
ಮಂಗಳೂರು (ಜ.15): ಅಯೋಧ್ಯೆ ರಾಮಮಂದಿರಕ್ಕೆ ತೆರಳಲು ಯಾರ ಅನುಮತಿಯೂ ಬೇಕಾಗಿಲ್ಲ, ಅಲ್ಲಿಗೆ ಪ್ರತಿಷ್ಠಾ ದಿನವೇ ಹೋಗಬೇಕು ಎಂದೇನಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ, ಅಲ್ಲಿಗೆ ಎಲ್ಲರೂ ಹೋಗಬೇಕು, ಆದರೆ ರಾಜಕೀಯ ವಾತಾವರಣ ನಿರ್ಮಾಣ ಸರಿಯಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿಗಳೇ ಹೇಳುತ್ತಿದ್ದಾರೆ. ಇದು ಪಾಲಿಟಿಕಲ್ ಕ್ಯಾಂಪೇನ್ ಆಗಬಾರದು, ನಮಗೆಲ್ಲರಿಗೂ ಅಲ್ಲಿಗೆ ಹೋಗಲು ಆಸೆ ಇದೆ ಎಂದರು.
ಮಂದಿರ ನಿರ್ಮಾಣ ನಮ್ಮ ದೇಶದಲ್ಲಿ ಇದು ಒಳ್ಳೆಯ ಬೆಳವಣಿಗೆ. ರಾಜ್ಯದಲ್ಲೂ ದೇವಸ್ಥಾನಗಳಲ್ಲಿ ಪ್ರತಿಷ್ಠಾ ದಿನ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸುವಂತೆ ಸೂಚಿಸಲಾಗಿದೆ. ಮಂದಿರ ಬಗ್ಗೆ ಎಲ್ಲರಿಗೂ ಗೌರವ ಇದೆ, ಆದರೆ ಅದರಲ್ಲಿ ರಾಜಕಾರಣ ಬೆರೆಸಬಾರದು. ಆದರೆ ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ಅದನ್ನು ಬಳಸಲಾಗುತ್ತಿದೆ. ದೇವಸ್ಥಾನಗಳು ಇರುವುದು ನಮಗಾಗಿ, ಭಕ್ತಿ ಇರುವವರು ದೇವಸ್ಥಾನಕ್ಕೆ ಹೋಗುತ್ತಾರೆ. ಸ್ವ ಇಚ್ಛೆಯಿಂದ ಎಲ್ಲರೂ ಹೋಗುತ್ತಾರೆ, ಹೋಗದಿದ್ದರೆ, ಟೀಕೆ ಮಾಡಬಾರದು ಎಂದರು.
ಸಮಾಜಕ್ಕೆ ಹಾಲುಮತ ಸಮುದಾಯ ಕೊಡುಗೆ ಅನನ್ಯ: ಪ್ರಲ್ಹಾದ್ ಜೋಶಿ
ಕೋವಿಡ್ ಸಂದರ್ಭದಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. ಆದರೆ ಅವರು ಈವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಈ ಬಗ್ಗೆ ತನಿಖಾ ಸಮಿತಿಗೆ ದಾಖಲೆ ಸಲ್ಲಿಸುವಂತೆ ಯತ್ನಾಳ್‌ಗೆ ಮೌಖಿಕವಾಗಿ ತಿಳಿಸಲಾಗಿದೆ. ಆರೋಪ ಮಾಡುವ ಜತೆಗೆ ತನಿಖಾ ಸಮಿತಿ ಮುಂದೆ ದಾಖಲೆ ನೀಡುವಂತೆ ಹೇಳಲಾಗಿದೆ. ತನಿಖಾ ಆಯೋಗದ ವಿಚಾರಣೆ ವೇಳೆ ದಾಖಲೆ ನೀಡಿದರೆ ಉಪಯೋಗವಾಗುತ್ತದೆ ಎಂದು ಯತ್ನಾಳ್‌ಗೆ ಸಲಹೆ ನೀಡಲಾಗಿದೆ ಎಂದರು.
ಹಾಲಿ ಸರ್ಕಾರದಲ್ಲಿ ಡಿಸಿಎಂ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ, ಅದೆಲ್ಲ ಪಕ್ಷದ ಆಂತರಿಕ ವಿಚಾರ. ಡಿಸಿಎಂ ಹುದ್ದೆಗೆ ನನ್ನ ಹೆಸರು ಏನೂ ಇಲ್ಲ, ಅದೆಲ್ಲ ಹೈಕಮಾಂಡ್ ನಿರ್ಧಾರ ಎಂದು ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು. ಎಲ್ಲೇ ಆದರೂ ನೈತಿಕ ಪೊಲೀಸ್‌ಗಿರಿ ಸರಿಯಲ್ಲ, ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಾದರೆ ಅದು ಹಿಂದು ಕಾರ್ಯಕರ್ತರು ಎಂದು ಯಾಕೆ? ಕಾಂಗ್ರೆಸ್‌ನವರಾದರೆ ಕಾಂಗ್ರೆಸ್ ಕಾರ್ಯಕರ್ತರು ಎನ್ನುತ್ತಾರೆ, ಬಿಜೆಪಿಯವರಾದರೂ ಬಿಜೆಪಿ ಕಾರ್ಯಕರ್ತರೇ, ಅವರನ್ನು ಹಿಂದು ಕಾರ್ಯಕರ್ತರು ಎನ್ನಲಾಗದು. ನಾವೆಲ್ಲ ಹಿಂದೂಗಳಲ್ವಾ ಎಂದರು.
ಪೂರ್ಣಗೊಳ್ಳದ ಶ್ರೀರಾಮಮಂದಿರ ಉದ್ಘಾಟನೆ ಸರಿಯಲ್ಲ: ವಿ.ಎಸ್.ಉಗ್ರಪ್ಪ
ನಮ್ಮ ರಾಜ್ಯ ಸರ್ಕಾರ ಸಾಧನೆ ಬಗ್ಗೆ ಇಡೀ ದೇಶದಲ್ಲಿ ದಾಖಲೆ ಇದೆ, ಒಂದೇ ಭ್ರಷ್ಟಾಚಾರ ಆರೋಪ ಇಲ್ಲ. ಹಿಂದಿನ ಬಿಜೆಪಿ ಸರ್ಕಾರ ಹೇಳಿದ್ದನ್ನು ಯಾವುದನ್ನೂ ಜಾರಿಗೆ ತಂದಿಲ್ಲ. ಕೇಂದ್ರದ ಅಧಿಕಾರಿಗಳೇ ಇಲ್ಲಿಗೆ ಬಂದಾಗ ಇಷ್ಟೆಲ್ಲ ಸಾಧನೆ ಹೇಗೆ ಮಾಡಿದಿರಿ ಎನ್ನುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.