ಸೋಲಿಲ್ಲದ ಸರದಾರ ಅಂಗಾರ ರಾಜಕೀಯ ನಿವೃತ್ತಿ!?, ಯುವ ನಾಯಕರಿಗೆ ಮಣೆ ಹಾಕಿದ ಸುಳ್ಯ ಬಿಜೆಪಿ!

By Suvarna NewsFirst Published Jan 20, 2023, 6:03 PM IST
Highlights

ಬಿಜೆಪಿ ಸಚಿವ ಅಂಗಾರ ಸುಳ್ಯದ ಬಂಗಾರ ತನ್ನ ಸುದೀರ್ಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವಿಚಾರ ಸುಳ್ಯ ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ನಾಯಕರಿಗೆ ಮಣೆ ಹಾಕಿದೆ. ಈ ಸಾಲಿನಲ್ಲಿ ಪ್ರಮುಖವಾಗಿ ಶಿವಪ್ರಸಾದ್ ಪೆರುವಾಜೆ ಮತ್ತು ಪದ್ಮಕುಮಾರ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.

ಸುಳ್ಯ (ಜ.20): ಇನ್ನೇನು ಕೆಲವೇ ತಿಂಗಳಿನಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ಮಾಡಿಕೊಂಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ, ಪತ್ರೀ ಪಕ್ಷಕ್ಕೂ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವು ಕೂಡ ಬಹಳ ಮುಖ್ಯ. ಇದೀಗ ರಾಜಕೀಯ ವಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟ್ಟು ಎಂಟು ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆ ಕೇಸರಿ ಕೋಟೆ. ರಾಜ್ಯದ ಜನರ ಚಿತ್ತವೆಲ್ಲ ಕರಾವಳಿ ಜಿಲ್ಲೆಯ ಮೇಲೆಯೇ ಇದೆ. ಇದೀಗ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಸುಳ್ಯ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದಂತು ಸುಳ್ಳಲ್ಲ. ಹೇಳಿ ಕೇಳಿ ಸುಳ್ಯ ಬಿಜೆಪಿಯ ಭದ್ರಕೋಟೆ.  ಬಹುಜನ ಸಮಾಜವೇ ಹೆಚ್ಚಿರುವ ಸುಳ್ಯ ಮೊದಲ ವಿಧಾನಸಭಾ ಚುನಾವಣೆಯಿಂದಲೂ ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ.  ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಲವು ಬಾರಿಯಾದರೂ ಸುಳ್ಯದ ಮೀಸಲಾತಿ ಮಾತ್ರ ಬದಲಾಗಿಲ್ಲ. 1972ರಿಂದ ಇಲ್ಲಿ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಇದೆ. 1994ರಿಂದ ಸುಳ್ಯ ಕ್ಷೇತ್ರವನ್ನು ಆಳುತ್ತಿರುವ ಬಿಜೆಪಿ ಪಕ್ಷಕ್ಕೆ ಎಸ್‌ ಅಂಗಾರ ಒಬ್ಬರೇ ನಾಯಕ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಸಚಿವ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ವ್ಯಕ್ತಿ ಎಂದರೆ ಅದು ಅಂಗಾರ. ಜಿಲ್ಲೆಯಲ್ಲಿ ಬಿಜೆಪಿಯ ಮಾನ ಉಳಿಸಿದ್ದು ಕೂಡ ಇವರೇ. ಅದಕ್ಕೆ ಅಂಗಾರ ಯಾವತ್ತೂ ಸುಳ್ಯದ ಬಂಗಾರ ಎಂಬ ಮಾತಿದೆ. 

