
ಕಲಾದಗಿ(ಏ.12): ಇನ್ಮುಂದೆ ನನ್ನ ವೈಯಕ್ತಿಕವಾಗಿ ಮಾತಾಡಿದರೆ, ನಿಮ್ಮವು ನೂರಾರು ವಿಷಯಗಳು ನನ್ನ ಕಡೆ ಇವೆ. ಸಮಾಜದವರು ಮಾತಾಡಬಾರದು ಎಂದು ಗೌರವ ಕೊಟ್ಟು ಸುಮ್ಮನಿದ್ದೇವೆ. ಅದು ನಮ್ಮ ದೌರ್ಬಲ್ಯವಲ್ಲ. ಮಾತಾಡೋದಕ್ಕೆ ಸಾಕಷ್ಟು ವಿಷಯಗಳಿವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮಾಜಿ ಸಚಿವ ಮುರಗೇಶ್ ನಿರಾಣಿ ಎಚ್ಚರಿಕೆ ನೀಡಿದರು.
ಗುರುವಾರ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ಮಾತನಾಡಿದರು. ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮುದಾಯದವರು. ಯಾರೋ ಒಬ್ಬರು ಏನೋ ಹೇಳಿದರೆ ಪ್ರತಿಕ್ರಿಯೆ ಕೊಡಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಯಾರೋ ಒಬ್ಬರು ಅಲ್ಲ, ನಾನೇ ಹೇಳಿದ್ದೇನೆ. ಇದೆಲ್ಲ ಬಿಟ್ಟು ಸಮಾಜಕ್ಕೆ ಮೀಸಲಾತಿ ಕೊಡಿಸುವುದರ ಕಡೆ ಗಮನ ಕೊಡಿ. ನೀವು ಒಂದು ಪಕ್ಷದ ಪರ ಪ್ರಚಾರ ಮಾಡುವುದನ್ನು ಬಿಡಿ ಎಂದು ತಿರುಗೇಟು ನೀಡಿದರು.
ಪಂಚಮಸಾಲಿ ಮೀಸಲಿಗೆ ಸರ್ಕಾರದ ನಿರ್ಲಕ್ಷ್ಯ: ಜಯಮೃತ್ಯುಂಜಯ ಶ್ರೀ ಕಿಡಿ
ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಮೃಣಾಲ್ ಹೆಬ್ಬಾಳಕರ್ ಯಾರು ಎಂದು ಬಾಯಿ ಬಿಡಬೇಕು. ಜಗದೀಶ್ ಶೆಟ್ಟರ್ ಹಾಗೂ ಮೃಣಾಲ್ ಇಬ್ಬರೂ ಒಂದೇ ಸಮಾಜದವರು. ನೀವೇಕೆ ಅಲ್ಲಿ ಪ್ರಚಾರ ಮಾಡುತ್ತಿದ್ದೀರಿ. ನಿಮ್ಮ ಸಮಾಜದವರು ಇದ್ದಲ್ಲಿ ಹೋಗಿ ಪ್ರಚಾರ ಮಾಡಿ. ಆದರೆ, ಸುಳ್ಳು ಹೇಳಿ ಸಪೋರ್ಟ್ ಮಾಡುವುದು ಯಾವ ನ್ಯಾಯ? ನಾವು ನಮ್ಮ ಸರ್ಕಾರ ಇದ್ದಾಗ ಪಂಚಮಸಾಲಿ ಸಮಾಜಕ್ಕೆ 2ಡಿ ಅಡಿ ಮೀಸಲಾತಿ ನೀಡಿದ್ದೇವೆ. ಜಾತಿ ಕಾಲಂನಲ್ಲಿ ಸೇರಿಸಿದ್ದೇವೆ. ಇವತ್ತು ಅವರ ಜೊತೆ ಬಾಲ ಬಡಿದುಕೊಳ್ಳುತ್ತಾ ಕಾಂಗ್ರೆಸ್ ಏಜೆಂಟ್ರಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಜಾತಿ ಕಾಲಂನಲ್ಲಿ ಪಂಚಮಸಾಲಿ ಬಿಟ್ಟು ಹೋಗಿತ್ತು. ಅದನ್ನು ಸೇರಿಸಿದ್ದು ನಾವು. 