ಕಂಪ್ಲಿ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ: ಗೃಹ ಸಚಿವರ ಗಂಭೀರ ಆರೋಪ

By Web DeskFirst Published Feb 10, 2019, 4:35 PM IST
Highlights

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದ್ದು, ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ಮುಂದುವರೆಸಿದ್ದಾರೆ. ಸದ್ಯ ಗೃಹ ಸಚಿವ ಎಂ. ಬಿ ಪಾಟೀಲ್ ಕಂಪ್ಲಿ ಗಣೇಶ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಯಪುರ[ಫೆ.10]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲೂ ಮಹತ್ತರ ಬೆಳವಣಿಗೆಗಳಾಗುತ್ತಿವೆ. ಒಂದೆಡೆ ಆಡಿಯೋ ಸೌಂಡ್ ಜೋರಾಗುತ್ತಿದ್ದರೆ, ಅತ್ತ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಗಣೇಶ್ ವಿಚಾರವೂ ಸದ್ದು ಮಾಡುತ್ತಿದೆ. ಹೀಗಿರುವಾಗ ಗೇಹ ಸಚಿವ ಎಂ. ಬಿ ಪಾಟೀಲ್ ಈ ವಿಚಾರವಾಗಿ ಮಾತನಾಡುತ್ತಾ ಕಂಪ್ಲಿ ಗಣೇಶ್ ಸಂಪರ್ಕದಲ್ಲಿ ಇಲ್ಲ. ಕಂಪ್ಲಿ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಟಿಯೊಂದನ್ನು ಆಯೋಜಿಸಿ ಮಾತನಾಡಿದ ಗೃಹ ಸಚಿವ ಎಂ. ಬಿ ಪಾಟೀಲ್ 'ಕಂಪ್ಲಿ ಶಾಸಕ ಗಣೇಶ್ ಬಿಜೆಪಿ  ರಕ್ಷಣೆಯಲ್ಲಿದ್ದಾರೆ. ಶಾಸಕ ಗಣೇಶ್ ಅವರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಮುಂಬೈನಲ್ಲಿದ್ದಾರೆ,  ಗೋವಾದಲ್ಲಿದ್ದಾರೆ, ಅಂಡಮಾನ್ ನಿಕೋಬಾರ್ ದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ವಿಪ್ ಜಾರಿಯಾದರೆ ವಿಧಾನಸಭೆಗೆ ಬರಲೇಬೇಕು. ಆಗ ಅವರನ್ನು ಬಂಧಿಸಲಾಗುವುದು. ನಮ್ಮ ಇಲಾಖೆಯಲ್ಲಿ ಯಾರೂ ಕಂಪ್ಲಿ ಗಣೇಶ ಸಂಪರ್ಕದಲ್ಲಿ ಇಲ್ಲ. ಕಂಪ್ಲಿ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಎಂ. ಬಿ ಪಾಟೀಲ್ 'ವಿಜಯಪುರ ಸಮೀಪದ ಅರಕೇರಿಯಲ್ಲಿ ಹೊಸ ಜೈಲು ಸ್ಥಾಪನೆಗೆ ಬಜೆಟ್ನಲ್ಲಿ ಘೋಷಣೆಯಾಗಿದೆ. ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಆಗಬೇಕು ಅಂತಾ ಒತ್ತಾಯ ಇದೆ. ಸಿಎಂ ದ್ರಾಕ್ಷಿ ಬೆಳೆಗಾರರ ಬಗ್ಗೆ ಮಹತ್ವದ ಘೋಷಣೆ ಮಾಡುತ್ತಾರೆ. ಐಆರ್‌ಬಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ನಾನು ಸಿಎಂ ಚಿಂತನೆ ಮಾಡಿದ್ದೇವೆ. ಬೂತನಾಳ ಕೆರೆ ಅಭಿವೃದ್ಧಿಗೆ ₹ 9.13 ಲಕ್ಷ ಬಿಡುಗಡೆಯಾಗಿದೆ. ಇನ್ನೂ ₹ 4 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪೊಲೀಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಒಳ್ಳೆ ಅಧಿಕಾರಿಗಳನ್ನು ನೇಮಿಸಲಾಗುವುದು. ಹೊಸ ಪೊಲೀಸ್ ಠಾಣೆಗಳ‌ ನಿರ್ಮಾಣ ಸದ್ಯಕ್ಕಿಲ್ಲ. ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿ ಇವೆ. ಮುಂಬೈನ ಫೋರ್ಸ್ 1 ಹಾಗೂ ಆಂಧ್ರದ ಆಕ್ಟೋಪಸ್ ಫೋರ್ಸ್ ಬಹಳ ಶಕ್ತಿಶಾಲಿಯಾಗಿವೆ. ನಮ್ಮ ರಾಜ್ಯದ ಗರುಡ ಪಡೆಯೂ ಅವುಗಳಂತೆ ಆಗಬೇಕು' ಎಂದಿದ್ದಾರೆ.

ಪೊಲೀಸ್ ಇಲಾಖೆಯ ವಿಚಾರವನ್ನು ಪ್ರಸ್ತಪಿಸಿದ ಎಂಬಿಪಿ 'ಔರಾದಕರ ಸಮಿತಿ ವರದಿ ಶಿಫಾರಸ್ಸು ಅನುಷ್ಠಾನಗೊಳಿಸಲಾಗುವುದು. ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ತಾರತಮ್ಯ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಆತಂಕ ಪಡುವುದು ಬೇಡ’ ಎಂಬ ಭವರವಸೆ ನೀಡಿದ್ದಾರೆ.

click me!