ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ಜರುಗಿದ ಭಾರತ ಐಕ್ಯತಾ ಯಾತ್ರೆಯ ಸಾರ್ವಜನಿಕ ಸಮಾವೇಶವನ್ನು ಸರ್ಕಸ್ ಕಂಪನಿಗೆ ಹೋಲಿಸಿದ ಜಿಲ್ಲಾ ಸಚಿವ ಬಿ.ಶ್ರೀರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ‘ಸರ್ಕಸ್’ನ ಜೋಕರ್‌ನಂತೆ ಕಂಡು ಬಂದರು ಎಂದು ಕುಹಕವಾಡಿದ್ದಾರೆ.
ಬಳ್ಳಾರಿ (ಅ.17): ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶನಿವಾರ ಜರುಗಿದ ಭಾರತ ಐಕ್ಯತಾ ಯಾತ್ರೆಯ ಸಾರ್ವಜನಿಕ ಸಮಾವೇಶವನ್ನು ಸರ್ಕಸ್ ಕಂಪನಿಗೆ ಹೋಲಿಸಿದ ಜಿಲ್ಲಾ ಸಚಿವ ಬಿ.ಶ್ರೀರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ‘ಸರ್ಕಸ್’ನ ಜೋಕರ್‌ನಂತೆ ಕಂಡು ಬಂದರು ಎಂದು ಕುಹಕವಾಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀರಾಮುಲು, ಬಳ್ಳಾರಿಯಲ್ಲಿ ನಡೆದ ಭಾರತ ಐಕ್ಯತಾ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಸಿದ್ದರಾಮಯ್ಯ ಸರ್ಕಸ್‌ನ ಜೋಕರ್ ತರಹ ಕಾಣುತ್ತಿದ್ದರು. ಸಿದ್ದರಾಮಯ್ಯ ಯುದ್ಧ ಭೂಮಿಯಲ್ಲಿನ ಉತ್ತರಕುಮಾರನಂತೆ ನನಗೆ ಕಂಡ ಬಂದರು ಎಂದು ಏಕವಚನದಲ್ಲಿಯೇ ಹರಿಹಾಯ್ದರು.
ನಾನು ಪೆದ್ದನಲ್ಲ. ಸಿದ್ದು ಪೆದ್ದ: ಸಿದ್ದರಾಮಯ್ಯ ನನ್ನನ್ನು ಪೆದ್ದ ಎಂದಿದ್ದಾನೆ. ನಾನು ಪೆದ್ದನಲ್ಲ. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಪೆದ್ದರು. ಅವರಂತಹ ಪೆದ್ದರು ಯಾರಿಲ್ಲ. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಶಕುನಿ ಇದ್ದಂತೆ. ದುಷ್ಟ, ಸ್ವಾರ್ಥಿ ರಾಜಕಾರಣಿ. ಜೆಡಿಎಸ್ ಹಾಳುಮಾಡಿ ಕಾಂಗ್ರೆಸ್‌ಗೆ ಬಂದಿದ್ದಾನೆ. ಕಾಂಗ್ರೆಸ್‌ನಲ್ಲಿ ಶಕುನಿ ಬುದ್ಧಿ ತೋರಿಸುತ್ತಿದ್ದಾನೆ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷದ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ ಅವರನ್ನು ಸೋಲಿಸಿದ. ಖರ್ಗೆ ಅವರನ್ನು ಸೋಲಿಸಲು ಕುತಂತ್ರ ಮಾಡಿದ. ಇದೀಗ ಡಿ.ಕೆ.ಶಿವಕುಮಾರ್ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾನೆ. ಆತನ ಪಾಪದ ಕೊಡ ತುಂಬಿದೆ.
ಬಿಜೆಪಿಯ 150 ವೇಗಕ್ಕೆ 100 ಜೋಡೋ ಯಾತ್ರೆ ಮಾಡಿದರೂ ಆಗಲ್ಲ: ಶ್ರೀರಾಮುಲು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡಿದ್ದಾನೆ. ಬಾದಾಮಿಯಲ್ಲಿ ಬರೀ 1400 ಮತಗಳಿಂದ ಗೆದ್ದು ಬಂದ. ರಾಜಕೀಯದಿಂದ ಶಾಶ್ವತವಾಗಿ ಮನೆಗೆ ಹೋಗುವ ಕಾಲ ಆತನಿಗೆ ಸನ್ನಿಹಿತವಾಗಿದೆ ಎಂದರು. ನನ್ನ ರಾಜಕೀಯ ಜೀವನದಲ್ಲಿ ಎಂದೂ ನಂಬಿಕೆ ದ್ರೋಹ ಮಾಡಿಲ್ಲ. ಸಿದ್ದರಾಮಯ್ಯನಗಿಂತ ಬುದ್ಧಿವಂತನಲ್ಲದಿರಬಹುದು. ಆದರೆ, ಆತನಿಗಿಂತ ಹೆಚ್ಚಿನ ಮಾನವೀಯ ಗುಣವಿದೆ. ಹೃದಯ ವೈಶಾಲತೆ ಇದೆ. ನಂಬಿಕೆ ದ್ರೋಹ ಮಾಡುವುದು ನನ್ನ ಜಾಯಮಾನದಲ್ಲಿಯೇ ಇಲ್ಲ. ‘ನೀನು ನನ್ನ ಇತಿಹಾಸ ತೆಗೆದು ನೋಡು. ನಾನು ಈವರೆಗೆ ಯಾರಿಗೂ ಮೋಸ ಮಾಡಿಲ್ಲ. ರಾಜಕೀಯವಾಗಿ ಶಕುನಿ ಬುದ್ಧಿ ತೋರಿಸಿಲ್ಲ’ ಎಂದು ಸಿದ್ಧರಾಮಯ್ಯ ವಿರುದ್ಧ ನೇರವಾಗಿ ಹರಿಹಾಯ್ದರು.
