ಕಾಂಗ್ರೆಸ್‌ನವರೇ ಡಿಕೆಶಿ ಕಲೆಕ್ಷನ್‌ ಗಿರಾಕಿ ಅಂದ ಮೇಲೆ ನಮ್ಮ ವಿಶ್ಲೇಷಣೇ ಏನಿದೆ?: ಸಚಿವ ಅಶ್ವತ್ಥ್‌

By Kannadaprabha News  |  First Published Oct 14, 2021, 3:19 PM IST

* ಐಟಿ ದುರ್ಬಳಕೆ ಪ್ರಶ್ನೆಯೇ ಇಲ್ಲ. ಕಾನೂನು ಪಾಲಿಸಲಾಗುತ್ತಿದೆ
*  ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ಹಂಚಿಕೆ ಸಿಎಂ ನಿಶ್ಚಯಿಸುತ್ತಾರೆ
* ಸಿದ್ದು, ಎಚ್‌ಡಿಕೆ ಆರೋಪ, ಪ್ರತ್ಯಾರೋಪಕ್ಕೆ ನಾನೇನು ಪ್ರತಿಕ್ರಿಯಿಸುವುದಿಲ್ಲ  
 


ಬೆಳಗಾವಿ(ಅ.14):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar) ಕಲೆಕ್ಷನ್‌ ಗಿರಾಕಿ ಎಂದು ಕಾಂಗ್ರೆಸ್‌(Congress) ನಾಯಕರೇ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಹೇಳಿದ ಮೇಲೆ ನಮಗೇನಿದೆ ಕೆಲಸ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ(CN Ashwathnarayan) ಹೇಳಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಕ್ಷದವರೇ ಹೇಳಿಕೆ ಕೊಟ್ಟ ಮೇಲೆ ವಿಶ್ಲೇಷಣೆ ಮಾಡುವುದಕ್ಕೆ ಅವಕಾಶವೇ ಇಲ್ಲ. ಅವರ ಪಕ್ಷದವರೇ ಹೇಳಿದ್ದಾರೆಂದರೆ ಅರ್ಥ ಮಾಡಿಕೊಳ್ಳಿ ಯಾವ ಪರಿಸ್ಥಿತಿಯಿದೆ ಎಂದರು.

Tap to resize

Latest Videos

ಬೆಂಗಳೂರು(Bengaluru) ಉಸ್ತುವಾರಿ ಸಚಿವ ಸ್ಥಾನ ಹಂಚಿಕೆಯನ್ನು ಮುಖ್ಯಮಂತ್ರಿಗಳೇ(Chief Minister) ನಿಶ್ಚಯಿಸುತ್ತಾರೆ. ಅವರೇ ಮುಂದುವರೆಯುತ್ತಾರೋ ಅಥವಾ ಬೇರೆಯವರಿಗೆ ಅವಕಾಶ ಕೊಡುತ್ತಾರೋ ಎಂಬುದನ್ನು ಕಾದು ನೋಡಬೇಕು. ಈ ವಿಚಾರವಾಗಿ ಸಿಎಂ ಎಲ್ಲರ ಜೊತೆಗೆ ಸಮಾಲೋಚನೆ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಉಸ್ತುವಾರಿ ಜವಾಬ್ದಾರಿ ನನಗೆ ನೀಡಿದರೆ ಖಂಡಿತವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ಸ್ವಪಕ್ಷದವರಿಂದಲೇ ಡಿಕೆಶಿ ಅಸಲಿ ಸತ್ಯ ಬಯಲು: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಬಿಜೆಪಿ

ರಮೇಶ ನಮ್ಮ ನಾಯಕ:

ಗೋಕಾಕ(Gokak) ಶಾಸಕ ರಮೇಶ ಜಾರಕಿಹೊಳಿ(Rameshn Jarkiholi) ನಮ್ಮ ನಾಯಕರು. ಎಲ್ಲ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಅವರ ಭಾವನೆಗೆ ಪೂರಕವಾಗಿ ಪಕ್ಷದಲ್ಲಿ ನಡೆದುಕೊಳ್ಳುತ್ತೇವೆ. ಅವರಿಗೆ ನೋವಾಗಿದೆ. ಅದು ಸಹಜ. ಆದರೆ ಅವರು ನಮ್ಮ ನಾಯಕರು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನಗಳು ನಮ್ಮ ಪಕ್ಷದಲ್ಲಾಗುತ್ತದೆ. ಅವರ ಸಹಕಾರ, ಕಾರ್ಯವನ್ನು ಪಕ್ಷ ಯಾವಾಗಲೂ ಸ್ಮರಿಸುತ್ತದೆ ಎಂದು ಹೇಳಿದರು.

ಸರ್ಕಾರದಿಂದ(Government) ಐಟಿ(Income Tax) ದುರ್ಬಳಕೆಯಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಐಟಿ ದುರ್ಬಳಕೆ ಪ್ರಶ್ನೆಯೇ ಇಲ್ಲ. ಕಾನೂನು ಪಾಲಿಸಲಾಗುತ್ತಿದೆ. ಯಾರೇ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಆರೋಪ, ಪ್ರತ್ಯಾರೋಪಕ್ಕೆ ನಾನೇನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
 

click me!