ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಆಯ್ಕೆ ಆಗಬೇಕು: ಪ್ರತಾಪ್ ಸಿಂಹ

By Ravi JanekalFirst Published Apr 12, 2024, 1:39 PM IST
Highlights

ಜೂ.4ರಂದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಆಗಲಿದ್ದಾರೆ. ಕಾಂಗ್ರೆಸ್‌ನವರ ಸ್ಥಿತಿ ನೋಡಿದರೆ 40 ಸ್ಥಾನ ದಾಟುವುದು ಸಹ ಕಷ್ಟವಾಗಿದೆ ಎಂದು ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ನುಡಿದರು.

ಮಂಡ್ಯ (ಏ.12): ಜೂ.4ರಂದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಆಗಲಿದ್ದಾರೆ. ಕಾಂಗ್ರೆಸ್‌ನವರ ಸ್ಥಿತಿ ನೋಡಿದರೆ 40 ಸ್ಥಾನ ದಾಟುವುದು ಸಹ ಕಷ್ಟವಾಗಿದೆ ಎಂದು ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ನುಡಿದರು.

ಇಂದು ಮಂಡ್ಯದಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಭೆಯಲ್ಲಿ ಮಾತನಾಡಿದ ಸಂಸದರು, ನರೇಂದ್ರ ಮೋದಿ ಅವರು 3ನೇ ಅವಧಿಗೆ ಪ್ರಧಾನಿ ಆಗುವುದರಲ್ಲಿ ಯಾರಿಗೂ ಅನುಮಾನ ಇಲ್ಲ. ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಆಯ್ಕೆ ಆಗಬೇಕು. ಮೋದಿ ಸಂಪುಟದಲ್ಲಿ ಕುಮಾರಣ್ಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎನ್ನುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ಅಲಹಾಬಾದ್‌ನಲ್ಲಿ ಹುಟ್ಟಿದ ಇಂದಿರಾ ಗಾಂಧಿ ಚಿಕ್ಕಮಗಳೂರು, ಇಟಲಿಯಲ್ಲಿ ಹುಟ್ಟಿದ ಸೋನಿಯಾ ಗಾಂಧಿ ಬಳ್ಳಾರಿ, ದೆಹಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ ವಾಯ್ನಾಡಿಗೆ, ಮೈಸೂರಿನಲ್ಲಿ ಹುಟ್ಟಿದ ಸಿದ್ದಾರಾಮಯ್ಯ ಬಾದಾಮಿಗೆ ಓಡಿ ಹೋಗಬಹುದು. ಆದರೆ ಕಾವೇರಿ ಉಳಿಸಿದ ದೇವೇಗೌಡರ ಮಗ ಮಂಡ್ಯಕ್ಕೆ ಹೊರಗಿನವರು ಹೇಗೆ ಆಗ್ತಾರೆ? ಎಂದು ಪ್ರಶ್ನಿಸಿದರು.

ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ: ಸಚಿವ ವೆಂಕಟೇಶ್ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು

ಯಾವಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ ಭೀಕರ ಬರಗಾಲ ಕಾಲಿಟ್ಟಿದೆ. ಕುಮಾರಣ್ಣ, ಯಡಿಯೂರಪ್ಪ ಸಿಎಂ ಆಗಿದ್ದಾಗ ಮಳೆ ಬೆಳೆಯಿಂದ ರಾಜ್ಯ ಸಮೃದ್ಧವಾಗಿತ್ತು. ಅಂತಹ ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆದ ಬಳಿಕ ಬರಗಾಲದಿಂದ ತತ್ತರಿಸಿಹೋಗಿದೆ. ಕಾವೇರಿ ವಿಚಾರದಲ್ಲಿ ಹಿನ್ನಡೆ ಆದಾಗ ಸಚಿವರಾದ ಚಲುವರಾಯಸ್ವಾಮಿ ಧ್ವನಿ ಎತ್ತಲಿಲ್ಲ. ಸ್ಟಾಲಿನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಕಾವೇರಿ ವಿಚಾರದಲ್ಲಿ ಎದೆಗಾರಿಕೆ ತೋರಲಿಲ್ಲ. ಮಂಡ್ಯ ರೈತರ ಹಿತ ಕಾಯುವ ಕೆಲಸ ಯಾವತ್ತೂ ಮಾಡಲಿಲ್ಲ.
ಆದರೆ ಕಾವೇರಿ ವಿಚಾರದಲ್ಲಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು ದೇವೇಗೌಡರು. ಅವರ ಮಗ ಎಚ್‌ಡಿ ಕುಮಾರಸ್ವಾಮಿ ಮಂಡ್ಯ ಅಭ್ಯರ್ಥಿ ಆಗಿದ್ದಾರೆ. ಅಂಥವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದರು.

