ನೈತಿಕ ಪೊಲೀಸ್‌ಗಿರಿ ದ.ಕ ಜಿಲ್ಲೆಗೆ ಕಳಂಕ. ಈ ಕಾರಣದಿಂದಲೇ ದ.ಕ. ಜಿಲ್ಲೆಗೆ ಜನರು ಬರಲು ಒಪ್ಪುತ್ತಿಲ್ಲ. ಇದೆಲ್ಲ ಆರೆಸ್ಸೆಸ್, ಬಜರಂಗದಳ ಕುತಂತ್ರ ಎಂದು ಆರೋಗ್ಯ ಸಚಿವ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮಂಗಳೂರು (ಫೆ.10): ನೈತಿಕ ಪೊಲೀಸ್‌ಗಿರಿ ದ.ಕ ಜಿಲ್ಲೆಗೆ ಕಳಂಕ. ಈ ಕಾರಣದಿಂದಲೇ ದ.ಕ. ಜಿಲ್ಲೆಗೆ ಜನರು ಬರಲು ಒಪ್ಪುತ್ತಿಲ್ಲ. ಇದೆಲ್ಲ ಆರೆಸ್ಸೆಸ್, ಬಜರಂಗದಳ ಕುತಂತ್ರ ಎಂದು ಆರೋಗ್ಯ ಸಚಿವ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿಯಲ್ಲಿ ವೈಯಕ್ತಿಕ ಕಾರಣಕ್ಕೆ ಜಗಳವಾಗಿ ಮುಸ್ಲಿಂ ವ್ಯಕ್ತಿಯೊಬ್ಬರ ಮರಣ ಸಂಭವಿಸಿತ್ತು. ಅದೇ ಹಿಂದೂ ಆಗಿದ್ದರೆ ಊರೆಲ್ಲ ಬೆಂಕಿ ಹಚ್ಚುತ್ತಿದ್ದರು. ಆದರೆ ಇತ್ತೀಚೆಗೆ ನೈತಿಕ ಪೊಲೀಸ್‌ಗಿರಿ ವಿರುದ್ಧ ಪೊಲೀಸ್ ಕ್ರಮವಾಗುತ್ತಿದೆ. ಇಂಥ ಕೃತ್ಯವನ್ನು ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಅಭಿವೃದ್ಧಿ ಮಾತಾಡಲ್ಲ: ಇಂತಹ ದ್ವೇಷ ರಾಜಕೀಯದಿಂದ ಅನಂತ್ ಕುಮಾರ್ ಹೆಗಡೆ, ಸಿಟಿ ರವಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಲಾಭ ಪಡೆದುಕೊಳ್ಳುತ್ತಾರೆ. ಅವರಿಗೆ ಇದೇ ಬಂಡವಾಳ, ಅಭಿವೃದ್ಧಿ ವಿಚಾರದಲ್ಲಿ ಮಾತನಾಡೋದಿಲ್ಲ. ಇದನ್ನೇ ಹಿಡ್ಕೊಂಡು ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಈ ರಾಜಕಾರಣ ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದರು. ದ.ಕ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕ ನಿರ್ಬಂಧ ವಿಚಾರದ ಕುರಿತು ನನಗೆ ಯಾವುದೇ ದೂರು ಬಂದಿಲ್ಲ. ನನ್ನ ಗಮನಕ್ಕೆ ಯಾರೂ ತಂದಿಲ್ಲ. ಈ ವಿಚಾರ ಬಂದರೆ ಚರ್ಚೆ ಮಾಡುತ್ತೇನೆ. ಆಟಕ್ಕೋಸ್ಕರ ಮತ್ತು ಜೂಜಿಗಾಗಿ ಕೋಳಿ ಅಂಕ ಮಾಡಲಾಗುತ್ತದೆ. ಆದರೆ ಜೂಜು ಹೆಚ್ಚಾದಾಗ ಕ್ರಮ ಆಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಪೂಂಜ ಮೊಂಡುವಾದ: ‘ಹಿಂದೂಗಳ ತೆರಿಗೆ ಹಣ ಹಿಂದೂಗಳಿಗೆ ಕೊಡಬೇಕು’ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ವಿವಾದಾತ್ಮಕ ಪೋಸ್ಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಉದ್ದೇಶ ಹರೀಶ್ ಪೂಂಜ ಪೋಸ್ಟ್‌ನಲ್ಲಿಲ್ಲ. ರಾಜ್ಯ ಸರ್ಕಾರದ ವಾದದಲ್ಲಿ ಸತ್ಯಾಂಶ ಇದ್ದರೆ ಹರೀಶ್ ಪೂಂಜ ಒಪ್ಪಿಕೊಳ್ಳಬೇಕು. ಒಪ್ಪಿಕೊಳ್ಳದೆ ಮೊಂಡುವಾದ ಪ್ರದರ್ಶನ ಮಾಡುವುದು ಸರಿಯಲ್ಲ ಎಂದರು. ಯುಪಿಎ ಅವಧಿಯಲ್ಲಿ ಎಷ್ಟು ಹಣ ಬಂದಿದೆ, ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಹಣ ಬಂದಿದೆ ಎನ್ನುವುದು ಜನರಿಗೆ ಗೊತ್ತಿದೆ.
ಕೃಷಿ ಅಭಿವೃದ್ದಿಯ ಬಗ್ಗೆ ರಾಜ್ಯ, ಕೇಂದ್ರದ ನಿಲುವುಗಳು ಬದಲಾಗಬೇಕಿದೆ: ವೀರಪ್ಪ ಮೊಯ್ಲಿ
ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಏನೂ ವೃದ್ಧಿಯಾಗಿಲ್ಲ. ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚು ಹಣ ಹೋಗುತ್ತಿದ್ದರೂ ಕೇಂದ್ರದಿಂದ ಬರೋದು ಕಡಿಮೆಯಾಗುತ್ತಿದೆ. ಹತ್ತು ವರ್ಷದಿಂದ ಒಂದೇ ಪ್ರಮಾಣದಲ್ಲಿ ಹಣ ಬರುತ್ತಿದೆ. ಇದರ ಬಗ್ಗೆ ಬಿಜೆಪಿ ಶಾಸಕರು ಯಾರೂ ಮಾತನಾಡುತ್ತಿಲ್ಲ. ಇದು ದುರ್ದೈವದ ಸಂಗತಿ ಎಂದು ವಿಷಾದಿಸಿದರು. ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಕುರಿತು ಪ್ರತಿಕ್ರಿಯಿಸಿ, ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ಸಹಿಸಲಾಗದು. ಇದನ್ನು ನಿಗ್ರಹಿಸುವ ಶಕ್ತಿ ಪೊಲೀಸ್ ಇಲಾಖೆಗೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.