ನಮ್ಮದು ಡಬಲ್ ಇಂಜಿನ್ ಸರ್ಕಾರ. ಇದರಿಂದಾಗಿಯೇ ರೈತರಿಗೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲ ವರ್ಗದ ಜನರಿಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ತಲುಪುತ್ತಿವೆ. ಆದರೆ ಕಾಂಗ್ರೆಸ್‌ನಲ್ಲಿ ಪರಿಸ್ಥಿತಿಯೇ ಭಿನ್ನವಾಗಿದೆ ಎಂದ ಸುಧಾಕರ್
ತುಮಕೂರು(ಜು.27): ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಭಿವೃದ್ಧಿಯ ಡಬಲ್ ಇಂಜಿನ್ ಸರ್ಕಾರ ಬೇಕಾ ಅಥವಾ ಗೊತ್ತು ಗುರಿ ಇಲ್ಲದ ಡಬ್ಬಲ್ ಸ್ಟಿಯರಿಂಗ್ ಸರ್ಕಾರ ಬೇಕಾ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಜನೋತ್ಸವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಮ್ಮದು ಡಬಲ್ ಇಂಜಿನ್ ಸರ್ಕಾರ. ಇದರಿಂದಾಗಿಯೇ ರೈತರಿಗೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲ ವರ್ಗದ ಜನರಿಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳು ತಲುಪುತ್ತಿವೆ. ಆದರೆ ಕಾಂಗ್ರೆಸ್ ನಲ್ಲಿ ಪರಿಸ್ಥಿತಿಯೇ ಭಿನ್ನವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರು ಏರಿಗೆ ಎಳೆದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ನೀರಿಗೆ ಎಳೆಯುತ್ತಿದ್ದಾರೆ. ಇಂತಹ ಪಕ್ಷದಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಸಚಿವರು, ನಮ್ಮದು ಜನಪರ ಸರ್ಕಾರ, ಜನರಿಗಾಗಿ ಜಾರಿಗೊಳಿಸಿದ ಯೋಜನೆಗಳು ಜನರಿಗೆ ತಲುಪಿವೆ. ಹಾಗಾಗಿ ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ನವರು ವ್ಯಕ್ತಿ ಉತ್ಸವ ಮಾಡಲು ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಇವತ್ತಲ್ಲ ನಾಳೆ ಸೋಲಲಿದೆ, ಅವರೇನು 500 ವರ್ಷ ಅಧಿಕಾರದಲ್ಲಿ ಇರೋದಿಲ್ಲ: ಹರಿಪ್ರಸಾದ್
ಪ್ರಜಾಪ್ರಭುತ್ವವೇ ಜನರ ಹಬ್ಬವಾಗಿದೆ. ಇದನ್ನು ಬಿಜೆಪಿ ಮಾಡುತ್ತಿದೆ. ಜನರಿಗಾಗಿ, ಜನರಿಗೋಸ್ಕರ ಮತ್ತು ಜನರ ಮಧ್ಯೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ ವ್ಯಕ್ತಿಪೂಜೆ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇದೆಯೇ ಎಂದು ಪ್ರಶ್ನಿಸಿದರು. ಈ ಹಿಂದೆ ಕೋವಿಡ್ ಕಾರಣ ಯಾವುದೇ ಸಮಾವೇಶ ಮಾಡಲು ಸಾಧ್ಯವಾಗಲಿಲ್ಲ. ಜನರು ಪಕ್ಷದ ಪರ ಇದ್ದಾರೆ, ಪಕ್ಷದ ಮೇಲೆ ಜನರಿಗೆ ಅಭಿಮಾನ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಇದೇ 28ರಂದು ಸಮಾವೇಶದಲ್ಲಿ ಸೇರುವ ಜನಸಾಗರವನ್ನು ಕಂಡು ಬಿಜೆಪಿ ಶಕ್ತಿ ಏನು ಎಂಬುದು ಅರಿವಾಗಬೇಕು. ಆ ಮೂಲಕ 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಸುಲಭವಾಗಲಿದೆ ಎಂದರು.