ಸೋನಿಯಾ ಪ್ಯಾಕೇಜ್ ಬೋಗಸ್: ಸೋನಿಯಾ ಗಾಂಧಿ ಅವರು ಬಳ್ಳಾರಿಯಿಂದ ಗೆದ್ದ ಬಳಿಕ ಘೋಷಿಸಿದ ಪ್ಯಾಕೇಜ್ ಬೋಗಸ್. .3300 ಕೋಟಿ ಪ್ಯಾಕೇಜ್ ಯಾರ ಜೇಬಿಗೆ ಸೇರಿತು ಸಿದ್ಧರಾಮಯ್ಯನೇ ಹೇಳಬೇಕು. ಈ ಪ್ಯಾಕೇಜ್‌ನಡಿ ಕೆಲಸ ಮಾಡಿದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿದರು. ‘ಸಿದ್ಧರಾಮಯ್ಯ ನನಗೆ ಸವಾಲು ಹಾಕಿದ್ದಾನೆ. ಅಭಿವೃದ್ಧಿ ಕುರಿತು ಚರ್ಚಿಸಲು ನಾನು ಸಿದ್ಧನಿದ್ದೇನೆ. ಪಾವಗಡ ಚುನಾವಣೆಯಲ್ಲಿ ಸೋಲುಂಡ ವಿ.ಎಸ್.ಉಗ್ರಪ್ಪ ಬೇಡ. ನೀನೇ ಬಾ. ದಿನಾಂಕ, ಸಮಯ, ಜಾಗ ನೀನೇ ಹೇಳು. ಅಲ್ಲಿಗೆ ಬರುತ್ತೇನೆ. ಇಲ್ಲವೇ ಐಕ್ಯತಾ ಯಾತ್ರೆಯ ಸಾರ್ವಜನಿಕ ಸಭೆ ನಡೆಸಿದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿಯೇ ಚರ್ಚೆ ಮಾಡೋಣ ಬಾ..’ ಎಂದು ಪ್ರತಿ ಸವಾಲು ಹಾಕಿದರು.
ಸಿದ್ಧರಾಮಯ್ಯ ವಕೀಲ ಎಂದು ಹೇಳಿಕೊಳ್ಳುತ್ತಿದ್ದಾನೆ. ಆತ ಕೋರ್ಚ್‌ಗೆ ಹೋಗಿ ವಕೀಲ ವೃತ್ತಿ ಮಾಡುತ್ತಿಲ್ಲ. ಇಂತಹವರನ್ನು ಸಂಡೇ-ಮಂಡೇ ಲಾಯರ್ ಅಂತ ಕರೀತಾರೆ. ಅಂದ್ರೆ ಬೆಂಕಿ ಹಚ್ಚುವ ಕೆಲಸ ಮಾಡೋದು ಅಂತ ಹೇಳ್ತಾರೆ ಎಂದರಲ್ಲದೆ, ಸಿದ್ಧರಾಮಯ್ಯ, ರಾಹುಲ್‌ಗಾಂಧಿಯಂತಹವರು ನೂರು ಪಾದಯಾತ್ರೆ ಮಾಡಲಿ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ನನ್ನ ಜಿಲ್ಲೆಯ ಜನರು ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಮುಂದೆಯೂ ಬೆಂಬಲಿಸುತ್ತಾರೆ ಎಂದು ತಿಳಿಸಿದರು. ಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಹೊತ್ತಿರುವ ಕಾಂಗ್ರೆಸ್ಸಿಗರನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದರು.
ನನ್ನನ್ನು ಗೇಲಿ ಮಾಡಿದವರಿಗೆ ಈಗ ಉತ್ತರ ಸಿಕ್ಕಿದೆ: ಸಚಿವ ಶ್ರೀರಾಮುಲು
ಡಿಕೆಶಿಗೆ ಸಿದ್ಧರಾಮಯ್ಯ ಬ್ಲ್ಯಾಕ್ ಮೇಲ್ ಮಾಡ್ತಾನೆ: ಡಿಕೆ ಶಿವಕುಮಾರ ಅವರನ್ನು ಅಧಿಕಾರದಿಂದ ದೂರ ಇಡಲು ಅವರ ಅಕ್ರಮ ಹಗರಣಗಳ ದಾಖಲಾತಿಗಳನ್ನು ನೀಡುವೆ ಎಂದು ಸಿದ್ಧರಾಮಯ್ಯ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು. ಈ ಕುರಿತು ನಿಮ್ಮ ಬಳಿ ಖಚಿತ ಮಾಹಿತಿ ಇದೆಯೇ ಎಂದು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆಯೇ ಉತ್ತರಿಸಲು ತಡಕಾಡಿದ ಶ್ರೀರಾಮುಲು, ನನಗೆ ಮಾಹಿತಿ ಬಂದಿದೆ. ಈಗ ಏನೂ ಹೇಳುವುದಿಲ್ಲ. ಸಮಯ ಬಂದಾಗ ಸುದ್ದಿಗೋಷ್ಠಿ ಮಾಡಿಯೇ ತಿಳಿಸುತ್ತೇನೆ ಎಂದು ಜಾರಿಕೊಂಡರು.