ರಾಜಕೀಯ ಜೀವನಕ್ಕೆ ನಿವೃತ್ತಿ ಹಾಡ್ತಾರಾ ಅಂಗಾರ!?
ಸಚಿವ ಅಂಗಾರ ತನ್ನ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವಿಚಾರ ಸುಳ್ಯ ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ. ಸಚಿವ ಸ್ಥಾನ ಸಿಕ್ಕಿದ ಬಳಿಕ  ತನ್ನ ಸುದೀರ್ಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿ ವಿಶ್ರಾಂತ ಜೀವನ ನಡೆಸಲಿದ್ದಾರಂತೆ.  ಸತತ ಆರು ಬಾರಿ ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಕೂಡ ಗೆಲವುವಿನ ಅಂತರ ಕಡಿಮೆಯಾಗುತ್ತಾ ಹೋಗುತ್ತಿದೆ. ಜೊತೆಗೆ ಜನಸಾಮಾನ್ಯ ಮಾತ್ರವಲ್ಲ  ಸಂಘ ಪರಿವಾರ ಮತ್ತು ಬಿಜೆಪಿ ಪಾಳಯದಲ್ಲಿ ಕೂಡ ಈ ಬಾರಿ ಅಂಗಾರರನ್ನು ಬಿಟ್ಟು  ಹೊಸ ಅಭ್ಯರ್ಥಿಯನ್ನು ಇಳಿಸುವ ಸಾಧ್ಯತೆ ಬಗ್ಗೆ ವರಿಷ್ಠರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಅಂಗಾರ ಸೌಮ್ಯ ಸ್ವಭಾವದ ವ್ಯಕ್ತಿ. ಯಾವುದೇ ಪದವಿ, ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟವರಲ್ಲ. ಮಂತ್ರಿ ಸ್ಥಾನ ಕೂಡ ಕೇಳಿ ಪಡೆದದ್ದಲ್ಲ. ಏನೇ ನಿರ್ಧಾರವಿದ್ದರು ಅದು ಪಕ್ಷದ ತೀರ್ಮಾನ ಅದಕ್ಕೆ ನಾನು ಯಾವತ್ತೂ ತಲೆ ಬಾಗುವೆ ಎಂದು ಮೊದಲಿನಿಂದಲೂ ಹೇಳಿಕೊಂಡ ನಿಷ್ಠಾವಂತ ವ್ಯಕ್ತಿ.

ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲು ಸಾಲು ಸಾಲು ಹೆಸರು:
ಶಿವಪ್ರಸಾದ್ ಪೆರುವಾಜೆ: ಈ ಬಾರಿ ಬಿಜೆಪಿಯಿಂದ ಉತ್ತಮ ವಿದ್ಯಾವಂತ ಯುವ ಪೀಳಿಗೆಯನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಸಂಘಪರಿವಾರ ಕೆಲ ಹೆಸರುಗಳನ್ನು ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿ ಮೊದಲು ಕೇಳಿಬರುತ್ತಿರುವ ಹೆಸರು ಶಿವಪ್ರಸಾದ್ ಪೆರುವಾಜೆ. ಬಾಲ್ಯದಿಂದಲೇ ಸಂಘದ ಸಂಪರ್ಕದಿಂದ ಮುನ್ನೆಲೆಗೆ ಬಂದ 31 ವರ್ಷದ ಶಿವಪ್ರಸಾದ್ ಪೆರುವಾಜೆ ಕಳೆದ 6   ವರ್ಷಗಳಿಂದಲೂ ಹೆಚ್ಚು ಸಂಘದ ಜವಾಬ್ದಾರಿ ನಿರ್ವಹಿಸಿ ತಾಲೂಕಿನ ಕಾರ್ಯಕರ್ತರಿಗೆ ಚಿರಪರಿಚಿತ ಯುವಕರಾಗಿದ್ದಾರೆ.  ಸಂಘ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುವ ಪಾದರಸದಂತಹ ವ್ಯಕ್ತಿತ್ವದ ಶಿವಪ್ರಸಾದ್ ಸಮಾಜದ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತ ಎಲ್ಲಾ ಬಣಗಳೊಂದಿಗೆ ಅನ್ಯೋನ್ಯತೆ ಕಾಯ್ದುಕೊಂಡವರು. ಅಭ್ಯರ್ಥಿಗಳ ನಡುವಿನ ತಿಕ್ಕಾಟ ತಾರಕಕ್ಕೇರಿದರೇ ಇದೇ ಹೆಸರು ಬಹುತೇಕ ಅಂತಿಮ. ಆದರೆ ಇನ್ನೂ ಚುನಾವಣಾ ತಯಾರಿಗೆ ಇಳಿಯದೇ   ಇರುವುದು ಸ್ವಲ್ಪ ಹಿನ್ನೆಡೆಯಾಗಬಹುದು. ಕಾಲೇಜು ನಾಯಕತ್ವ ನಿಭಾಯಿಸಿರುವ ಅನುಭವ ಇರುವ ಈತ M.com ಪದವೀಧರನಾಗಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರದ ಉನ್ನತ ಮಟ್ಟದಲ್ಲಿ ಕೂಡ ಶಿವಪ್ರಸಾದ್ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ.

