
ಚಾಮರಾಜನಗರ(ಮೇ.26): ತನಗೇ ಎಲ್ಲವೂ ಗೊತ್ತು ಎನ್ನುವ ಆಟಿಟ್ಯೂಡ್, ಎಲ್ಲರನ್ನೂ ಏಕವಚನದಲ್ಲಿ ಕರೆಯುವ ವರ್ತನೆ ಈ ದೇಶದಲ್ಲಿ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಹೇಳದೇ ಪರೋಕ್ಷವಾಗಿ ಶಿಕ್ಷಣ ಸಚಿವ ನಾಗೇಶ್ ಕಿಡಿಕಾರಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತನ್ನೊಬ್ಬನಿಗೇ ಎಲ್ಲಾ ಗೊತ್ತು ಎನ್ನುವ ಆಟಿಟ್ಯೂಡ್ 100 ವರ್ಷದ ಕಾಂಗ್ರೆಸ್‌ಗೆ ಶೋಭೆ ತರಲ್ಲ, ಪಠ್ಯ ಪರಿಷ್ಕರಣೆ ಸಮಿತಿ ರಚಿಸಿ 8 ತಿಂಗಳುಗಳಾಗಿದ್ದು, ಈಗ ರಾಜಕೀಯವಾಗಿ ಮಾತನಾಡುತ್ತಿದ್ದಾರೆ, ರೋಹಿತ್ ಚಕ್ರತೀರ್ಥ ಪೋಸ್ಟ್ ಬಗ್ಗೆ ಅವರ ಸರ್ಕಾರವೇ ಬಿ ರಿಪೋರ್ಟ್ ಕೊಟ್ಟಿದ್ದು ವಾಟ್ಸ್ ಅಪ್ ಸಂದೇಶ ಅವರು ಹಂಚಿಕೊಂಡಿದ್ದಾರಷ್ಟೇ ಎಂದು ಚಕ್ರತೀರ್ಥ ಪರ ಬ್ಯಾಟ್ ಬೀಸಿದರು. ಮುಸ್ಲಿಂ ಮತ ಬಲಪಡಿಸಿಕೊಳ್ಳಲು ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಫೇಲಾಯಿತು, ಕೊರೋನಾ ನಂತರ ಶಾಲಾರಂಭದ ಬಗ್ಗೆ ಕಾಂಗ್ರೆಸ್ ಟೀಕಿಸಿ ಫೇಲಾಯಿತು, ಯುಪಿ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಕಾಣೆಯಾಗುವ ಪರಿಸ್ಥಿತಿ ಇರುವುದರಿಂದ ಎಲ್ಲಾದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಎಂದರು.
Chamarajanagar: ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಕ್ಕೆ ಕಾಂಗ್ರೆಸ್ ಸದಸ್ಯರ ರಾಜೀನಾಮೆ!
ಭಗತ್ ಸಿಂಗ್, ಬಸವಣ್ಣ, ನಾರಾಯಣಗುರು ಪಠ್ಯ ಕೈ ಬಿಟ್ಟಿರುವುದು ಸುಳ್ಳು ಎಂದು ಗೊತ್ತಾದಾಗ ಹತಾಶರಾಗಿ ಈಗ ಜಾತಿ ತರುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಎಲ್ಲ ಕಾಲದಲ್ಲೂ ಪಠ್ಯ ಪರಿಷ್ಕರಿಸಿದಾಗ ಗೊಂದಲ, ವಿರೋಧ ಇದ್ದೇ ಇದೆ. ಆದರೆ, ತಾತ್ವಿಕ ಭಿನ್ನತೆ- ಚರ್ಚೆಗೆ ಅಭ್ಯಂತರವಿಲ್ಲ ಆದರೆ ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ, ಪಠ್ಯದ ವಿಚಾರ ಇಟ್ಟುಕೊಂಡು ಹಿಂದೂ ಸಮಾಜವನ್ನು ಕಾಂಗ್ರೆಸ್ ಒಡೆಯುವ ಯತ್ನ ಮಾಡುತ್ತಿದೆ, ವೈಚಾರಿಕವಾಗಿ ಏನೂ ಇಲ್ಲದಿದ್ದಾಗ ಪೊಳ್ಳು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಠ್ಯ ತಡವಾಗಲು ಉಕ್ರೇನ್ ಯುದ್ಧ ಕಾರಣ- ದೇವನೂರ ಮಹದೇವರನ್ನು ಭೇಟಿ ಮಾಡುತ್ತೇನೆ:
