
ಶ್ರೀನಗರ (ನ.08): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ವಿಷಯ ಗುರುವಾರ ಕಣಿವೆ ರಾಜ್ಯದ ವಿಧಾನಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು ಹಾಗೂ ಬಿಜೆಪಿ ಹಾಗೂ ಬಿಜೆಪಿ ವಿರೋಧಿ ಶಾಸಕರು ಪರಸ್ಪರ ಹೊಡೆದಾಡಿಕೊಂಡರು.
ಗುರುವಾರ ಕಲಾಪ ಆರಂಭವಾಗುತ್ತಲೇ ವಿವಾದಿತ ಸಂಸದ ‘ಎಂಜಿನಿಯರ್’ ರಶೀದ್ ಅವರ ಸೋದರ, ಅವಾಮಿ ಇತ್ತೇಹಾದ್ ಪಕ್ಷದ ಶಾಸಕ ಶೇಖ್ ಖುರ್ಷಿದ್, ರಾಜ್ಯದಲ್ಲಿ ಮತ್ತೆ ಸಂವಿಧಾನದ 370 ಮತ್ತು 35ಎ ವಿಧಿ ಮರುಜಾರಿ ಕೋರುವ ಬ್ಯಾನರ್ ಪ್ರದರ್ಶಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸದನದ ಬಾವಿಗೆ ನುಗ್ಗಿ ಬ್ಯಾನರ್ ಕಸಿಯಲು ಪ್ರಯತ್ನಿಸಿದರು. ಈ ವೇಳೆ ನೂಕಾಟ ತಳ್ಳಾಟ ನಡೆಯಿತು. ಈ ಹಂತದಲ್ಲಿ ಶಾಸಕ ಸಜ್ಜಾದ್ ಲೋನ್ ಖುರ್ಷಿದ್, ನೆರವಿಗೆ ಧಾವಿಸಿದ್ದಲ್ಲದೇ ಖುರ್ಷಿದ್ ನೆರವಿಗೆ ಬರದ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಇತರೆ ಕೆಲಪಕ್ಷಗಳ ಶಾಸಕರ ವಿರುದ್ಧ ಹರಿಹಾಯ್ದರು.
ಸಿಎಂ ಪತ್ನಿ ಪ್ರಕರಣದ ಎಫೆಕ್ಟ್: ಮುಡಾ ಎಲ್ಲ 50:50 ಸೈಟ್ ರದ್ದು!
ಈ ಹಂತದಲ್ಲಿ ಬಿಜೆಪಿ ಶಾಸಕರು ಮತ್ತು ಇತರರ ನಡುವೆ ದೊಡ್ಡ ಮಟ್ಟದ ಘರ್ಷಣೆ ನಡೆಯಿತು. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ಬಿಜೆಪಿ ಮೂವರು ಶಾಸಕರನ್ನು ಮಾರ್ಷಲ್‌ಗಳ ಮೂಲಕ ಹೊರಗೆ ಹಾಕಿಸಿದರು. ಮಂಗಳವಾರವಷ್ಟೇ ರಾಜ್ಯ ವಿಧಾನಸಭೆ, ಸಂವಿಧಾನದ 370ನೇ ವಿಧಿ ಮರು ಜಾರಿ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿ ಅಂಗೀಕರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.