ರಾಜ್ಯದಲ್ಲಿ ವೀರಶೈವ ವರ್ಸಸ್‌ ಲಿಂಗಾಯತ

Kannadaprabha News   | Kannada Prabha
Published : Oct 07, 2025, 04:47 AM IST
Siddaramaiah

ಸಾರಾಂಶ

ಜಾತಿ ಗಣತಿ ಆರಂಭಕ್ಕೂ ಮುನ್ನ ಧುತ್ತನೆ ಎದ್ದು ಕುಳಿತ ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೊಡಬೇಕು, ಕಳೆದ ಬಾರಿಯಂತೆ ಈ ಸಲ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಗೆ ಕಟ್ಟುವ ಆಟ ನಡೆಯಲ್ಲ ಎಂದು ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಜಾತಿ ಗಣತಿ ಪ್ರಕ್ರಿಯೆ ಆರಂಭಕ್ಕೂ ಮುನ್ನ ಧುತ್ತನೆ ಎದ್ದು ಕುಳಿತ ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೊಡಬೇಕು, ಕಳೆದ ಬಾರಿಯಂತೆ ಈ ಸಲ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆಗೆ ಎಲ್ಲವನ್ನೂ ಕಟ್ಟುವ ಆಟ ನಡೆಯಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ವೀರಶೈವರನ್ನು ಬಿಟ್ಟು ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೇಳುವುದಕ್ಕೆ ಅವರದ್ದೇ ಸಂಪುಟದ ಸಹೋದ್ಯೋಗಿ ಈಶ್ವರ ಖಂಡ್ರೆ ವಿರೋಧ ಸೂಚಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆಯ ಹೇಳಿಕೆ ಕೊಟ್ಟಿದ್ದಾರೆ.

ಸಿದ್ದು ತಲೆಗೆ ಕಟ್ಟುವ ಆಟ ಈ ಬಾರಿ ನಡೆಯೋದಿಲ್ಲ

ಬೆಂಗಳೂರು : ಭೌಗೋಳಿಕವಾಗಿ ನಾವೆಲ್ಲರೂ ಭಾರತೀಯರು, ಹಿಂದುಗಳೇ. ಆದರೆ, ಲಿಂಗಾಯತರು ಚಾತುರ್ವರ್ಣ ಪದ್ಧತಿಯಿಂದ ಹೊರಗಿದ್ದು, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಆಗ್ರಹಿಸಿದ್ದಾರೆ.

ಇದೇ ವೇಳೆ, ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಬಂದಾಗ ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಗೆ ಕಟ್ಟುವ ಕೆಲಸ ಮಾಡಲಾಗಿತ್ತು. ಈಗ ಅದು ಆಗುವುದಿಲ್ಲ. ಈಗ ಅದನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಲು ಸಾಧ್ಯವಿಲ್ಲ. ಈ ಬಾರಿ ಅಂಥ ಯಾವುದೇ ಆಟ ನಡೆಯುವುದಿಲ್ಲ ಎಂದೂ ಹೇಳಿದ್ದಾರೆ.

ಲಿಂಗಾಯತ ಧರ್ಮದ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್‌, ದೇಶದಲ್ಲಿ ಸಿಖ್ಖ್‌, ಬೌದ್ಧ, ಜೈನರು ಇರುವಂತೆಯೇ ಬಸವ ಧರ್ಮ (ಲಿಂಗಾಯತ)ವೂ ಒಂದು. ನಾವೆಲ್ಲರೂ ಚಾತುರ್ವರ್ಣದಿಂದ ಹೊರಗಿದ್ದೇವೆ. ಭೌಗೋಳಿಕವಾಗಿ ನಾವು ಭಾರತೀಯರು ಮತ್ತು ಹಿಂದುಗಳೇ. ಆದರೂ, ನಮ್ಮ ಆಚರಣೆಗಳು ವಿಭಿನ್ನವಾಗಿದ್ದು ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದರು.ದಾವಣಗೆರೆಯಲ್ಲಿ ವೀರಶೈವ ಮಹಾಸಭಾದಲ್ಲಿ ವೀರಶೈವ-ಲಿಂಗಾಯತ ಹಿಂದುಗಳಲ್ಲ ಎಂದು ನಿರ್ಣಯ ತೆಗೆದುಕೊಂಡಿದ್ದಾರೆ. ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ನೀಡಬೇಕು ಎಂದು ನಿರ್ಣಯಿಸಿದ್ದಾರೆ. ಅವರೂ ನಮ್ಮ ಹಾದಿಯಲ್ಲೇ ಬರುತ್ತಿದ್ದಾರೆ ಎಂದು ಹೇಳಿದರು.

