ಮುಖ್ಯಮಂತ್ರಿಯಾಗಿ ಅವರು ಕೆಲಸ ಮಾಡಿದವರಲ್ಲ. ಹಾಗಾಗಿ, ನೀವು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಅಲ್ಲಿನ ಜನರೇ ನಿಮಗೆ ಮಸಿ ಬಳಿಯುತ್ತಾರೆ: ಶ್ರೀರಾಮುಲು
ಬೆಳಗಾವಿ(ನ.04): ನಿಮಗೆ ತಾಕತ್ತು ಇದ್ದರೆ ಬಾದಾಮಿ ಮತಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ನೋಡೋಣ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಸವಾಲು ಹಾಕಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ಮೊಳಕಾಲ್ಮೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಕೆಲಸ ಮಾಡಿದವರಲ್ಲ. ಹಾಗಾಗಿ, ನೀವು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಅಲ್ಲಿನ ಜನರೇ ನಿಮಗೆ ಮಸಿ ಬಳಿಯುತ್ತಾರೆ. ಮೊದಲು ಅವರ ಕ್ಷೇತ್ರ ಯಾವುದು ಎಂಬುದನ್ನು ಘೋಷಿಸಬೇಕು. ಕ್ಷೇತ್ರ ಇಲ್ಲದೇ ಪರದೇಸಿಯಾಗಿ ಓಡಾಡುತ್ತಿರುವವರಿಗೆ ನಾನು ಉತ್ತರ ನೀಡುವುದಿಲ್ಲ ಎಂದರು.
ನನ್ನ ತೀರ್ಮಾನವನ್ನು ಜನರೇ ತೆಗೆದುಕೊಳ್ಳುತ್ತಾರೆ. ನಿಮ್ಮಂತೆ ರಾಜಕಾರಣ ಮಾಡಿಕೊಂಡು ನಾನು ಬಂದಿಲ್ಲ. ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದು ಚೆನ್ನಾಗಿ ಊಟಮಾಡಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದರು. ಜೊತೆಗಿದ್ದೇ ಡಿ.ಕೆ.ಶಿವಕುಮಾರ, ಜಿ.ಪರಮೇಶ್ವರ ಅವರನ್ನು ಮುಗಿಸಿಕೊಂಡು ಬಂದಿದ್ದೀರಿ. ಈಗ ನನ್ನ ಲಾಯಲ್ಟಿಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಲಕ್ಷ್ಮೀ ಹೆಬ್ಬಾಳಕರ
ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ನಿಮ್ಮನ್ನು ಸ್ವಂತ ಕ್ಷೇತ್ರದ ಜನ ಸೋಲಿಸಿ ಮನೆಗೆ ಕಳುಹಿಸಿದರು. ಅದನ್ನು ನೆನಪು ಮಾಡಿಕೊಳ್ಳಿ. ನಾನು 30 ವರ್ಷ ರಾಜಕಾರಣದಲ್ಲಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸಂಜಯ ಪಾಟೀಲ, ಮುರುಘೇಂದ್ರ ಪಾಟೀಲ, ಮಾರುತಿ ಅಷ್ಟಗಿ ಮೊದಲಾದವರು ಉಪಸ್ಥಿತರಿದ್ದರು.
ವಲಸೆ ಶಾಸಕರಾರಯರೂ ಬಿಜೆಪಿ ತೊರೆಯಲ್ಲ
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಹಳ ದೊಡ್ಡ ನಾಯಕರು. ನಮ್ಮ ಪಕ್ಷದ ಮತ್ತು ನಮ್ಮ ಸಮಾಜದ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ರಮೇಶ ಜಾರಕಿಹೊಳಿ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ವಲಸೆ ಶಾಸಕರಾರಯರೂ ಬಿಜೆಪಿ ತೊರೆಯಲ್ಲ. ಕಾಂಗ್ರೆಸ್‌ನಲ್ಲಿದ್ದ ವೇಳೆ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಎಲ್ಲ ಮುಗಿದ ಮೇಲೆ ಬನ್ನಿ ಎಂದರೆ ಯಾರು ಇವರ ಮಾತು ಕೇಳುತ್ತಾರೆ? ಬಿಜೆಪಿಯಲ್ಲಿ ಸ್ಥಾನಮಾನ ಕೊಟ್ಟು ಸರಿಯಾಗಿ ನೋಡಿಕೊಳ್ಳಲಾಗುತ್ತಿದೆ ಎಂದರು.