ಇನ್ನು ಸ್ಟಾರ್ ಚಂದ್ರು ಚುನಾವಣೆಗೆ ದುಡ್ಡು ಖಾಲಿ ಆಗುತ್ತದೆ ಹೊರತು ಮತ ಬೀಳಲ್ಲ. ಈ ಬಾರಿ ಕುಮಾರಣ್ಣ 2 ಲಕ್ಷ ಮತಗಳ ಅಂತರದಿಂದ ಗೆದ್ದಾಗಿದೆ. ಅಂಬರೀಶ್ ನಂತರ ಮಂಡ್ಯಕ್ಕೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ. ದೇವೇಗೌಡರು ಇರಲಿಲ್ಲ ಎಂದರೆ ಚಲುವರಾಯಸ್ವಾಮಿ ಜಿಪಂ ಮೆಂಬರ್ ಸಹ ಆಗ್ತಿರಲಿಲ್ಲ ನೆನಪಿರಲಿರದು ಎಂದು ತಿವಿದರು. ಮುಂದುವರಿದು, ನಾನು ಎರಡು ಬಾರಿ ಎಂಪಿ ಆಗಲು ಬಿಜೆಪಿ ಜೊತೆ ಜೆಡಿಎಸ್ ಕಾರ್ಯಕರ್ತರು ಕಾರಣರು. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಕುಮಾರಣ್ಣನ ಗೆಲ್ಲಿಸಬೇಕು ಎಂದರು.

ಬಿಜೆಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಪ್ರತಾಪ್ ಸಿಂಹ, ಸದಾನಂದಗೌಡ, ಕಟೀಲ್, ಸಿಟಿ ರವಿಗೂ ಸ್ಟಾರ್ ಲಕ್

 ಕಾಂಗ್ರೆಸ್ 47 ವರ್ಷಗಳ ಕಾಲ ಒಕ್ಕಲಿಗರಿಗೆ ಟಿಕೆಟ್ ಕೊಡಲಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿ ಜಾತಿ ಅನ್ಯಾಯ ವಿರೋಧಿಸಿದ್ರು. ನೀವು ಸ್ಪಂದಿಸಲಿಲ್ಲ. ಆವತ್ತು ನಿಮಗೆ ಒಕ್ಕಲಿಗ ಸ್ವಾಮೀಜಿ ಬಗ್ಗೆ ಗೌರವ ಬರಲಿಲ್ಲವಾ? ಇವತ್ತು ಒಕ್ಕಲಿಗರ ಮೇಲೆ ಬಂದಿದೆಯಾ? ಕಾಂಗ್ರೆಸ್ 135 ಸೀಟು ಗೆಲ್ಲಲು ಕಾರಣರಾದ ಡಿಕೆ ಶಿವಕುಮಾರರನ್ನ ಯಾಕೆ ಸಿಎಂ ಆಗಲು ಬಿಡಲಿಲ್ಲ? ನೀವು(ಸಿದ್ದರಾಮಯ್ಯ) ಸಿಎಂ ಆಗಿದ್ರಿ, ಈ ಬಾರಿ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಬಿಡಬಹುದಿತ್ತಲ್ವಾ? ಸಿದ್ದರಾಮಯ್ಯಗೆ ಒಕ್ಕಲಿಗರ ಮೇಲೆ ಪ್ರೀತಿ ಇಲ್ಲ. ಅವರ ಮಾತಿಗೆ ಬೆಲೆ ಕೊಡುವುದು ಬೇಡ. ಜೆಡಿಎಸ್ ಪಕ್ಷ ಸಾಕಷ್ಟು ಒಕ್ಕಲಿಗರಿಗೆ ಅವಕಾಶ ಮಾಡಿಕೊಟ್ಟಿದೆ. ಒಕ್ಕಲಿಗರ ನಾಯಕತ್ವ ಬೆಳೆಸಿದ್ದು ದೇವೇಗೌಡರು. ಒಕ್ಕಲಿಗರ ಪ್ರಶ್ನಾತೀತ ನಾಯಕರು ದೇವೇಗೌಡರು.  ನೀವು(ಕಾಂಗ್ರೆಸ್) ಏನೇ ತಂತ್ರ ಮಾಡಿದ್ರೂ ಒಕ್ಕಲಿಗರನ್ನ ಮೈತ್ರಿಯಿಂದ ಬೇರೆ ಮಾಡಲು ಆಗೊಲ್ಲ. ತಿಂದು, ಬೆಳೆದ ಮನೆಯಲ್ಲೇ ಗಲೀಜು ಮಾಡುವ ಮನಸ್ಥಿತಿ ಕಾಂಗ್ರೆಸ್‌ನವರದ್ದು. ಒಕ್ಕಲಿಗರಿಗೆ ಹೆಚ್ಚು ಅವಕಾಶ ಕೊಟ್ಟಿದ್ದು ಜೆಡಿಎಸ್‌ ನಂತರ ಬಿಜೆಪಿ ಪಕ್ಷ. ಚುನಾವಣೆಯಲ್ಲಿ ಕಾಂಗ್ರೆಸ್ ನವರು ದುಡ್ಡಿನ ಕಂತೆ ಹಿಡಿದು ಬರುತ್ತಾರೆ. ದುಡ್ಡಿಗೆ ನಮ್ಮ ಮತ ಮಾರಿಕೊಳ್ಳುವುದು ಬೇಡ. ಕಾವೇರಿ ಕಾಯಲು ಕುಮಾರಣ್ಣರನ್ನ ಆರಿಸಿ ಕಳುಹಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

click me!