ಜಾರಕಿಹೊಳಿ ಹೇಳಿಕೆ ರಾಜಕೀಯ ಪ್ರೇರಿತ: ಸಚಿವ ಶರಣ ಪ್ರಕಾಶ ಪಾಟೀಲ

By Kannadaprabha NewsFirst Published Nov 2, 2023, 11:00 PM IST
Highlights

ಯಾವುದೇ ಸಾರ್ವಜನಿಕ ಉದ್ದೇಶವಿಲ್ಲದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಮೇಶ ಜಾರಕಿಹೊಳಿ ಅವರು ಸಿಡಿ ಪ್ರಕರಣದ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ತಮ್ಮದೇ ಬಿಜೆಪಿ ಸರ್ಕಾರ ಇರುವಾಗ ಏನು ಮಾಡಿದ್ದಾರೆ ಆಗ ಸರ್ಕಾರಕ್ಕೆ ಕೇಳಬಹುದಿತ್ತು ಎಂದು ತಿವಿದ ಸಚಿವ ಡಾ. ಶರಣ ಪ್ರಕಾಶ ಪಾಟೀಲ 

ರಾಯಚೂರು(ನ.02): ರಮೇಶ ಜಾರಕಿಹೊಳಿ ಅವರು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ಬಗ್ಗೆ ನೀಡಿದ ಹೇಳಿಕೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವಂತಹದ್ದು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದರು.

ಸ್ಥಳೀಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಯಾವುದೇ ಸಾರ್ವಜನಿಕ ಉದ್ದೇಶವಿಲ್ಲದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಮೇಶ ಜಾರಕಿಹೊಳಿ ಅವರು ಸಿಡಿ ಪ್ರಕರಣದ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ತಮ್ಮದೇ ಬಿಜೆಪಿ ಸರ್ಕಾರ ಇರುವಾಗ ಏನು ಮಾಡಿದ್ದಾರೆ ಆಗ ಸರ್ಕಾರಕ್ಕೆ ಕೇಳಬಹುದಿತ್ತು ಎಂದು ತಿವಿದರು.

ಇಂಜಿನಿಯರ್‌ಗಳ ಕಳ್ಳಾಟದಿಂದಾಗಿ ಸಾವಿರಾರು ಎಕರೆ ಬೆಳೆಹಾನಿ: ಕುಡಿಯಲು ಸಹ ನೀರು ಇಲ್ಲದೆ ರೈತರ ಗೋಳಾಟ!

ತುಂಗಭದ್ರ ಎಡದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿಸಲು ಕ್ರಮ ವಹಿಸಲಾಗುವುದು. ಮೊದಲ ಹಂತವಾಗಿ ಕುಡಿಯುವ ನೀರಿಗಾಗಿ ಗಣೇಕಲ್ ಜಲಾಶಯವನ್ನು ಭರ್ತಿ ಮಾಡಲಾಗಿದೆ. ಇದೀಗ ಬಿಆರ್‌ನಲ್ಲಿ 11 ಅಡಿ ನೀರನ್ನು ಸಂಗ್ರಹಿಸಿದ್ದು, ಶೀಘ್ರದಲ್ಲಿಯೇ 15 ಅಡಿ ನೀರನ್ನು ಸಂಗ್ರಹಿಸಿ ರೈತರ ಜಮೀನು ಸೇರಿದಂತೆ ಕುಡಿಯುವ ನೀರನ್ನು ಒದಗಿಸಲಾಗುವುದು. ಮುಂದಿನ ನಾಲ್ಕು ದಿನಗಳಲ್ಲಿ ಕೆಳಭಾಗಕ್ಕೆ ನೀರು ಸರಬರಾಜು ಮಾಡಲಾಗುವುದು. ಜಿಲ್ಲೆಯಲ್ಲಿ ನೀರು ನಿರ್ವಹಣೆ ಸರ್ಕಾರ ವಿಫಲವಾಗಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಅತ್ತನೂರು ಸೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಳಿಗೆ ಸೂಚನೆ ನೀಡುತ್ತೇನೆ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಶೀಘ್ರವೇ ಸಭೆ ಮಾಡುತ್ತೇನೆ ಎಂದರು.

ರಾಯಚೂರು ಜಿಲ್ಲಾ ಸರ್ಕಾರಿ ಪಾಲಿಟೆಕ್ನಿ ಕಾಲೇಜು ಸೇರಿದಂತೆ ರಾಜ್ಯದ ಇತರೆ ಕಾಲೇಜುಗಳನ್ನು ಮೇಲ್ದರ್ಜೇಗೇರಿಸಲು ಚಿಂತನೆ ನಡೆಸಲಾಗಿದೆ. ಕಾಲೇಜುಗಳಲ್ಲಿ 7 ಹೊಸ ಕೋರ್ಸ್‌ಗಳ ಸೇರ್ಪಡೆ ಮಾಡುವುದರ ಜೊತೆಗೆ ಕಟ್ಟಡಗಳ ಆಧುನೀಕರಣಕ್ಕೆ 20 ಕೋಟಿ ರು. ಮೀಸಲಿಡಲಾಗುವುದು ಎಂದು ತಿಳಿಸಿದರು.

ಮೆಡಿಕಲ್ ಕಾಲೇಜುಗಳ ಬಗ್ಗೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿ ಪ್ರತಿ 10ಲಕ್ಷ ಜನಸಂಖ್ಯೆಗೆ 100 ಸೀಟ್ ಗಿಂತ ಹೆಚ್ಚು ಇರಬಾರದು ಎಂದು ಆದೇಶ ಮಾಡಿದ್ದು ಖಂಡನೀಯ ಇದು ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿರೋಧಿ ನೀತಿಯಾಗಿದೆ. ಈ ‌ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು ಅಗತ್ಯಬಿದ್ದರೆ ಕಾನೂನಿನ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಡಿಸಿ ಎಲ್.ಚಂದ್ರಶೇಖರ ನಾಯಕ, ಸಿಇಒ ರಾಹುಲ್‌ ತುಕಾರಾಂ ಪಾಂಡ್ವೆ ಹಾಗೂ ಇತರರು ಇದ್ದರು.

click me!