ರಾಹುಲ್ ಫ್ಲಾಪ್ ಶೋ:
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ನೋಡೋಣ ಜನರೇ ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಯಾವುದೇ ಅಲೆ ಇಲ್ಲ. ರಾಹುಲ್ ಗಾಂಧಿ ಪಾದಯಾತ್ರೆ ಫ್ಲಾಪ್‌ಶೋ ಆಗಿದೆ. ಅವರು ಬಂದರು, ನೋಡಿದರು, ಓಡಿಹೋದರು, ಅದನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಭಾರತ ಜೋಡೋ ದೇಶದಲ್ಲಿ ಎಲ್ಲಿಯೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಎಸ್‌ಟಿ ಮೀಸಲಾತಿ ಚುನಾವಣೆ ಸ್ಟಂಟ್ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಯಾರು ಕೊಡಲಾರದಂತ ಕೆಲಸ. ಅವರಿಂದ ಮೀಸಲಾತಿ ಕೊಡಲು ಆಗಲಿಲ್ಲ. ಐತಿಹಾಸಿಕ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆ. ಎಸ್‌ಸಿ, ಎಸ್‌ಟಿ ಮತ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದರು. ಈಗ ಅವರು ಕೈಬಿಡುತ್ತಾರೆ ಎಂಬ ನೋವು ಕಾಂಗ್ರೆಸ್ಸಿಗರಿಗೆ ಆರಂಭವಾಗಿದೆ. ಹಿಂದುಳಿದ ನಾಯಕರು ಎಂದು ಬಹಳಷ್ಟುಜನ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಈವರೆಗೂ ಮೀಸಲಾತಿ ಕೊಡಲು ಆಗಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಬಿಜೆಪಿ ಮೀಸಲಾತಿ ನೀಡಿ ಕೆಳವರ್ಗದವರ ಜತೆಗೆ ಇದ್ದೇವೆ ಎನ್ನುವುದನ್ನು ಮಾಡಿದ್ದೇವೆ. ಕಾಂಗ್ರೆಸ್ ಮೊದಲಿನಿಂದಲೂ ಎಸ್‌ಸಿ, ಎಸ್‌ಟಿ ಜನಾಂಗದವರನ್ನು ಕೂಲಿ ಕೆಲಸದವರ ಹಾಗೆ ನೋಡಿದೆ. ಕೂಲಿ ಕೆಲಸಕ್ಕೆ ತಕ್ಕ ಹಾಗೆ ಸಂಬಳ ಕೊಡುವ ಕೆಲಸ ಮಾಡಲಿಲ್ಲ. ಕೆಳ ಸಮುದಾಯ ಹಾಗೇ ಇರಬೇಕೆಂದು ನೋಡಿದರೂ ಮೀಸಲಾತಿ ಕೊಟ್ಟರು ಎಂದ ಅವರು, ತಮಗೆ ತೊಂದರೆ ಆಗುತ್ತದೆ ಎಂದು ಕೊಟ್ಟಿಲ್ಲ. ನಮ್ಮ ಸಮುದಾಯ ಜಾಗೃತಗೊಂಡಿದ್ದು, ಕಾಂಗ್ರೆಸ್ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತೇವೆ ಎಂದರು.
ಕರ್ನಾಟಕ ರಾಜ್ಯೋತ್ಸವದಂದೇ ಎಂಇಎಸ್ ಪುಂಡಾಟ: ಬೆಳಗಾವಿಯಲ್ಲಿ ಕರಾಳ ದಿನಾಚರಣೆ
ಮಾಜಿ ಸಚಿವ ಜನಾರ್ಧನ ರೆಡ್ಡಿ ಪಕ್ಷ ಬದಲಿಸುವುದಾಗಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನೂ ಇಲ್ಲ. ಅವರಿಗೆ ಬೇಸರ ಆಗಿತ್ತಂತೆ. ಬೇಸರ ಆದ ಸಂದರ್ಭದಲ್ಲಿ ನಮ್ಮ ನಾಯಕರು ಎಲ್ಲರೂ ಮಾತನಾಡಿದ್ದಾರೆ. ಆ ಭಾಗದ ಹಿರಿಯ ನಾಯಕರು ಇದ್ದಾರೆ. ಹೀಗಾಗಿ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ. ಯಾವ ವಿಚಾರದಲ್ಲಿ ಬೇಸರ ಆಗಿದ್ದರೂ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ನಮ್ಮ ಸರ್ಕಾರ ಮೀಸಲಾತಿ ವಿಚಾರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದೆ. ನ. 29 ರಂದು ಬಳ್ಳಾರಿಯಲ್ಲಿ ಎಸ್‌ಟಿ ಸಮುದಾಯದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಅಂತ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.