2ಡಿ ಕೊಟ್ಟಿದ್ದು ಬಿಜೆಪಿ. ಆದರೆ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸ್ವಾಮೀಜಿ ನಮ್ಮ ಸರ್ಕಾರವಿದ್ದಾಗ ಎಷ್ಟು ಪ್ರತಿಭಟನೆ ಮಾಡಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಆಗ ಲಕ್ಷ್ಮಿ ಅಕ್ಕ, ಅಣ್ಣ ನಮಗೆ 2ಡಿ ಒಪ್ಪಿಗೆ ಇಲ್ಲ. ನಿಮ್ಮ ಸರ್ಕಾರದಲ್ಲಿ 2ಎ ಮೀಸಲಾತಿ ಕೊಟ್ಟರೆ ಬೆಳಗಾವಿ ಕುಂದಾ ಕೊಟ್ಟು ಸನ್ಮಾನ ಮಾಡುವೆ. ನಿಮಗೆ ಆಗದೆ ಇದ್ರೆ, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳೊಳಗೆ 2ಎ ಕೊಡುತ್ತೇವೆ. ಆಗ ನನಗೆ ಒಂದು ಜೊತೆ ಬಂಗಾರದ ಬಳೆ ಹಾಕಿ ಸಮಾಜದ ಹಿರಿಯರ ಮುಂದೆ ಸನ್ಮಾನ ಮಾಡಬೇಕು ಎಂದು ಓಪನ್ ಚಾಲೆಂಜ್ ಮಾಡಿದ್ದರು. ಅದರ ಸಾನ್ನಿಧ್ಯ ಸ್ವಾಮೀಜಿ ವಹಿಸಿಕೊಂಡಿದ್ದರು. ಈಗ ಸರ್ಕಾರ ಬಂದು ಆರು ತಿಂಗಳಾಯಿತು. ಈಗೇಕೆ ಮೌನ ಎಂದು ಪ್ರಶ್ನಿಸಿದರು.
ಯತ್ನಾಳ ತಮಗಾದ ಅನ್ಯಾಯದ ಬಗ್ಗೆ ಮಾತಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಲಕ್ಷ್ಮೀ ಹೆಬ್ಬಾಳಕರ್‌ಗೆ ಸವಾಲು:
ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಪಂಚಮಸಾಲಿ ಸಮಾಜದ ಬಗ್ಗೆ ಕಳಕಳಿ ಇದ್ದರೆ ರಾಜೀನಾಮೆ ಕೊಡಿ. ಪಂಚಮಸಾಲಿಗರಿಗೆ ೨ಎ ಮೀಸಲಾತಿ ಕೊಡಿಸುವುದಾಗಿ ಹೇಳಿ ಮೂಗಿಗೆ ತುಪ್ಪ ಹಚ್ಚಿ ಮತ ಪಡೆದಿದ್ದೀರಿ. ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹೋರಾಟ ಮಾಡಿದ್ದೀರಿ. ನಿಮ್ಮ ಮೈಯಲ್ಲಿ ಕಿತ್ತೂರು ಚನ್ನಮ್ಮ ರಕ್ತ ಅಂತ ಏನೋ ಮಾತಾಡ್ತಿದ್ದೀರಿ. ರಕ್ತ ಹರಿಯುವುದು ನಿಜವೇ ಆಗಿದ್ದರೆ. ಇವತ್ತು ರಾಜೀನಾಮೆ ಕೊಟ್ಟು ಹೋರಾಟ ಮಾಡಿ ೨ಎ ಮಾಡಿಸಿಕೊಡಿ. ನಿಮಗೆ ಒಂದು ಜೊತೆ ಅಲ್ಲ ಒಂದು ಕೆ.ಜಿ ಬಂಗಾರದ ಆಭರಣ ಮಾಡಿಸಿ. ಸಮಾಜದ ಹತ್ತಾರು ಸಾವಿರ ಬಾಂಧವರನ್ನು ಸೇರಿಸಿ ಸನ್ಮಾನ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಸ್ವಾಮೀಜಿಗಳೇ ನೀವು ಒಂದು ಸರ್ಕಾರ ಇದ್ದಾಗ ಒಂದು ತರಹ. ಇನ್ನೊಂದು ಸರ್ಕಾರ ಇದ್ದಾಗ ಮತ್ತೊಂದು ತರಹ ದ್ವಂಧ್ವ ನೀತಿ ಮಾಡಬೇಡಿ. ಎರಡೂ ಸರ್ಕಾರ ನಿಮಗೆ ಎರಡು ಕಣ್ಣಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ ಹಚ್ಚುವ ಕೆಲಸ ಮಾಡಬೇಡಿ. ನಮ್ಮ ಸರ್ಕಾರ ಇದ್ದಾಗ ಮುತ್ತಿಗೆ ಹಾಕಿದ್ದಿರಿ. ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾದರೂ ಸಹಿತ ನಿದ್ದೆ ಹತ್ತಿದವರ ಹಾಗೆ ನಾಟಕ ಮಾಡಬೇಡಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.