ಶೇ.80 ಪಠ್ಯ ವಿತರಣೆಯಾಗಿದ್ದು ಇನ್ನೂ ಒಂದು ತಿಂಗಳು ಅವಕಾಶವಿದೆ, ಈಗ ಶಾಲೆಗಳಲ್ಲಿ ಕಲಿಕಾ ಚೇತರಿಕೆ ನಡೆಯುತ್ತಿದ್ದು ಪಠ್ಯ ಆರಂಭವಾಗಲು ಒಂದು ತಿಂಗಳಿದ್ದು ಶೀಘ್ರ ವಿತರಣೆಯಾಗಲಿದೆ. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಪೇಪರ್ ಕೊರತೆ ಉಂಟಾಗಿದ್ದರ ಪರಿಣಾಮ ಪಠ್ಯ ಮುದ್ರಣ ತಡವಾಯಿತು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಪಠ್ಯಕ್ಕೆ ತಮ್ಮ ಬರಹ ಸೇರಿಸಲು ಕೊಟ್ಟಿದ್ದ ಅನುಮತಿ ಹಿಂಪಡೆಯುವೆ ಎಂಬ ದೇವನೂರು ಮಹಾದೇವ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗಾಗಲೇ, ಪಠ್ಯ ಮುದ್ರಣವಾಗಿ ವಿತರಿಸಲಾಗುತ್ತಿದೆ, ಅವರು ಯಾರ ಒತ್ತಡದಿಂದ ಈ ರೀತಿ ಅನುಮತಿ ನಿರಾಕರಿಸಿದ್ದಾರೆಂದು ಗೊತ್ತಿಲ್ಲ, ಅವರ ಬುದ್ಧಿವಂತಿಕೆ, ಹೋರಾಟದ ಬಗ್ಗೆ ಅಪಾರ ಕಳಕಳಿ ಇದ್ದು ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
Chamarajanagar: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್‌ಗಳ ಕೊರತೆ, ಶಸ್ತ್ರಕ್ರಿಯೆ ಸ್ಥಗಿತ!
ಮೊಸರಲ್ಲಿ ಕಲ್ಲು ಹುಡುಕುವ ಎಚ್ಡಿಕೆ:
ಮಳಲಿ ಮಂದಿರದ ತಾಂಬೂಲ ಪ್ರಶ್ನೆಯು ಕೇಶವಕೃಪಾದಲ್ಲಿ ನಿರ್ಧಾರವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತಿಗೆ ಕಿಡಿಕಾರಿದ ಅವರು, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕುವಂತೆ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾರೆ. ವಾರಾಣಸಿ ಮಸೀದಿ ವಿಚಾರ ಹಾಗಾದರೆ ನಾಗಪುರದಲ್ಲಿ ನಿರ್ಧಾರವಾಯಿತೇ..? ಸರ್ವೇ ಪ್ರಕಾರ ಮುಸ್ಲಿಂರು ಕೂಡ ಬಿಜೆಪಿ ಯತ್ತ ಬರುತ್ತಿರುವುದರಿಂದ ದಳ ಮತ್ತು ಕಾಂಗ್ರೆಸ್ ವಿಚಲಿತರಾಗಿದ್ದಾರೆ, ಆರ್ ಎಸ್ ಎಸ್ ವಿರುದ್ಧ ಮಾತನಾಡಿದರೇ ಮುಸ್ಲಿಂ ಮತ ಬಲಪಡಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ವಿಜಯೇಂದ್ರ ಟಿಕೆಟ್ ನಿರಾಕರಣೆ ವರಿಷ್ಠರ ತೀರ್ಮಾನ:
ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿರುವುದು ಪಕ್ಷದ ಒಳಗಿನ ನಿರ್ಣಯ, ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲಾ, ಈಗಾಗಲೇ ಸಂಘಟನೆಯ ಜವಾಬ್ದಾರಿಯನ್ನು ಅವರಿಗೆ ಕೊಡಲಾಗಿದೆ, ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಬಗ್ಗೆ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.