ಅನಂತ ಕುಮಾರ ಹೆಗಡೆ ಜಾತಿ, ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು: ಸಚಿವ ನಾಗೇಂದ್ರ

By Kannadaprabha NewsFirst Published Jan 15, 2024, 1:30 AM IST
Highlights

ನಾಡಿನ ಪುರಾತನ ಮಸೀದಿಗಳನ್ನು ಒಡೆದು ಅಲ್ಲಿ ದೇವಸ್ಥಾನ ನಿರ್ಮಿಸುತ್ತೇವೆ ಎನ್ನುವ ಕೆನರಾ ಸಂಸದ ಅನಂತ ಕುಮಾರ ಹೆಗಡೆ ಮಾತಿಗೆ ಕಿಮ್ಮತ್ತಿಲ್ಲ ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ. 
 

ಮಂಗಳೂರು (ಜ.15): ನಾಡಿನ ಪುರಾತನ ಮಸೀದಿಗಳನ್ನು ಒಡೆದು ಅಲ್ಲಿ ದೇವಸ್ಥಾನ ನಿರ್ಮಿಸುತ್ತೇವೆ ಎನ್ನುವ ಕೆನರಾ ಸಂಸದ ಅನಂತ ಕುಮಾರ ಹೆಗಡೆ ಮಾತಿಗೆ ಕಿಮ್ಮತ್ತಿಲ್ಲ ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ. ‘ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ಮಾತುಗಳು ಸಹಜ, ಅದನ್ನು ಪಕ್ಷ ಕೂಡ ಗಂಭೀರ ಪರಿಗಣಿಸಬೇಕಾಗಿಲ್ಲ. ಅವರು ಜಾತಿ, ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು. ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ವ್ಯಕ್ತಿ ಅವರು. ಯಾವುದೇ ಪುಸ್ತಕದಲ್ಲಿ ಮಸೀದಿಗಳು ದೇವಸ್ಥಾನ ಆಗಿತ್ತು ಎಂದು ಉಲ್ಲೇಖ ಇಲ್ಲ. ಅವರಿಗೆ ತಲೆಗೆ ಬಂದಿದ್ದನ್ನು ಹೇಳಿಕೊಂಡು ಹೋಗುತ್ತಾರೆ ಎಂದು ನಾಗೇಂದ್ರ ಹೇಳಿದ್ದಾರೆ.

ಎಲ್ಲಿಯೂ ಇಲ್ಲದ ವಿಚಾರಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಎಲ್ಲಿಯೂ ಕಾಣಿಸದ ಅನಂತ ಕುಮಾರ್‌ ಹೆಗಡೆ ಈಗ ಚುನಾವಣೆ ಬರುತ್ತಿದ್ದಂತೆ ಶಾಂತಿ, ಸುವ್ಯವಸ್ಥೆ ಕದಡುವ ಮಾತನ್ನಾಡುತ್ತಿದ್ದಾರೆ. ಸರ್ಕಾರ ಸಮಾಜದ ಶಾಂತಿ ಕದಡಲು ಆಸ್ಪದ ನೀಡುವುದಿಲ್ಲ ಎಂದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಗೋಪಾಷ್ಟಮಿಗೂ ಕಾಂಗ್ರೆಸ್‌ ನಾಯಕರ ಸಾವಿಗೂ ಯಾವುದೇ ಸಂಬಂಧ ಇಲ್ಲ. ಕಾಗೆ ಕೂರೋದು, ಕೊಂಬೆ ಮುರಿಯೋದು ಎನ್ನುವ ಥರ ಅದೆಲ್ಲ ಕಾಕತಾಳೀಯ. ಈ ಕುರಿತ ಬಿಜೆಪಿ ನಾಯಕರ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದರು.

Latest Videos

ಸಮಾಜಕ್ಕೆ ಹಾಲುಮತ ಸಮುದಾಯ ಕೊಡುಗೆ ಅನನ್ಯ: ಪ್ರಲ್ಹಾದ್‌ ಜೋಶಿ

ದ.ಕ.ದಲ್ಲಿ ಅಥ್ಲೆಟಿಕ್ಸ್‌ಗೆ ಪ್ರೋತ್ಸಾಹ: ‘ಒಂದು ಜಿಲ್ಲೆ-ಒಂದು ಕ್ರೀಡೆ’ ಪರಿಕಲ್ಪನೆಯಲ್ಲಿ ದ.ಕ.ಜಿಲ್ಲೆಯಲ್ಲಿ ಅಥ್ಲೆಟಿಕ್ಸ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ನಾಗೇಂದ್ರ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುವುದು. ದ.ಕ.ದಲ್ಲಿ ಅಥ್ಲೆಟಿಕ್ಸ್‌ಗೆ ಬೇಕಾದ ಮೈದಾನ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.

ದ.ಕ. ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗದ ಏಳಿಗೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅವರ ಹಾಡಿಗಳಿಗೆ ತೆರಳಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದೇನೆ. ಅವರ ಕುಂದುಕೊರತೆಗಳನ್ನು ತಿಳಿದುಕೊಂಡು ಪೌಷ್ಠಿಕ ಆಹಾರವೇ ಮೊದಲಾದ ಅಗತ್ಯ ನೆರವು ನೀಡಲಾಗುವುದು. ಇವರಿಗೆ ಆರು ತಿಂಗಳು ಇದ್ದ ಪೌಷ್ಠಿಕ ಆಹಾರ ಪೂರೈಕೆಯನ್ನು ಈಗ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಅವರೆಲ್ಲ ಅರಣ್ಯದಂಚಿನಲ್ಲಿ ವಾಸಿಸುತ್ತಿದ್ದು, ಅವರಿಗೆ ಪಟ್ಟಾ ಜಾಗ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೂರ್ಣಗೊಳ್ಳದ ಶ್ರೀರಾಮಮಂದಿರ ಉದ್ಘಾಟನೆ ಸರಿಯಲ್ಲ: ವಿ.ಎಸ್.ಉಗ್ರಪ್ಪ

ಕ್ರಿಕೆಟ್‌ ಸೇರ್ಪಡೆಗೆ ಪ್ರಯತ್ನ: ಯುವ ಸಬಲೀಕರಣ, ಕ್ರೀಡಾ ಇಲಾಖೆಗೆ ಕ್ರಿಕೆಟ್‌ ಸೇರ್ಪಡೆಯಾಗಿಲ್ಲ. ಅದನ್ನು ಸೇರ್ಪಡೆಗೊಳಿಸಿದರೆ, ಆಗ ಕ್ರಿಕೆಟ್‌ ಸ್ಟೇಡಿಯಂ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಿಸಿಸಿಐಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ರಾಜ್ಯದಲ್ಲಿ ಕ್ರೀಡಾ ಇಲಾಖೆಗೆ ಇರುವ ಆಸ್ತಿಯನ್ನು ಇಲಾಖೆಯಲ್ಲೇ ಉಳಿಸಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮಂಗಳೂರು ಪಾಲಿಕೆಯ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಸೇರಿದಂತೆ ಯಾವುದೇ ಜಾಗವನ್ನು ಮರಳಿ ಇಲಾಖೆಯಿಂದ ಹೊರಗೆ ನೀಡುವುದಿಲ್ಲ ಎಂದು ಸಚಿವ ನಾಗೇಂದ್ರ ಸ್ಪಷ್ಟಪಡಿಸಿದರು.

click me!