ವೀರಶೈವ-ಲಿಂಗಾಯತ ಪ್ರತ್ಯೇಕ

ಮಾಡಲು ಅಸಾಧ್ಯ: ಸಚಿವ ಖಂಡ್ರೆ

ಬೆಂಗಳೂರು : ಯಾವುದೇ ಶಕ್ತಿ ಬಂದರೂ ವೀರಶೈವ ಮತ್ತು ಲಿಂಗಾಯತರನ್ನು ಬೇರೆ ಮಾಡಲು ಸಾಧ್ಯವಿಲ್ಲ. ವೀರಶೈವ-ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಆಗ್ರಹಿಸಿದರು.ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ-ಲಿಂಗಾಯತರನ್ನು ಯಾವುದೇ ಶಕ್ತಿಯಿಂದಲೂ ಬೇರೆ ಮಾಡಲು ಸಾಧ್ಯವಿಲ್ಲ. ಇಬ್ಬರೂ ಒಂದೇ ಎಂಬುದನ್ನು ಲಿಂಗೈಕ್ಯ ಶ್ರೀ ಡಾ.ಶಿವಕುಮಾರ್‌ ಸ್ವಾಮೀಜಿ ಅವರೇ ಹೇಳಿದ್ದಾರೆ. ವೀರಶೈವ-ಲಿಂಗಾಯತರು ಸುಧಾರಿಸಿದರೆ ರಾಜ್ಯವೇ ಸುಧಾರಿಸುತ್ತದೆ. ಒಂದು ವೇಳೆ ವೀರಶೈವ-ಲಿಂಗಾಯತರು ಹಾಳಾದರೆ ರಾಜ್ಯವೇ ಹಾಳಾಗುತ್ತದೆ. ಹೀಗಾಗಿ ನಮ್ಮ ಸಮುದಾಯ ಒಗ್ಗಟ್ಟಿನಿಂದ ಸಾಗಿದರೆ ಸಮುದಾಯವಷ್ಟೇ ಅಲ್ಲದೆ, ರಾಜ್ಯವೇ ಪ್ರಗತಿಯತ್ತ ಸಾಗುತ್ತದೆ. ಅದಕ್ಕಾಗಿ ಎಲ್ಲರೂ ಆ ಕೆಲಸ ಮಾಡೋಣ ಎಂದರು.

ವೀರಶೈವ-ಲಿಂಗಾಯತ ಧರ್ಮ ಮಾನ್ಯತೆ:ನಾವೆಲ್ಲರೂ ಭೌಗೋಳಿಕವಾಗಿ ಹಿಂದುಗಳೇ. ಆದರೂ, ನಮ್ಮ ಆಚಾರ-ವಿಚಾರವನ್ನು ಗೌರವಿಸಿ ಸಿಖ್ಖ್‌, ಪಾರ್ಸಿ, ಜೈನರಿಗೆ ನೀಡಿದಂತೆ ವೀರಶೈವ-ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು. ಈ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ವಾತಂತ್ರ್ಯ ಪೂರ್ವದಿಂದ ಆಗ್ರಹಿಸುತ್ತಿದೆ. ಅದರಲ್ಲೂ 2000ದಲ್ಲಿ ನಡೆದ ಜನಗಣತಿಯಿಂದಲೂ ಪ್ರತ್ಯೇಕ ಧರ್ಮದ ಮಾನ್ಯತೆ ಪ್ರತಿಪಾದಿಸಲಾಗುತ್ತಿದೆ. ಮುಂದೆ ಕೇಂದ್ರ ಸರ್ಕಾರ ನಡೆಸಲಿರುವ ಜಾತಿಗಣತಿಯಲ್ಲಿ ನಮ್ಮ ಧರ್ಮಕ್ಕೆ ಪ್ರತ್ಯೇಕ ಕಾಲಂ ನೀಡಲು ಒತ್ತಾಯಿಸಲಾಗುವುದು ಎಂದು ಈಶ್ವರ್‌ ಖಂಡ್ರೆ ಹೇಳಿದರು.

ವೀರಶೈವ-ಲಿಂಗಾಯತ ಸಮಾನಾರ್ಥಕ ಪದಗಳು. ವೀರಶೈವ ಮತ್ತು ಲಿಂಗಾಯತ ಒಟ್ಟಿಗೆ ಇರಬೇಕು ಎಂಬುದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸ್ಪಷ್ಟ ನಿಲುವು ಎಂದರು.ಯಾವುದೇ ಪತ್ಯೇಕ ಧರ್ಮದ ವಿಚಾರಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನ ಸಮುದಾಯದ ನಾಯಕರು. ಕೆಲವರು ರಾಜಕೀಯ ದುರುದ್ದೇಶದಿಂದ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಸವಾದಿ ಶರಣರು ಕಂಡ ಸಮಸಮಾಜದ ಕನಸನ್ನು ಅನುಷ್ಠಾನಗೊಳಿಸುವ ಕೆಲಸದಲ್ಲಿ ಮುಖ್ಯಮಂತ್ರಿ ತೊಡಗಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.ವೀರಶೈವ, ಲಿಂಗಾಯತ

ಒಟ್ಟಿಗೆ ಇರಬೇಕೆಂಬುದು ನಮ್ಮ ನಿಲುವು

ಕೊಪ್ಪಳ : ‘ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮುನ್ನಲೆಗೂ ಇಲ್ಲ, ಹಿನ್ನೆಲೆಗೂ ಇಲ್ಲ. ಅಲ್ಲೇ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಸೋಮವಾರ ಕೊಪ್ಪಳಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮತ್ತೆ ಮುನ್ನಲೆಗೆ ಬಂತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಮುನ್ನಲೆಗೂ ಇಲ್ಲ, ಹಿನ್ನೆಲೆಗೂ ಇಲ್ಲ. ಪ್ರತ್ಯೇಕ ಧರ್ಮ ವಿಚಾರ ಎಲ್ಲೂ ಹೋಗಿಲ್ಲ, ಅಲ್ಲೇ ಇದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅವರು ಮನವಿ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡ್ತೀನಿ’ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಬೇಕು ಎಂಬ ಚರ್ಚೆ ಈಗಿನದ್ದಲ್ಲ. ಆ ಬೇಡಿಕೆ ಹಿಂದಿನಿಂದಲೂ ಇದೆ ಎಂದರು. ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಬೆಂಬಲಿಸಿದ್ದರಿಂದ ಕೈ ಸುಟ್ಟುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ, ‘ಯಾರು ಹೇಳಿದ್ದು ಹಾಗೆ?’ ಎಂದು ಮರುಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ?: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ
ನರೇಗಾ ಸಮರ: ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ' ಎಂದು ಪಂಥಾಹ್ವಾನ!