ಶಾಸಕರ ಬೆಂಬಲದಿಂದ ಬಂದಿರುವ ಸ್ಥಾನವನ್ನು ಅವರಿಗೆ, ಇವರಿಗೆ ಕೊಡೋಕೆ ಅದು ನನ್ನ ಕೈಯಲ್ಲೂ ಇಲ್ಲ. ಧರ್ಮಗುರುಗಳ ಕೈಯಲ್ಲೂ ಇಲ್ಲ. ಅವರಿಗೊಂದು ಬೊಗಸೆ, ಇವರಿಗೊಂದು ಬೊಗಸೆ ಕೊಡಲು ಮುಖ್ಯಮಂತ್ರಿ ಸ್ಥಾನವೇನು ಕಡ್ಲೆಪುರಿಯೇ? ಎಂದು ಪ್ರಶ್ನಿಸಿದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ
ಬೆಂಗಳೂರು(ಜು.03): ಸಿದ್ದರಾಮಯ್ಯ ಅವರು ಶಾಸಕರ ಬೆಂಬಲ ಪಡೆದೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಆಯ್ಕೆಗೆ ಇದೇ ಪ್ರಮುಖ ಮಾನದಂಡ. ಅಂತಹ ಸ್ಥಾನವನ್ನು ಅವರಿಗೆ ಕೊಡಿ, ಇವರಿಗೆ ಕೊಡಿ ಎನ್ನುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಬೆಂಬಲದಿಂದ ಬಂದಿರುವ ಸ್ಥಾನವನ್ನು ಅವರಿಗೆ, ಇವರಿಗೆ ಕೊಡೋಕೆ ಅದು ನನ್ನ ಕೈಯಲ್ಲೂ ಇಲ್ಲ. ಧರ್ಮಗುರುಗಳ ಕೈಯಲ್ಲೂ ಇಲ್ಲ. ಅವರಿಗೊಂದು ಬೊಗಸೆ, ಇವರಿಗೊಂದು ಬೊಗಸೆ ಕೊಡಲು ಮುಖ್ಯಮಂತ್ರಿ ಸ್ಥಾನವೇನು ಕಡ್ಲೆಪುರಿಯೇ? ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಸಚಿವ ಮಹದೇವಪ್ಪ ಸ್ಪಷ್ಟನೆ
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಹೈಕಮಾಂಡ್ ವೀಕ್ಷಕರನ್ನು ಕಳಹಿಸಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿದೆ. ಈ ವೇಳೆ ಒಬ್ಬೊಬ್ಬ ಶಾಸಕರೂ ಚೀಟಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಯಾರಾಗಬೇಕೆಂದು ಹೆಸರು ಬರೆದುಕೊಟ್ಟಿದ್ದರು. ಅದನ್ನು ಲೆಕ್ಕ ಹಾಕಿದಾಗ ಸಿದ್ದರಾಮಯ್ಯ ಹೆಚ್ಚು ಶಾಸಕರ ಬೆಂಬಲ ಪಡೆದು ಆಯ್ಕೆ ಆಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೆಜಾರಿಟಿಯೇ ಪ್ರಮುಖ ಮಾನದಂಡ. ಅಂತಹ ಹುದ್ದೆಯನ್ನು ಅವರಿಗೆ, ಇವರಿಗೆ ಕೊಡೋಕೆ ಕಡ್ಳೆಪುರಿಯೂ ಅಲ್ಲ. ಅದು ಯಾರ ಕೈಯಲ್ಲೂ ಇಲ್ಲ ಎಂದರು.