ಸಿದ್ದರಾಮಯ್ಯ ವ್ಯರ್ಥ ಕಸರತ್ತು ನಡೆಸಿದ್ದಾರೆ, ಲಂಚ, ಪರ್ಸಂಟೇಜ್ ಆರೋಪ ರಾಜಕೀಯ ನಾಟಕಗಳು ಸಚಿವ ಕಾರಜೋಳ ವ್ಯಂಗ್ಯ
ಬಾಗಲಕೋಟೆ(ಜ.08): ವಿಧಾನಸೌಧದಲ್ಲಿ ಸಿಕ್ಕಿರುವ ಹಣ ಬಿಜೆಪಿಯವರದ್ದು ಎಂದು ಹೇಳುವ ಸಿದ್ದರಾಮಯ್ಯ ಅವರು ಅವರದ್ದೆ ಸರ್ಕಾರದಲ್ಲಿ ವಿಧಾನಸೌಧದಲ್ಲಿ ಒಬ್ಬ ಮಂತ್ರಿ ಕಚೇರಿಯಲ್ಲಿ ಹಣ ಸಿಕ್ಕಿತು. ಅದಕ್ಕೇನು ಉತ್ತರ ಹೇಳುತ್ತಾರೆ ಎಂದು ಸಚಿವ ಗೋವಿಂದ ಕಾರಜೋಳ ಅವರು ಪ್ರಶ್ನಿಸಿದ್ದಾರೆ.
ಶನಿವಾರ ಜಿಲ್ಲೆಯ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೇಲೆ ಲಂಚದ ಆರೋಪ, ಪರ್ಸಂಟೇಜ್ ಆರೋಪ ಮಾಡೋದು ಇವೆಲ್ಲವೂ ರಾಜಕೀಯ ನಾಟಕಗಳು. ಯಾರು ನಂಬುವುದಿಲ್ಲ. ಯಾರಾದರೂ ಹಣ ತಂದುಕೊಡುವವರು ವಿಧಾನಸೌಧಕ್ಕೆ ತಂದು ಕೊಡುತ್ತಾರಾ, ಈ ವಿಷಯದಲ್ಲಿ ಬಹುಶಃ ಸಿದ್ದರಾಮಯ್ಯಗೆ ಇದ್ದಷ್ಟುಅನುಭವ, ಹಣ ತಂದವನಿಗೂ ಇರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಇಂಥ ರಾಜಕೀಯ ನಾಟಕಗಳು ನಡೆಯುತ್ತಿರುತ್ತವೆ. ವಿಧಾನಸೌಧಕ್ಕೆ ಒಬ್ಬ ಇಂಜಿನಿಯರ್ ಹಣ ತಗೆದುಕೊಂಡು ಬಂದಿದ್ದಾನೆ ಎಂದು ಹೇಳಿದರೆ ಯಾರು ನಂಬುವುದಿಲ್ಲ. ಸಿದ್ದರಾಮಯ್ಯನವರು ಸುಮ್ಮನೆ ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ ಎಂದರು.
undefined
ಕೆಂಪಣ್ಣ ಶೇ.40 ಕಮೀಷನ್ ಬಗ್ಗೆ ಸಿದ್ದರಾಮಯ್ಯನ ಮನೆಯಲ್ಲಿ ಅರ್ಜಿ ಬರೆದುಕೊಂಡು ಬಂದು ಪ್ರೆಸ್‌ಮೀಟ್ ಮಾಡಿದ್ದಾನೆ. ಇವತ್ತಿಗೂ ಅವನು ಯಾವ ಕೆಲಸ ತೆಗೆದುಕೊಂಡಿದ್ದಾನೋ, ಯಾರಿಗೆ ಲಂಚ ಕೊಟ್ಟಿದ್ದಾನೆ ಅನ್ನುವುದರ ಬಗ್ಗೆ ಹೇಳುತ್ತಿಲ್ಲ. ತಾನು ಎಲ್ಲಿ ಕೆಲಸ ಮಾಡಿದ್ದಾನೆ ಅನ್ನುವುದು ಹೇಳುತ್ತಿಲ್ಲ. ಅವನು ನಿಜವಾದ ಕಾಂಟ್ರ್ಯಾಕ್ಟರ್ ಅಲ್ಲವೇ ಅಲ್ಲ. ಸುಳ್ಳು ಆರೋಪ ಮಾಡುವ ಮೂಲಕ ಸತ್ಯವನ್ನು ಸುಳ್ಳು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಕಾಣುತ್ತಿರುವ ಸಿಎಂ ಕುರ್ಚಿ ಕನಸು ನನಸಾಗುವುದಿಲ್ಲ. ಏಕೆಂದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷದ ಕುರಿತು ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ರಾಜ್ಯದ ಇತಿಹಾಸದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದ ದೇವರಾಜ ಅರಸ ಅವರೇ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದರಲ್ಲದೇ, ಅಂಥ ಜನಪ್ರಿಯ ನಾಯಕರಿಗೆ ಸಿಗಲಾರದ ಜನ ಮನ್ನಣೆ ಇದೀಗ ಪ್ರಾದೇಶಿಕ ಪಕ್ಷಗಳಿಗೆ ಹೇಗೆ ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.
ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡನ ಪುತ್ರ ಶಾಮಿಲಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ನನಗೆ ಉಳಿದವರ ಹಾಗೆ ಮಾತನಾಡಿ ಅಭ್ಯಾಸವಿಲ್ಲ. ತನಿಖೆ ನಂತರ ಎಲ್ಲವೂ ತಿಳಿಯಲಿದೆ ಎಂದು ಹೇಳಿದರು.
ಜೆ.ಪಿ ನಡ್ಡಾ ಅವರು ಹಿಂದುತ್ವದ ಮೇಲೆ ಬೆಳೆದು ಬಂದವರು. ಮಠ-ಮಾನ್ಯಗಳಿಗೆ ಭೇಟಿ ನೀಡಿ ಮಠಾಧೀಶರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಹಾಗಾಗಿ, ಹಿಂದು ಆಗಿ ನಡ್ಡಾ ಅವರು ಮಠ ಮಾನ್ಯಗಳಿಗೆ ಭೇಟಿ ನೀಡಿ ಮಠಾಧೀಶರನ್ನು ಗೌರವಿಸುವ ಕೆಲಸ ಮಾಡುತ್ತಿದ್ದಾರೆ ಅಂತ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.