* ಅವಕಾಶ ಕೈತಪ್ಪಿದ್ದಕ್ಕೆ ಯಾರನ್ನೂ ದೂರಲಾರೆ
* ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಒತ್ತು ನೀಡುವೆ
* ನಾನು ಯಾವುದೇ ಹಿನ್ನಡೆಗೂ ಅಂಜುವ ಪ್ರಮಯವೇ ಇಲ್ಲ
ಪಿರಿಯಾಪಟ್ಟಣ/ಬೆಟ್ಟದಪುರ(ಮೇ.26): ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಲು ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಎಂದೂ ಲಾಬಿ ಮಾಡಿಲ್ಲ. ಪಕ್ಷದ ಮುಖಂಡರ ಸಲಹೆಯಂತೆ ನನ್ನ ಹೆಸರು ಶಿಫಾರಸು ಮಾಡಲಾಗಿತ್ತು ಎಂದು ತಿಳಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈಗ ಅವಕಾಶ ಕೈತಪ್ಪಿದ್ದರಿಂದ ಯಾರನ್ನೂ ದೂರುವುದಿಲ್ಲ ಎಂದು ಹೇಳಿದ್ದಾರೆ.
undefined
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಅತ್ತಿಗೋಡಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎಂಎಲ್ಸಿ ಟಿಕೆಟ್ ನೀಡದ್ದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ಇದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವರ್ಚಸ್ಸು ಕುಂದಿದೆ ಎಂದು ಹೇಳಲಾಗದು, ಬಿಜೆಪಿ ಎಂದರೆ ಬಿಎಸ್‌ವೈ, ಬಿಎಸ್‌ವೈ ಎಂದರೆ ಬಿಜೆಪಿ ಎಂಬುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ, ಪಕ್ಷ ನನಗೆ ನೀಡಿರುವ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವೆ ಎಂದರು.
MLC Election ವಿಜಯೇಂದ್ರಗೆ ಅವಕಾಶ ನೀಡೊದು ಮೋದಿ,ನಡ್ಡಾಗೆ ಬಿಟ್ಟ ವಿಚಾರ, ಯಡಿಯೂರಪ್ಪ!
ಜೊತೆಗೆ ಟಿಕೆಟ್ ಕೈ ತಪ್ಪಲು ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾರಣ ಎಂಬುದು ಊಹಾಪೋಹವಷ್ಟೇ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಮತ್ತು ಅವರನ್ನು ದೂರುವುದಿಲ್ಲ ಎಂದರು.
ಇದೇ ವೇಳೆ ಯಡಿಯೂರಪ್ಪನವರ ಹಾದಿಯಲ್ಲೆ ಹೋರಾಟಗಳನ್ನು ಮಾಡಿ ಕಷ್ಟಗಳನ್ನು ಎದುರಿಸಿ ನಿಮ್ಮೆಲ್ಲರ ಬೆಂಬಲ ನಮ್ಮ ಮೇಲೆ ತೋರುವ ದಿನಗಳು ಮುಂದೆ ಬರುತ್ತವೆ. ಅಲ್ಲದೆ ಹಿತೈಷಿಗಳು ಹಿಂಬಾಗಿನಿಂದ ದ್ರೋಹ ಬಗೆಯುತ್ತಿದ್ದರೆ, ಅವುಗಳನ್ನು ನಾನು ಎದುರಿಸಿ ಮುಂದೆ ಬರುವ ದಿನಗಳು ಬರುತ್ತವೆ. ಆದ್ದರಿಂದ ನಾನು ಯಾವುದೇ ಹಿನ್ನಡೆಗೂ ಅಂಜುವ ಪ್ರಮಯವೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಒತ್ತು ನೀಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ಅವರು ತಿಳಿಸಿದರು.