ಮೇಕೆದಾಟು ಯೋಜನೆಗೆ ಸಿಡಬ್ಲ್ಯುಸಿ ಅನುಮತಿ ನೀಡಲೇಬೇಕು: ಡಿ.ಕೆ.ಶಿವಕುಮಾರ್‌

Published : Nov 14, 2025, 05:46 AM IST
dk shivakumar

ಸಾರಾಂಶ

ಇಷ್ಟು ದಿನ ಮೇಕೆದಾಟು ಪ್ರಕರಣದ ಅರ್ಜಿ ವಿಚಾರಣೆ ನ್ಯಾಯಾಲಯದ ಮುಂದೆ ಇದೆ, ಯಾವುದೇ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. ಈಗ ಆ ಕಾರಣ ಹೇಳಲು ಆಗುವುದಿಲ್ಲ ಎಂದರು ಡಿ.ಕೆ.ಶಿವಕುಮಾರ್‌.

ಬೆಂಗಳೂರು (ನ.14): ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ವಜಾಗೊಳಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಇಡೀ ರಾಜ್ಯಕ್ಕೆ ಸಂತೋಷದಾಯಕ. ನ್ಯಾಯಾಲಯದ ಮಾರ್ಗದರ್ಶನಕ್ಕೆ ನಾವು ಬದ್ಧವಾಗಿದ್ದು, ನಮ್ಮ ನೆಲದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆ ಮುಂದುವರೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್‌ ಬಳಿ ಸಿಡಬ್ಲ್ಯುಸಿ ಈ ಯೋಜನೆಗೆ ಸಹಕಾರ ನೀಡುವುದೇ ಎಂದು ಕೇಳಿದಾಗ, ಈ ಯೋಜನೆಗೆ ಅನುಮತಿ ನೀಡದೆ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕು.

ಈ ಯೋಜನೆಯ ತಾಂತ್ರಿಕ ಅಂಶಗಳ ಅನುಮತಿ ಪಡೆಯಲಾಗುವುದು. ಇಷ್ಟು ದಿನ ಈ ಪ್ರಕರಣದ ಅರ್ಜಿ ವಿಚಾರಣೆ ನ್ಯಾಯಾಲಯದ ಮುಂದೆ ಇದೆ, ಯಾವುದೇ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. ಈಗ ಆ ಕಾರಣ ಹೇಳಲು ಆಗುವುದಿಲ್ಲ ಎಂದರು. ನ್ಯಾಯಾಲಯದ ಈ ತೀರ್ಮಾನ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಅಗತ್ಯ ಸಹಕಾರ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಜಲ ಶಕ್ತಿ ಸಚಿವರ ಭೇಟಿ ಹಾಗೂ ಪ್ರಧಾನಮಂತ್ರಿಗಳ ಭೇಟಿಗೆ ರಾಜ್ಯದ ಸಂಸದರನ್ನು ಒಳಗೊಂಡ ನಿಯೋಗವನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೇಕೆದಾಟು ವಿಚಾರದಲ್ಲಿ ಯಾವುದೇ ದ್ವೇಷದ ಮನೋಭಾವವಿಲ್ಲ. ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಉಪಯೋಗವಾಗಲಿದೆ. ಯಾವಾಗಲೇ ನೀರಿನ ಕೊರತೆ ಉಂಟಾದರೂ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟು ನೆರವಾಗಲಿದೆ. ತಮಿಳುನಾಡು ಸೇರಿ ಬೇರೆ ರಾಜ್ಯಗಳಿಂದ ಬರುವ ಜನರಿಗೂ ನೀರು ಒದಗಿಸಲಾಗುವುದು. ಹಾಗಾಗಿ ಇದು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು, ಪುದುಚೆರಿಗೂ ಸಂದ ಜಯ. ನಾವೆಲ್ಲರೂ ಒಟ್ಟಾಗಿ ಮಾನವೀಯ ನೆಲೆಯಲ್ಲಿ ಸೇರಿ ಕೆಲಸ ಮಾಡೋಣ ಎಂದು ನೆರೆ ರಾಜ್ಯಗಳಿಗೆ ಮನವಿ ಮಾಡುತ್ತೇನೆ ಎಂದರು.

ಕರ್ನಾಟಕವು ತಮಿಳುನಾಡಿನ ಪಾಲಿನ 177 ಟಿಎಂಸಿ ನೀರು ಬಿಡಲೇಬೇಕು ಎಂದು ನಿರ್ದೇಶನ ನೀಡಿ, ಮೇಕೆದಾಟು ವಿರುದ್ಧ ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ಯೋಜನೆ ಸಂಬಂಧ ಎಲ್ಲಾ ತೀರ್ಮಾನಗಳನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಈ ವಿಚಾರವಾಗಿ ಮತ್ತೆ ನ್ಯಾಯಾಲಯದ ಮುಂದೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಇನ್ನು ಕಾನೂನು ಚೌಕಟ್ಟಿನಲ್ಲಿ ಈ ಯೋಜನೆಗೆ ಅಗತ್ಯ ಇಲಾಖೆಗಳಿಂದ ಅನುಮತಿ ಪಡೆಯಲಾಗುವುದು. ನಾವು ಈಗಾಗಲೇ ಮೇಕೆದಾಟು ಕಚೇರಿಯನ್ನು ಹಾರೋಬೆಲೆಯಲ್ಲಿ ಆರಂಭಿಸಿದ್ದೇವೆ. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಕಂದಾಯ ಭೂಮಿ ನೀಡಲು ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.

299 ಟಿಎಂಸಿ ನೀರು ಹರಿಸಿದ್ದೇವೆ

ನಾವು ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರು ಹರಿಸಬೇಕು. ಈ ವರ್ಷ ನ.13 ರ ವೇಳೆಗೆ 148 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈವರೆಗೆ 299 ಟಿಎಂಸಿ ನೀರು ಹರಿಸಿದ್ದೇವೆ. ವಾಡಿಕೆಗಿಂತ ಎರಡು ಪಟ್ಟು. ಹೆಚ್ಚುವರಿ ನೀರು ಸಮುದ್ರ ಪಾಲಾಗಿದೆ. ತಮಿಳುನಾಡಿಗೂ ಬಳಸಿಕೊಳ್ಳಲು ಆಗಿಲ್ಲ. ನಾವು ಈ ಎಲ್ಲಾ ಮಾಹಿತಿಗಳನ್ನು ನ್ಯಾಯಾಲಗಳ ಮುಂದೆ ಇಟ್ಟಿದ್ದೆವು. ಇದೇ ಕಾರಣಕ್ಕೆ ಕಳೆದ ವಾರ ನಾನು ದೆಹಲಿಗೆ ಹೋಗಿ, ನಮ್ಮ ಕಾನೂನು ತಂಡದ ಜೊತೆ ಚರ್ಚೆ ಮಾಡಿ, ನಮ್ಮ ನಿಲುವು ಸ್ಪಷ್ಟಪಡಿಸಿದ್ದೆ. ನಮ್ಮ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ನಾಗರಿಕರನ್ನು ಅಭಿನಂದಿಸುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