
ಹಾಸನ (ಅ.07): ಬಸವರಾಜ ರಾಯರೆಡ್ಡಿ ಅವರಂತೆಯೇ ಅನೇಕರು ಮುಖ್ಯಮಂತ್ರಿ ಆಗುವ ಆಕಾಂಕ್ಷಿಗಳಾಗಿರಬಹುದು. ನಾನೂ ಆಕಾಂಕ್ಷಿ ಅಂತ ಹೇಳಬಹುದು. ಆದರೆ ತೀರ್ಮಾನ ಹೈಕಮಾಂಡ್ ಅವರದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇದ್ದಾರೆ, ಹೈಕಮಾಂಡ್ ತೀರ್ಮಾನದ ಪ್ರಕಾರವೇ ಸರ್ಕಾರ ನಡೆಯುತ್ತಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರ ಹೇಳಿಕೆಗಳಿಂದ ಈ ವಿಷಯ ಬಂದುಬಿಟ್ಟಿದೆ. ವಾಸ್ತವದಲ್ಲಿ ನಮ್ಮ ರಾಷ್ಟ್ರ ಮಟ್ಟದ ಕಾಂಗ್ರೆಸ್‌ನಲ್ಲಿ ಈ ವಿಷಯದ ಬಗ್ಗೆ ಯಾವುದೇ ಚರ್ಚೆಯೇ ಆಗಿಲ್ಲ. ಸಿಎಂ ಅವರು ಇದ್ದಾಗ ಇನ್ನೊಬ್ಬರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ನೂತನ ಕಟ್ಟಡಗಳ ಉಪಯೋಗ ಚೆನ್ನಾಗಿ ಆಗಬೇಕು: ನೂತನ ಸರ್ಕಾರಿ ಆಸ್ಪತ್ರೆಗೆ ಸುಸಜ್ಜಿತ ಪ್ರಯೋಗಾಲಯ, ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಿ ತಜ್ಞ ವೈದ್ಯರ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು ಈ ಆಸ್ಪತ್ರೆ ಉಪಯೋಗವನ್ನು ಸಾರ್ವಜನಿಕರು ಪಡೆಯಬೇಕೆಂದು ಹೇಳಿದರು. ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ತರೀಕೆರೆ ತಾಲೂಕು ಲಕ್ಕವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಆರೋಗ್ಯ ಮತ್ತು ಶಿಕ್ಷಣ ಈ ಎರಡು ಇಲಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯ, ಆರೋಗ್ಯ ಬಹಳ ಮುಖ್ಯ. ಹಾಗಾಗಿ ಸರ್ಕಾರ ಸರ್ವರಿಗೂ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಿಕೊಟ್ಟಿದೆ. ರಾಜ್ಯಾ ದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಕೊರತೆ ಇದ್ದಡೆ ಕೂಡಲೇ ಭರ್ತಿ ಮಾಡಲಾಗುತ್ತಿದೆ. ಕಡ್ಡಾಯ ವೈದ್ಯಕೀಯ ಸೇವೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ವಿವರಿಸಿದರು. ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಮತ್ತು ಜಿಪಂನಿಂದಲೂ ನೆರವು ನೀಡಬಹುದು.
ವೈದ್ಯರ ನೇಮಕ ಮತ್ತು ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಮಾತ್ರೆಗಳಿಗೆ ಕೊರತೆ ನೀಗಿಸಲು ಇ-ಹೊಸ ಸಾಫ್ಟ್ ವೇರ್ ಸಿದ್ದಪಡಿಸಲಾಗುತ್ತಿದೆ. ಬಿ.ಪಿ ಮತ್ತು ಶುಗರ್ ನಿಯಂತ್ರಿಸಿದರೆ ಅರ್ಧ ಕಾಯಿಲೆಗಳನ್ನೇ ಬಾರದಂತೆ ತಡೆಗಟ್ಟಬಹುದು. ಹೆರಿಗೆಗಾಗಿ ಖಾಸಗಿ ಆಸ್ಪತ್ರೆ ಹೋಗುವುದನ್ನು ತಪ್ಪಿಸಲು ಸರ್ಕಾರಿ ಆಸ್ಪತ್ರೆ ಗಳಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು. 260 ಹೊಸ ಅಂಬುಲೆನ್ಸ್ ಸೇವೆಃ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಆರೋಗ್ಯ ಇಲಾಖೆ ಹೆಚ್ಚು ಸದೃಢವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸೇವೆಗಾಗಿ ಹೊಸದಾಗಿ 260 ಹೊಸ ಅಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.