
ಮಂಡ್ಯ (ಅ.20): ದಮ್ ಇದ್ದರೆ ತಮ್ಮ ಅವಧಿಯ ಹಗರಣಗಳ ತನಿಖೆಯನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಹಿಸಿ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ. ದಮ್, ತಾಕತ್ತು ಇರುವುದರಿಂದಲೇ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆ ನಡೆಸುವ ತಾಕತ್ತನ್ನು ತೋರ್ಪಡಿಸಿದ್ದಾರೆ. ಈಗಾಗಲೇ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ಪ್ರಾರಂಭವಾಗಿದೆ. ಎಲ್ಲ ಇಲಾಖೆಗಳಲ್ಲೂ ಸಂಬಂಧಿಸಿದ ವ್ಯಕ್ತಿ ಮೇಲೆ ತನಿಖೆ ನಡೆಸಿ ಎಲ್ಲವನ್ನೂ ಬಯಲಿಗೆಳೆಯಲಾಗುವುದು ಎಂದರು.
ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ನ.30 ಕೊನೆ ದಿನ: ಸಚಿವ ಅಶ್ವತ್ಥ್ ನಾರಾಯಣ
ಕಾಂಗ್ರೆಸ್ ಕಾಲದ ಅಕ್ರಮಗಳ ಬಯಲು ನಿಶ್ಚಿತ: ಭ್ರಷ್ಟಾಚಾರದ ಕೂಪದಲ್ಲೇ ಮುಳುಗಿಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. ಈಗಾಗಲೇ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆ ಪ್ರಾರಂಭವಾಗಿದೆ. ಎಲ್ಲ ಇಲಾಖೆಗಳಲ್ಲೂ ಸಂಬಂಧಿಸಿದ ವ್ಯಕ್ತಿ ಮೇಲೆ ತನಿಖೆ ನಡೆಸಿ ಎಲ್ಲವನ್ನೂ ಬಯಲಿಗೆಳೆಯಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಎಂದರೆ ಕರೆಪ್ಷನ್: ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ‘ಸಿ’ ಎಂದರೆ ಕಾಂಗ್ರೆಸ್ ಮತ್ತು ಕರೆಪ್ಷನ್. ಭ್ರಷ್ಟಾಚಾರ, ಕುಟುಂಬ ಆಧಾರಿತ ರಾಜಕಾರಣ ಎಲ್ಲವನ್ನೂ ಮಾಡುತ್ತಿರುವುದೇ ಕಾಂಗ್ರೆಸ್. ಇದಕ್ಕೆ ಯಾವುದೇ ರೀತಿಯ ಮಾನ್ಯತೆಯೂ ಇಲ್ಲ. ಜನವಿಶ್ವಾಸ ಇಲ್ಲದಂತಹ ಪಕ್ಷವೆಂದರೆ ಅದು ಕಾಂಗ್ರೆಸ್. ಇಂತಹ ಪಕ್ಷ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನೂ ಕಳೆದುಕೊಂಡಿದೆ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಷ್ಟೇ ಸದೃಢತೆ: ಬಿಜೆಪಿಗೆ ಸದೃಢತೆ ಇದೆ. ಜನರ ಪಕ್ಷವಾಗಿ, ಜನರ ಭಾವನೆಗೆ ಪೂರಕವಾಗಿದೆ. ಪ್ರಜಾಪ್ರಭುತ್ವ ಆಧಾರಿತವಾಗಿ ಬೆಳೆದಿರುವ ಪಕ್ಷ ಎಂದರೆ ಅದು ಭಾರತೀಯ ಜನತಾ ಪಾರ್ಟಿ. ಎಂತಹ ಸಣ್ಣ ಪುಟ್ಟಜಾತಿಯವರಾಗಿದ್ದರೂ, ಬಿಜೆಪಿಯಲ್ಲಿ ಯಾವ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ಆದರೆ ಕಾಂಗ್ರೆಸ್‌ನಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಅಧಿಕಾರ ಒಂದೇ ಕುಟುಂಬದ ಹಿಡಿತದಲ್ಲಿದೆ ಎಂದು ಟೀಕಿಸಿದರು.
