
ಮಂಡ್ಯ (ಡಿ.26): ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ನಿಂದ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಸಿದ್ಧಪಡಿಸದ ಕೈಗಾರಿಕಾ ಭೂಮಿ ಸದ್ಯಕ್ಕೆ ಜಿಲ್ಲೆಯಲ್ಲಿ ಲಭ್ಯವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರು ನಿಯಮ 351ರಡಿಯಲ್ಲಿ ಕೇಳಿದ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಅ.೩೧ರಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬರೆದಿರುವ ಪತ್ರದಲ್ಲಿ ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ಗೆ ರಾಜ್ಯ ಸರ್ಕಾರದಿಂದ ಮಂಡ್ಯ ಜಿಲ್ಲೆಯ ಸುತ್ತ 100 ಎಕರೆ ಭೂಮಿಯನ್ನು ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಹಂಚಿಕೆ ಮಾಡಲು ಕೋರಿದ್ದಾರೆ. ಈ ಪ್ರಸ್ತಾವ ಪರಿಶೀಲನೆಯಲ್ಲಿರುವುದಾಗಿ ಹೇಳಿದ್ದಾರೆ.
ಆದರೆ, ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ನ ವತಿಯಿಂದ ಯೋಜನಾ ಅನುಮೋದನೆ ಹಾಗೂ ಭೂಮಿ ಹಂಚಿಕೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಇದುವರೆಗೆ ಸಲ್ಲಿಕೆಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸದ್ಯಕ್ಕೆ ಮಂಡ್ಯ ಜಿಲ್ಲೆಯೊಳಗೆ ಸಿದ್ಧಪಡಿಸಿದ ಕೈಗಾರಿಕಾ ಪ್ರದೇಶದ ಭೂಮಿಯು ಲಭ್ಯವಿಲ್ಲ. ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದಲ್ಲಿ 284,25 ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ೨೮ ಜನವರಿ 2022ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಮದ್ದೂರು ತಾಲೂಕಿನ ಕುದರಗುಂಡಿ ಗ್ರಾಮದಲ್ಲಿ 109.04 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು 2 ಫೆಬ್ರವರಿ 2021ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆ 98.12 ಎಕರೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಉಳಿದ 10.32 ಎಕರೆ ಜಮೀನಿಗೆ ಭೂ ಪರಿಹಾರ ನೀಡುವ ಹಂತದಲ್ಲಿರುವುದಾಗಿ ವಿವರಿಸಿದ್ದಾರೆ. ನಾಗಮಂಗಲ ತಾಲೂಕಿನ ಚನ್ನಾಪುರ, ಬೀಚನಹಳ್ಳಿ, ಹಟ್ನ, ಬಿಳಗುಂದ ಗ್ರಾಮಗಳಲ್ಲಿ 1277.02 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲು ೧೪ ಆಗಸ್ಟ್ ೨೦೨೦ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಅಂದಿನಿಂದಲೂ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ರೈತರು ಮತ್ತು ಅಧಿಸೂಚಿತ ಖಾತೆದಾರರು ವಿರೋಧಿಸುತ್ತಿರುವುದರಿಂದ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೆ ಸಾಧ್ಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಹೀಗಾಗಿ ಮಂಡ್ಯ ಜಿಲ್ಲೆಯೊಳಗೆ ಸಿದ್ಧಪಡಿಸಿದ ಕೈಗಾರಿಕಾ ಪ್ರದೇಶದ ಭೂಮಿಯು ಪ್ರಸ್ತುತ ಲಭ್ಯವಿರುವುದಿಲ್ಲ. ಒಂದು ವೇಳೆ ಕಂಪನಿಯು ರಾಜ್ಯಸರ್ಕಾರಕ್ಕೆ ತನ್ನ ಯೋಜನೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿ ಅಶ್ಯಕತ ಭೂಮಿಯನ್ನು ಗುರುತಿಸಿ ಭೂಸ್ವಾಧೀನಕ್ಕೆ ಹಾಗೂ ಹಂಚಿಕೆಗೆ ಕೋಇದಲ್ಲಿ ರಾಜ್ಯಸರ್ಕಾರದಿಂದ ಅಗತ್ಯ ಬೆಂಬಲ ನೀಡಿ ಅಗತ್ಯವಿರುವ ಭೂಮಿಯನ್ನು ನಿಯಮಾನುಸಾ ಭೂಸ್ವಾಧೀನ ಮಾಡಿಕೊಡಲಾಗುವುದು ಎಂದು ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.