ಮೊಯ್ಲಿ ಆರೋಪ ಕಾಂಗ್ರೆಸ್ ಅನ್ವಯ:
ಬಿಜೆಪಿ ಅಭಿವೃದ್ಧಿ ಮಾಡದೆ ಸಮಾವೇಶ ಮಾಡುತ್ತಿದೆ ಎಂಬ ಮಾಜಿ ಸಂಸದ ಮೊಯ್ಲಿ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮೊಯ್ಲಿ ಆರೋಪ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸ್ವತಃ ಅವರಿಗೇ ಅನ್ವಯಿಸಲಿದೆ. ದೇಶದಲ್ಲಿಯೇ ಕಾಂಗ್ರೆಸ್ ಶೂನ್ಯಕ್ಕೆ ತಲುಪುತ್ತಿದ್ದು, ಸಂಸದರಾಗಿ ಸೋತು ಮೊಯ್ಲಿ ಅವರೂ ಮೂಲೆ ಸೇರಿದ್ದಾರೆ ಹಾಗಾಗಿ ಅವರ ಆರೋಪ ಅವರ ಪಕ್ಷಕ್ಕೆ ಮತ್ತು ಅವರಿಗೆ ಸೂಕ್ತ ಎಂದು ತಿರುಗೇಟು ನೀಡಿದರು.
ಡಿಕೆಶಿ-ಸಿದ್ದು ಗುದ್ದಾಟದ ಮಧ್ಯೆ ಕಾಂಗ್ರೆಸ್‌ನಿಂದ ಸಿಎಂ ರೇಸ್‌ಗೆ ಲಿಂಗಾಯತ ಪ್ರಭಾವಿ ನಾಯಕ ಎಂಟ್ರಿ
ಬಿಜೆಪಿ ಶಿಸ್ತು ಮತ್ತು ಸಂಯಮದ ಪಕ್ಷವಾಗಿದೆ. ಸುರೇಶ್ ಗೌಡರ ಸೋಲು ಅನಿರೀಕ್ಷಿತ. 2023ರಲ್ಲಿ ಜಿಲ್ಲೆಯಲ್ಲಿಯೇ ಮೊದಲ ಟಿಕೆಟ್ ಸುರೇಶ್ ಗೌಡರಗೆ ಘೋಷಣೆಯಾಗಲಿದೆ. ನನಗಿರುವ ಮಾಹಿತಿ ಮತ್ತು ಗುಪ್ತಚರ ಮಾಹಿತಿಯಿಂದ ಹೇಳುತ್ತಿದ್ದು, ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಕೋರಿದರು. ಈ ವೇಳೆ ಮಾಜಿ ಶಾಸಕ ಸುರೇಶಗೌಡ ಸೇರಿದಂತೆ ಮತ್ತಿತರರು ಇದ್ದರು.
ಸಮಾಜ ಒಡೆಯುವುದು ಕಾಂಗ್ರೆಸ್ ಹುಟ್ಟುಗುಣ
ಒಂದು ಸಮುದಾಯದ ಬೆಂಬಲದಿಂದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯಕ್ಕೆ ಹೋಲಿಕೆ ಮಾಡುವುದು ಶೋಭೆ ತರಲ್ಲ. ಈ ಹೇಳಿಕೆಗೆ ಸಮುದಾಯವೂ ವಿರೋಧ ವ್ಯಕ್ತಪಡಿಸುತ್ತಿದೆ. ಹೋಲಿಕೆ ಮಾಡುವುದು, ವರ್ಗೀಕರಣ ಮಾಡುವುದು ಕಾಂಗ್ರೆಸ್ ಹುಟ್ಟುಗುಣ. ಧರ್ಮ ಧರ್ಮದ ಮಧ್ಯೆ, ವರ್ಗ ವರ್ಗಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಬಿರುಕು ಮೂಡಿಸುವುದು ಕಾಂಗ್ರೆಸ್ ಹುಟ್ಟುಗುಣ ಎಂದು ಡಾ.ಸುಧಾಕರ್ ಕಿಡಿಕಾರಿದರು.
ವ್ಯಕ್ತಿಯ ವೈಭವೀಕರಣ ಮಾಡುವುದರಿಂದ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ದಕ್ಕೆ ಬರಲಿದೆ. ನಾವು ಮಾಡುತ್ತಿರುವುದು ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಕಾರ್ಯಕ್ರಮ. ಅವರು ಇಡೀ ರಾಜ್ಯ ಸೇರಿಸಿ ಒಂದು ಸಮಾವೇಶ ಮಾಡುತ್ತಿದ್ದರೆ ನಾವು ರಾಜ್ಯದ ಐದು ಭಾಗಗಳಲ್ಲಿ ಐದು ಸಮಾವೇಶಗಳನ್ನು ಮಾಡುತ್ತಿದ್ದೇವೆ. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬಾರದು ಎಂದು ಸಚಿವ ಡಾ.ಸುಧಾಕರ್ ಹೇಳಿದರು.