ಪದ್ಮಕುಮಾರ್: ಎಬಿವಿಪಿ ಹಿನ್ನೆಲೆಯ 27 ವರ್ಷದ ಪದ್ಮಕುಮಾರ್ ಗುಂಡಡ್ಕ ಸಂಘದೊಂದಿಗೂ ನಿಕಟ ಸಂಪರ್ಕ ಹೊಂದಿದವರು. ಪ್ರಸ್ತುತ ರಾಜಕೀಯ ಶಾಸ್ತ್ರದ ಉಪನ್ಯಾಸಕರಾಗಿರುವ ಪದ್ಮಕುಮಾರ್ ಉತ್ತಮ ವಾಗ್ಮಿಗಳು ಕೂಡ ಹೌದು. ಇವರ ಪರವಾಗಿ ಪ್ರಬಲ ಬ್ಯಾಟಿಂಗ್ ಮಾಡುವ ತಂಡವು ಈಗಲೇ ಕಾರ್ಯಪ್ರವೃತ್ತವಾಗಿದೆ. ವಯಸ್ಸಿನ ಕಾರಣವೊಂದು ಅಡ್ಡಿಯಾಗದಿದ್ದರೇ ಇವರು ಅಭ್ಯರ್ಥಿಯಾಗಿ ಮುನ್ನೆಲೆಗೆ ಬರಬಹುದು. 

ಮಿಕ್ಕಂತೆ ಬಿಜೆಪಿಯಲ್ಲಿ ಸಾಲು ಸಾಲು ಹೆಸರುಗಳಿವೆ  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ತಾಲೂಕು ಪಂಚಾಯತ್ ಮಾಜಿ‌ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಡಿಕೇರಿ ಸಂಘಪರಿವಾರದ ಪಿಎಂ ರವಿ, ಶಂಕರ್ ಪೆರಾಜೆ, ಶೀನಪ್ಪ ಬಯಂಬು, ವಕೀಲ ಜಗದೀಶ್, ಸಂಜಯಕುಮಾರ್ ಪೈಚಾರು, ಬಜರಂಗದಳ ಲತೀಶ್ ಗುಂಡ್ಯ ಹೀಗೆ ಇವರೆಲ್ಲ ಸ್ಥಳೀಯ ನಾಯಕರಾಗಿದ್ದಾರೆ. ಏನಿದ್ದರೂ ಬಿಜೆಪಿಯಲ್ಲಿ ಸಂಘಪರಿವಾರದ ನಿರ್ಧಾರವೇ ಅಂತಿಮವಾಗಿದೆ.