ಅಧ್ಯಕ್ಷರಿಗಾಗಿ ಹುಡುಕಾಟ: ಈಗಾಗಲೇ ಎಲ್ಲೆಡೆ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿ ಅಧಿಕಾರ ಕಳೆದುಕೊಂಡಿದೆ. ಪ್ರತಿಪಕ್ಷದ ಸ್ಥಾನವನ್ನೂ ಕಳೆದುಕೊಂಡು ಅಧೋಗತಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಮಾಡಲು ಹುಡುಕಾಟ ನಡೆಯುತ್ತಿದೆ. ಈ ಪರಿಸ್ಥಿತಿಯನ್ನು ಹೊಂದಿರುವ ಕಾಂಗ್ರೆಸ್ ಅಧ್ಯಕ್ಷರ ಹುಡುಕಾಟಕ್ಕೆ ಎಷ್ಟುತಿಂಗಳು ಬೇಕಾಯಿತು?, ಹುಡುಕಾಟ ಮಾಡಿಕೊಂಡು ಬರಲಿ ಆಮೇಲೆ ನೋಡೋಣ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಎಚ್.ಆರ್.ಅರವಿಂದ್, ಪ.ನಾ.ಸುರೇಶ್, ಮಾಧ್ಯಮ ವಕ್ತಾರ ಸಿ.ಟಿ. ಮಂಜು, ನಾಗಾನಂದ ಇತರರು ಹಾಜರಿದ್ದರು.
ಭಾವನಾತ್ಮಕವಾಗಿ ಪ್ರಗತಿಯ ಪ್ರತಿಮೆ ನಿರ್ಮಾಣ: ಶ್ರೇಷ್ಠ ಆಡಳಿತಗಾರ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಮತ್ತು ಕೆಂಪೇಗೌಡ ಥೀಮ್ ಪಾರ್ಕ್ಗಾಗಿ ಮೃತ್ತಿಕೆಯನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸುವ ಸಂಬಂಧ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭಾವನಾತ್ಮಕವಾಗಿ ಪ್ರಗತಿಯ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
ಅಭಿವೃದ್ಧಿ ಸಹಿಸಿಕೊಳ್ಳಲಾಗದೆ ತಿಕ್ಕಾಟಕ್ಕಿಳಿದಿದ್ದಾರೆ: ಸಚಿವ ಅಶ್ವತ್ಥ್ ನಾರಾಯಣ
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಡೀ ದೇಶಕ್ಕೇ ನಂಬರ್ ಒನ್ ಸ್ಥಾನದದಲ್ಲಿದೆ. ಇದರ ಹತ್ತಿರದಲ್ಲೂ ಯಾವುದೇ ನಗರಗಳೂ ಇಲ್ಲ. ವಿಶ್ವ ಮಟ್ಟದಲ್ಲಿ 24ನೇ ಸ್ಥಾನವನ್ನು ಪಡೆದಿದೆ. ನಮಗೆಲ್ಲರಿಗೂ ಬದುಕು, ಶಕ್ತಿಯನ್ನು ಕೊಡುವಂತದ್ದಾಗಿದೆ. ವ್ಯವಸಾಯದಿಂದ ಹಿಡಿದು ಎಲ್ಲ ವೃತ್ತಿಗೂ ಸುಧಾರಣೆಯನ್ನು ತಂದು ಒಳ್ಳೆಯ ಆಡಳಿತ ತರುವ ನಿಟ್ಟಿನಲ್ಲಿ ಬೆಂಗಳೂರನ್ನು ಉತ್ತಮವಾಗಿ ರೂಪಿಸುವ ಮೂಲಕ ದೂರದೃಷ್ಟಿಯ ನಾಡನ್ನಾಗಿ ಕಟ್ಟಿದ್ದರು. ಈ ಕಾರಣಕ್ಕೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡಲಾಗಿದೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.