ಅಮೆರಿಕಾ ಮೂಲದ ಪ್ರತಿಷ್ಠಿತ ತಂತ್ರಜ್ಞಾನ ಉದ್ಯಮವಾದ ಸ್ಯಾನ್ಸನ್ ಗ್ರೂಪ್‌ನ ಕಂಪನಿಯು ಭಾರತದಲ್ಲಿ ಸಿಲಿಕಾಕ್ ಮತ್ತು ಸಿಲಿಕಾನ್ ಕಾರ್ಬೈಟ್ ಉತ್ಪಾದನಾ ಸೌಲಭ್ಯಕ್ಕಾಗಿ ಎಂಡ್ ಟು ಎಂಡ್ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಘಟಕವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈ ಹೈಟೆಕ್ ಹಾರ್ಡ್‌ವೇರ್ ಎಂಜಿನಿಯರಿಂಗ್ ಯೋಜನೆಯನ್ನು ಕರ್ನಾಟಕದಲ್ಲೇ ಇರಿಸಲು ಬಲವಾದ ಆದ್ಯತೆಯನ್ನು ಹೊಂದಿದೆ. ಪ್ರಸ್ತಾಪಿತ ಸೌಲಭ್ಯವು ಮ್ಯಾಕ್ರೋ ಎಲೆಕ್ಟ್ರಾನಿಕ್ ವಲಯದಲ್ಲಿ ಸಿಲಿಕಾನ್ ಮತ್ತು ಸಿಲಿಕಾನ್ ಕಾರ್ಬೈಟ್ ಉತ್ಪಾದನೆಯಿಂದ ಸೌರ ಫಲಕ ಬ್ಯಾಟರಿಗಳು, ಡಯೋಡ್‌ಗಳು ಇತ್ಯಾದಿಗಳನ್ನು ಸಿದ್ಧಪಡಿಸಿ ಉತ್ಪನ್ನಗಳವರೆಗೆ ಸಂಪೂರ್ಣ ಅರೆವಾಹಕ ಮೌಲ್ಯ ಸಪಳಿಯನ್ನು ಒಳಗೊಳ್ಳುವ ಗುರಿ ಹೊಂದಲಾಗಿದೆ.
ಈ ಯೋಜನೆಯನ್ನು ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಉಪಕ್ರಮಗಳ ದೃಷ್ಟಿಗೆ ಅನುಗುಣವಾಗಿ ಅರೆವಾಹಕ ವಲಯದಲ್ಲಿ ಗಮನಾರ್ಹ ತಂತ್ರಜ್ಞಾನ ಸೇರ್ಪಡೆ, ಹೆಚ್ಚಿನ ಮೌಲ್ಯದ ಉದ್ಯೋಗ ಸೃಷ್ಟಿ, ಸಾಮರ್ಥ್ಯ ವೃದ್ಧಿಗೆ ಭರವಸೆ ನೀಡುತ್ತದೆ ಎನ್ನಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸುಮಾರು 30 ಸಾವಿರದಿಂದ 40 ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ನೀಡಿದೆ. ಈ ಸಂಸ್ಥೆಗೆ ಸರ್ಕಾದಿಂದ ಜಿಲ್ಲೆಯ ಸುತ್ತಮುತ್ತ 100 ಎಕರೆ ಬಯಲು ಭೂಮಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ಸ್ಯಾನ್ಸನ್ ಗ್ರೂಪ್‌ನ ಕಂಪನಿಯು ಬೇಡಿಕೆ ಇಟ್ಟಿದೆ. ಅದರಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಿಗೆ ಪತ್ರ ಬರೆದು ಮಂಡ್ಯ ಜಿಲ್ಲೆಯ ಸುತ್ತ ಬಯಲು ಭೂಮಿಯನ್ನು ಮಂಜೂರು ಮಾಡುವಂತೆ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.