ಕುಟುಂಬಕ್ಕೆ ಒಂದೇ ಟಿಕೆಟ್ ಮಾನದಂಡ ಇಲ್ಲದಿದ್ದರೆ ಅಪ್ಪನ ಜೊತೆ ನಾನು ನಿಲ್ತೆನೆ:

ಕಾಂಗ್ರೆಸ್ ಗೆ ಕೂಡ ಹೊಸ ಮುಖಗಳು: ಅಂಗಾರನ್ನು ನಾಲ್ಕು ಬಾರಿ ಎದುರಿಸಿ ಸೋತಿರುವ ಡಾ. ಎಸ್ ರಘು ಬೆಳ್ಳಿಪ್ಪಾಡಿ ಅವರು ಈ ಬಾರಿ ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೊಸ ಮುಖ ಬರುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಡಾ. ರಘು ಬೆಳ್ಳಿಪ್ಪಾಡಿ ಅವರ ಇಬ್ಬರ ಮಕ್ಕಳಾದ ಪ್ರಹ್ಲಾದ್ ಮತ್ತು ಅಭಿಷೇಕ್  ಟಿಕೆಟ್ ನೀಡಲು ಕೆಪಿಸಿಸಿಗೆ  ಮನವಿ ಮಾಡಿದ್ದಾರೆ. ಮಿಕ್ಕಂತೆ  ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷ, ಉದ್ಯಮಿ, ಕಡಬ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹಾಗು ಕೆಪಿಸಿಸಿ ಸದಸ್ಯರಾಗಿರುವ ಹೆಚ್.ಎಂ. ನಂದಕುಮಾರ.  ಮತ್ತೋರ್ವ ಅಭ್ಯರ್ಥಿಯಾಗಿ ಸುಳ್ಯ ಬ್ಲಾಕ್‌‌ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಮಂಗಳೂರು ಮಾಜಿ ಕಾರ್ಪೋರೇಟರ್ ಅಪ್ಪಿ,  ಹೀಗೆ ಹಲವು ಹೆಸರುಗಳು ಕೇಳಿ ಬರುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಕೈ ನಾಯಕನಿಗೇ 500 ಕೋಟಿ ರೂ ಸುಪಾರಿ!

ಎಎಪಿ ಅಭ್ಯರ್ಥಿ ಘೋಷಣೆ: ಉಳಿದಂತೆ ಆಮ್‌ ಆದ್ಮಿ ಪಕ್ಷದಿಂದ ಈಗಾಗಲೇ ಅಭ್ಯರ್ಥಿಯ ಘೋಷಣೆಯಾಗಿದೆ. ಸುಳ್ಯದ ಮಾಜಿ ಶಾಸಕರಾಗಿದ್ದ ಕೆ.ಕುಶಲ ಅವರ ಮಗಳು ಶ್ರೀಮತಿ ಸುಮನಾ ಬೆಳ್ಳಾರ್ಕರ್ ಅವರನ್ನು ಅಭ್ಯರ್ಥಿಯೆಂದು ಬಿಂಬಿಸಲಾಗಿದೆ. ಮಿಕ್ಕಂತೆ ಜೆಡಿಎಸ್ ಮತ್ತು ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಯ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಆಮ್ ಆದ್ಮಿ ಪಕ್ಷದಿಂದ ವಿದ್ಯಾವಂತ ಯುವತಿಗೆ ಟಿಕೆಟ್ ನೀಡಿರುವುದು ಬಿಜೆಪಿ ಜೊತೆಗೆ ಇತರ ಪಕ್ಷಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಕ್ಷದೊಳಗಿನ ಗೊಂದಲಗಳು, ಮತ್ತು ವಿದ್ಯಾವಂತರ ಮತಗಳು, ನೋಟಾ ಅಥವಾ ಆಪ್ ಮಡಿಲು ಸೇರಬಹುದು. ಆಪ್ ಅಲೆ ತಪ್ಪಿಸಲು ಬಿಜೆಪಿ ವಿದ್ಯಾವಂತ ಯುವ ಅಭ್ಯರ್ಥಿಗಳನ್ನು ಹುಡುಕಿದೆ.

click me!