ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ: ಮೋದಿ ವಿರುದ್ಧ ಸಚಿವ ಎಂ.ಬಿ.ಪಾಟೀಲ ಕಿಡಿ

Published : Mar 30, 2026, 10:55 PM IST
mb patil

ಸಾರಾಂಶ

ದೇಶದ ಜನರಿಗೆ ಸಂಪೂರ್ಣ ಆಹಾರ ಒದಗಿಸುವ ಆಹಾರ ಭದ್ರತೆ, ಉದ್ಯೋಗ ಖಾತರಿ, ಪಡಿತರ ಚೀಟಿ, ಪಿಂಚಣಿ ಯೋಜನೆಗಳು ಸೇರಿದಂತೆ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದ ಕಾಂಗ್ರೆಸ್ ಪಕ್ಷ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಾಗಲಕೋಟೆ (ಮಾ.30): ಗುಂಡಿ ಸೂಜಿ ಉತ್ಪಾದನೆ ಆಗದಿದ್ದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ದೇಶದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು, ಸರ್ಕಾರದ ಸಂಸ್ಥೆಗಳು, ಬ್ಯಾಂಕ್ ರಾಷ್ಟ್ರೀಕರಣ, ದೇಶದ ಜನರಿಗೆ ಸಂಪೂರ್ಣ ಆಹಾರ ಒದಗಿಸುವ ಆಹಾರ ಭದ್ರತೆ, ಉದ್ಯೋಗ ಖಾತರಿ, ಪಡಿತರ ಚೀಟಿ, ಪಿಂಚಣಿ ಯೋಜನೆಗಳು ಸೇರಿದಂತೆ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದ ಕಾಂಗ್ರೆಸ್ ಪಕ್ಷ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಮತಯಾಚನೆಗೆ ಆಗಮಿಸಿದ್ದ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಸಿಕ್ಕಾಗಿ ನಮ್ಮ ದೇಶಕ್ಕೆ ಅಮೆರಿಕದಿಂದ ಗೋಧಿ ಬರುತ್ತಿತ್ತು. ಜವಹರಲಾಲ ನೆಹರು, ಲಾಲಬಹದ್ದೂರ್‌ ಶಾಸ್ತ್ರಿ ಸೇರಿದಂತೆ ಕಾಂಗ್ರೆಸ್ ಸರ್ಕಾರ ದೂರದೃಷ್ಟಿಯ ಯೋಜನೆಗಳಿಂದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ಗರೀಬಿ ಹಠಾವೋ, 20 ಅಂಶಗಳ ಕಾರ್ಯಕ್ರಮಗಳು, ಪಂಚ ವಾರ್ಷಿಕ ಯೋಜನೆಗಳು ಜಾರಿಗೆ ತಂದು ದೇಶವನ್ನು ಸಮೃದ್ಧಿಗೊಳಿಸಿದರು ಎಂದು ಹೇಳಿದರು.

ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಎಚ್ಎಎಲ್, ಬಿಎಚ್ಎಲ್, ಬಿಇಎಂಎಲ್, ಇಸ್ರೋ, ಎಚ್ಎಂಟಿ ಸೇರಿದಂತೆ ಅನೇಕ ಸಂಸ್ಥೆಗಳು ಕಾಂಗ್ರೆಸ್ ಕೊಡುಗೆ. ನರೇಗಾ, ಆಧಾರ್‌ ಕಾರ್ಡ ಸಹ ಕಾಂಗ್ರೆಸ್ ಕೊಡುಗೆ ಎಂದು ತಿಳಿಸಿದರು. ಇಂತಹ ಯಾವುದೇ ಕೆಲಸ ಮಾಡದ ನರೇಂದ್ರ ಮೋದಿ12 ವರ್ಷಗಳ ಕಾಲ ದೇಶ ನೆನಪಿಡುವ ಯಾವುದೇ ಕೆಲಸ ಮಾಡಿಲ್ಲ. ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ವಾರ್ಷಿಕ 2 ಕೋಟಿ ಉದ್ಯೋಗ, ಎಲ್ಲರ ಖಾತೆಗೆ ₹15 ಲಕ್ಷ ಜಮಾ, ಅಚ್ಛೆ ದಿನ್ ಯಾವುದೂ ಮಾಡಲಿಲ್ಲ. ₹60 ಇದ್ದ ಪೆಟ್ರೋಲ್ ದರ ನೂರರ ಗಡಿ ದಾಟಿಸಿದರು.

