ಈ ಹಿಂದೆ 17 ಶಾಸಕರನ್ನು ಖರೀದಿ ಮಾಡಿದಾಗಲೇ ಇಡೀ ದೇಶದಲ್ಲಿ ಬಿಜೆಪಿ ಪ್ರಭಾವ ಹೋಯಿತು. ಮತ್ತೆ ಅದೇ ರೀತಿ ಮಾಡಿದರೆ ನೀವು ನಾಶವಾಗಿ ಹೋಗುತ್ತೀರಿ ಎಂದು ಬಿಜೆಪಿ ವಿರುದ್ಧ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ವಾಗ್ದಾಳಿ ನಡೆಸಿದರು.
ವಿಜಯಪುರ (ನ.01): ಈ ಹಿಂದೆ 17 ಶಾಸಕರನ್ನು ಖರೀದಿ ಮಾಡಿದಾಗಲೇ ಇಡೀ ದೇಶದಲ್ಲಿ ಬಿಜೆಪಿ ಪ್ರಭಾವ ಹೋಯಿತು. ಮತ್ತೆ ಅದೇ ರೀತಿ ಮಾಡಿದರೆ ನೀವು ನಾಶವಾಗಿ ಹೋಗುತ್ತೀರಿ ಎಂದು ಬಿಜೆಪಿ ವಿರುದ್ಧ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ವಾಗ್ದಾಳಿ ನಡೆಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಹಾರಾಷ್ಟ್ರ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಈ ರೀತಿ ಅಸಮಾಧಾನ ಹೊರಹಾಕಿದರು.
ರಾಜಕಾರಣ ಎಂದರೆ ಸರ್ಕಾರ ಕೆಡುವುದು, ಮತ್ತೆ ಕಟ್ಟುವುದು, ಸುಭದ್ರ ಸರ್ಕಾರ ಬೀಳಿಸುವುದೇ ಅಂದುಕೊಂಡಿದ್ದೀರಾ? ಇದು ಜನತೆಗೆ ಮಾಡುವ ಅವಮಾನ. ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ಈ ರೀತಿ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಅವರು ಬರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ನೀರಾವರಿ ಸಚಿವರು ಪ್ರಯತ್ನಿಸಿದ್ದಾರೆ. ಆಗಿಲ್ಲ. ಆದರೆ, ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವಾರಕ್ಕೆ 70 ಗಂಟೆ ಕೆಲಸ: ಇನ್ಫಿ ಮೂರ್ತಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಬೆಂಬಲ
ನಾವು ವಿಫಲರಾಗಿದ್ದೇವೆ ಸರಿ. ನೀವಾದರೂ ಭೇಟಿ ಮಾಡಿಬಹುದಿತ್ತಲ್ಲ? ಜನರಿಗೆ ಏನು ಹೇಳುತ್ತೀರಿ ನೀವು ಎಂದು ಬಿಜೆಪಿಗರನ್ನು ಪ್ರಶ್ನಿಸಿದರು. ಮಹದಾಯಿ ವಿಚಾರದಲ್ಲಿ ದಾಖಲಾತಿ ನೀಡಿಲ್ಲವೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾಗೆಂದರೆ ಏನು? ದಾಖಲಾತಿ ನೀಡಿಲ್ಲವೆಂದು ಕೇಂದ್ರ ಬರೆದಿದೆಯಾ? ಎಂದರು. ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜನವರಿಯಲ್ಲಿ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ಹೇಳಲಾಗಿದೆ. ಶಿವರಾಜ ಪಾಟೀಲ ಅವರ ಜೊತೆಗೂ ಚರ್ಚೆ ಮಾಡುತ್ತೇವೆ. ಕನ್ನಡಪರ ಸಂಘಟನೆಗಳ ಸಲಹೆ-ಸೂಚನೆ ಪಡೆದು, ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.