ಆನೆ ಹೋಗುತ್ತಿರುತ್ತೆ, ನರಿಯೊಂದು ಕಾದು ಕುಳಿತಿರುತ್ತೆ. ಅದೇನೋ ಬೀಳುತ್ತೇ ಅಂಥ ನರಿ ಕಾಯ್ತಿರುತ್ತೆ. ಅದು ಬೀಳುವುದಿಲ್ಲ, ಆನೆ ನಡೆಯುವುದನ್ನು ನಿಲ್ಲಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ಮೈಸೂರು (ಆ.22): ಆನೆ ಹೋಗುತ್ತಿರುತ್ತೆ, ನರಿಯೊಂದು ಕಾದು ಕುಳಿತಿರುತ್ತೆ. ಅದೇನೋ ಬೀಳುತ್ತೇ ಅಂಥ ನರಿ ಕಾಯ್ತಿರುತ್ತೆ. ಅದು ಬೀಳುವುದಿಲ್ಲ, ಆನೆ ನಡೆಯುವುದನ್ನು ನಿಲ್ಲಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಯಾಕ್ರೀ ಸಮಸ್ಯೆ ಆಗುತ್ತೆ? ಸರ್ಕಾರ ಯಾಕೆ ಅಭದ್ರ ಆಗುತ್ತೆ? ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ.
7 ಕೋಟಿ ಜನ ಮತ ಹಾಕಿ ಬಂದಿರುವ ಸರ್ಕಾರ ಇದು. ಇದನ್ನು ಅಸ್ಥಿರವಾಗಿಸಲು ಹೇಗೆ ಸಾಧ್ಯ? ನಮ್ಮಲ್ಲಿ ಯಾವ ಬೆಳವಣಿಗೆಗಳು ನಡೆಯುತ್ತಿಲ್ಲ. ಎಂಡಿಎ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪೇನಿದೆ ಹೇಳಿ ಎಂದು ಪ್ರಶ್ನಿಸಿದರು. 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ನಿಮಗ್ಯಾಕೆ ಈ ಅನುಮಾನ? ಎಂದು ಪ್ರಶ್ನಿಸಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು, ಎಂಡಿಎ ಪ್ರಕರಣ ದಸರಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಾರಿ ವಿಜೃಂಭಣೆಯಿಂದ ದಸರಾ ಮಾಡುತ್ತೇವೆ ಎಂದು ತಿಳಿಸಿದರು.
ಆನೆ ಎಂಬುದು ಒಂದು ದೊಡ್ಡ ಸಂದೇಶ ನೀಡುತ್ತದೆ: ಆನೆ ಎಂಬುದು ಒಂದು ದೊಡ್ಡ ಸಂದೇಶ ನೀಡುತ್ತದೆ. ಆನೆ ಎಂಬುದು ಕಾಡಿನ ಸಂಪತ್ತು. ವನ್ಯಜೀವಿಗಳು ಹಾಗೂ ವನ್ಯ ಸಂರಕ್ಷಣೆ ದೇಶಕ್ಕೆ ಅತ್ಯಗತ್ಯ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ಬುಧವಾರ ಆಯೋಜಿಸಿದ್ದ ಗಜಪಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಹಾಗೂ ವನ್ಯ ಸಂರಕ್ಷಣೆ ಮಾಡದಿದ್ದರೆ ಮಾನವ ಉಳಿಯುವುದು ಕಷ್ಟ.
ಯಾವುದೇ ಸಾಕ್ಷಿ ಇಲ್ಲದ ಕೇಸ್‌ನಲ್ಲಿ ಸಿಎಂಗೆ ರಾಜ್ಯಪಾಲರು ನೋಟಿಸ್ ನೀಡೋದು ಎಷ್ಟು ಸರಿ: ಸಚಿವ ಮಹದೇವಪ್ಪ ಪ್ರಶ್ನೆ
ಈ ವರ್ಷ ಮೈಸೂರಿನಲ್ಲಿ 40 ಡಿಗ್ರಿವರೆಗೆ ಉಷ್ಣಾಂಶ ಇತ್ತು. ಇದಕ್ಕೆ ಕಾರಣ ಪರಿಸರವನ್ನು ಹಾಳು ಮಾಡುತ್ತಿರುವುದು. ಆದ್ದರಿಂದ ಪರಿಸರವನ್ನು ರಕ್ಷಿಸಲು ಎಲ್ಲರೂ ಪಣತೊಡಬೇಕು ಎಂದು ಕರೆ ನೀಡಿದರು. ಮಾನವ ಹಾಗೂ ಪ್ರಾಣಿ ಸಂಘರ್ಷ ನಡೆಯಲು ಕಾರಣ ಅರಣ್ಯ ನಾಶ ಮತ್ತು ಒತ್ತುವರಿ ಮಾಡುತ್ತಿರುವುದು ಇದನ್ನು ತಡೆಗಟ್ಟಬೇಕು ಎಂದರು. ಈ ಬಾರಿ ನಾಡಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತಿಳಿಸಿದ್ದಾರೆ. ಅದರಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.