₹400 ಇದ್ದ ಗ್ಯಾಸ್ ಬೆಲೆ ಸಾವಿರದ ಗಡಿಗೆ ಬಂತು. ನೋಟ್ ಬ್ಯಾನ್ ಮಾಡಿ ಕೋಟ್ಯಂತರ ಜನರ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದರು ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ಮನಮೋಹನ್ ಸಿಂಗ್ ಅವರು ದೇಶದ ರೈತರ ₹70 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಅವರು ₹20 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು, ಅದು ಯಾರದ್ದು ಅದಾನಿ, ಅಂಬಾನಿ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಿಗಳ . ಡಾಲರ್ ರೇಟ್ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ದ ಮೋದಿ ಅವರು ಇದೀಗ ರೂಪಾಯಿ ಡಾಲರ್‌ ಗೆ ₹94 ತಲುಪಿದ್ದರೂ ಆ ಬಗ್ಗೆ ಮಾತನಾಡಲ್ಲ ಎಂದು ಕುಟುಕಿದರು.

ಇರಾನ್ ಜೊತೆ ಭಾರತ ಒಳ್ಳೆಯ ಸಂಬಂಧ ಹೊಂದಿತ್ತು. ಮೋದಿ ಅವರು ಇಸ್ರೇಲ್‌ ಗೆ ಹೋಗಿ ಭಾರತ ಜಗತ್ತಿನ ತಾಯಿ ಎಂದಿದ್ದು ಸರಿ. ಆದರೆ, ಇಸ್ರೇಲ್ ಜಗತ್ತಿನ ತಂದೆ ಅಂದು ಬಿಟ್ಟರು. ಮರು ದಿನವೇ ಯುದ್ಧ ಆರಂಭವಾಯಿತು. ಅದಾಗ್ಯೂ ಇರಾನ್ ಭಾರತ ನಮ್ಮ ಸ್ನೇಹಿತ ದೇಶ ಎಂದಿತು. ಹೀಗಾಗಿಯೇ ಇರಾನ್‌ನಿಂದ ಇಂದು ಇಂಧನ ಸಿಗುತ್ತಿದೆ, ಒಂದು ವೇಳೆ ಮೋದಿ ಮೇಲಿನ ಸಿಟ್ಟಿಗೆ ಇಂಧನ ಕೊಡದೇ ಇದ್ದಿದ್ದರೆ ನಮ್ಮ ದೇಶದ ಪರಿಸ್ಥಿತಿ ಇವತ್ತು ಏನಾಗುತ್ತಿತ್ತು? ಮೋದಿ ಅವರು ಆಡಳಿತದಲ್ಲಿ ಬರೀ ಇಂಥದ್ದೇ ಅದ್ವಾನಗಳು ಆಗಿವೆ ಎಂದು ಟೀಕಿಸಿದರು.

