತೂರು ಪ್ರಕಾಶ್ 2023ರ ಚುನಾವಣೆಯಲ್ಲಿ ಗೆದ್ದು ವಿಧಾನ ಸೌಧ ಪ್ರವೇಶ ಮಾಡುವುದು ಖಚಿತ ಎಂದು ತಾಮ್ರದ ತಟ್ಟೆಯಲ್ಲಿ ಬರೆದು ಇಟ್ಟುಕೊಳ್ಳಬೇಕು. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಕಳೆದಿದೆ. ದೊಡ್ಡಬಳ್ಳಾಪುರದಲ್ಲಿ ಇದೇ ತಿಂಗಳು ಸಾಧನಾ ಸಮಾವೇಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಿದ್ದು, ರಮೇಶ್ ಕುಮಾರ್ ವಿರುದ್ಧ ಏಕವಚನದಲ್ಲಿ ವರ್ತೂರು ವಾಗ್ದಾಳಿ
ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸಾಧನಸಮಾವೇಶ ನಡೆಸಲಾಗುತ್ತಿದ್ದು 1 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೇರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಕೆ.ಎಸ್.ಮಂಜುನಾಥ್ ಗೌಡ, ಎಂ.ನಾರಾಯಣಸ್ವಾಮಿ, ವಕ್ತಾರ ಎಸ್.ಬಿ.ಮುನಿವೆಂಟಪ್ಪ, ಜಿ.ಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಕೆಯುಡಿಎ ಅಧ್ಯಕ್ಷ ವಿಜಿಕುಮಾರ್ ಉಪಸ್ಥಿತರಿದ್ದರು.