ಮೋದಿ ಅವರು ಈ ಹಿಂದೆ ತಾವು ಚಹಾ ಮಾರುವಾಗ ಚರಂಡಿ ಮೇಲೆ ಪೈಪ್ ಹಾಕಿ ಗ್ಯಾಸ್ ಉತ್ಪಾದನೆ ಮಾಡುತ್ತಿದ್ದರು ಎಂದು ಹೇಳಿದ್ದರು. ಇವತ್ತು ಮೋದಿ ಅವರ ವಿದೇಶಾಂಗ ನೀತಿ ನೋಡಿದರೆ ಈಗ ಚರಂಡಿ ಮೇಲೆ ಪೈಪ್ ಹಾಕಿ ಗ್ಯಾಸ್ ಉತ್ಪಾದನೆ ಮಾಡುವ ಸ್ಥಿತಿಗೆ ತಂದಿದ್ದಾರೆ ಎಂದು ಟೀಕಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಅಜಯಕುಮಾರ ಸರನಾಯಕ, ಆನಂದ ನ್ಯಾಮಗೌಡ, ನಾಗರಾಜ ಹದ್ಲಿ ಮತ್ತಿತರರು ಇದ್ದರು.

ಸಾಲ ಮಾಡಿಯಾದ್ರೂ ಯುಕೆಪಿ ಪೂರ್ಣ

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನಕ್ಕೆ ನಮ್ಮ ಸರ್ಕಾರ ಎಕರೆಗೆ ₹30 ಮತ್ತು ₹40 ಲಕ್ಷ ಪರಿಹಾರ ನಿಗದಿ ಪಡಿಸಿ, ಆರಂಭಿಕ ₹400 ಕೋಟಿ ಹಂಚಿಕೆ ಮಾಡಲಾಗಿದೆ. ಬಜೆಟ್‌ ನಲ್ಲಿ ₹3 ಸಾವಿರ ಕೋಟಿ ಇಟ್ಟಿದ್ದೇವೆ. ಪೂರಕ ಬಜೆಟ್‌ ನಲ್ಲಿ ಇನ್ನೂ ಹೆಚ್ಚಿಗೆ ಹಣ ನೀಡುವಾಗಿ ಸಿಎಂ ಹೇಳಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಸಮರ್ಥಿಸಿಕೊಂಡರು.ವಿಜಯಪುರದಲ್ಲಿ 5 ವರ್ಷದಲ್ಲಿ ₹2 ಲಕ್ಷ ಕೋಟಿ ಕೊಡುವುದಾಗಿ ಹಾಗೂ ಇತ್ತೀಚೆಗೆ ನಾಲ್ಕು ವರ್ಷ ಬಜೆಟ್‌ ನಲ್ಲಿ ವಾರ್ಷಿಕ ₹18 ಸಾವಿರ ಕೋಟಿ ಕೊಡುವ ಭರವಸೆ ಏನಾಯಿತು? ನೀವು ಜಲಸಂಪನ್ಮೂಲ ಸಚಿವರಾಗಿದ್ದಾಗ ಬಾಗಲಕೋಟೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ ವಸತಿಗೆ ಎಷ್ಟು ಕೋಟಿ ಕೊಟ್ಟಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಲು ಸಚಿವರು ತಡಬಡಾಯಿಸಿದರು. ಈ ಬಗ್ಗೆ ಸಾಕಷ್ಟು ಹಣ ಕೊಟ್ಟಿದ್ದೇನೆ. ಬೇಕಿದ್ದರೆ ನಿಮ್ಮ ಜೆ.ಟಿ. ಪಾಟೀಲರನ್ನು ಕೇಳಿ ಎಂದರೆ ವಿನಾಃ ಎಷ್ಟು ಹಣ ಒದಗಿಸಿದ್ದೇವೆ ಎನ್ನುವ ನಿಖರ ಮಾಹಿತಿ ನೀಡಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯ ಯಾವ ನೆಲೆಗಟ್ಟಿನ ಮೇಲೆ ಮತ ಕೇಳ್ತಾರೆ: ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯ
ತಮಿಳುನಾಡು ಎಲೆಕ್ಷನ್​​ನಲ್ಲಿ ದಳಪತಿ ಮೇನಿಯಾ..! ತಮಿಳಿಗರ ಖುರ್ಚಿ ಏರಲು ಭರಪೂರ ಆಫರ್ ಕೊಟ್ಟ ವಿಜಯ್!