
ನವದೆಹಲಿ(ಅ.26): ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (80) ಎಐಸಿಸಿ ಅಧ್ಯಕ್ಷರಾಗಿ ಇಂದು(ಬುಧವಾರ) ನವದೆಹಲಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ 24 ವರ್ಷಗಳ ಬಳಿಕ ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬೇತರ ವ್ಯಕ್ತಿಯ ಪಾಲಾಗಲಿದೆ. ಜೊತೆಗೆ, ಸುಮಾರು 5 ದಶಕಗಳ ಬಳಿಕ ಕನ್ನಡಿಗರೊಬ್ಬರಿಗೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ನೇತೃತ್ವ ಸಿಕ್ಕಿದಂತೆ ಆಗಲಿದೆ. 1969ರಲ್ಲಿ ನಿಜಲಿಂಗಪ್ಪ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಕಾಂಗ್ರೆಸ್ ಪಕ್ಷದ ಮುಖ್ಯ ಕಚೇರಿಯಲ್ಲಿ ನೂತನ ಅಧ್ಯಕ್ಷರ ಅಧಿಕಾರ ಸ್ವಿಕಾರ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷರ ಚುನಾವಣೆ ನೇತೃತ್ವ ವಹಿಸಿದ್ದ ಮಧುಸೂದನ್ ಮಿಸ್ತ್ರಿ ಅವರು ಖರ್ಗೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಬಳಿಕ 2 ದಶಕಗಳಿಗೂ ಹೆಚ್ಚಿನ ಕಾಲ ಪಕ್ಷವನ್ನು ಮುನ್ನಡೆಸಿದ್ದ ಹಾಲಿ ಅಧ್ಯಕ್ಷೆಯೂ ಆಗಿರುವ ಸೋನಿಯಾ ಗಾಂಧಿ ಅವರು ಪಕ್ಷದ ಹೊಣೆಯನ್ನು ಖರ್ಗೆ ಹೆಗಲಿಗೆ ವಹಿಸಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅ.17ರಂದು ನಡೆದ ಚುನಾವಣೆಯಲ್ಲಿ ಖರ್ಗೆ 6800 ಹೆಚ್ಚು ಮತಗಳ ಅಂತರದಿಂದ ಶಶಿ ತರೂರ್ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.
ಮನ್‌ಮೋಹನ್ ಸಿಂಗ್ 2.0 ವರ್ಶನ್ ಖರ್ಗೆ, ನೂತನ ಅಧ್ಯಕ್ಷರ ಟೀಕಿಸಿದ ನಾಯಕನಿಗೆ ಗೇಟ್‌ಪಾಸ್!
ಸಮಾರಂಭಕ್ಕೆ ಭರದ ಸಿದ್ಧತೆ:
ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರಕ್ಕಾಗಿ ಎಐಸಿಸಿ ಕಚೇರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಬುಧವಾರದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿದಂತೆ ಪಕ್ಷದ ಬಹುತೇಕ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.
ಸ್ಮಾರಕಗಳಿಗೆ ನಮನ:
ಬುಧವಾರ ಅಧಿಕಾರ ಸ್ವೀಕಾರಕ್ಕೂ ಮುನ್ನ ಖರ್ಗೆ, ಮಹಾತ್ಮಾ ಗಾಂಧಿ, ಜವಹರಲಾಲ್, ಲಾಲ್ ಬಹಾದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಜಗಜೀವನ್‌ರಾಮ್ ಅವರ ಸಮಾಧಿಸ್ಥಳಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಂಕಷ್ಟದಲ್ಲಿ ಹೊಣೆ:
ಚುನಾವಣಾ ರಾಜಕೀಯಲ್ಲಿ ಕಾಂಗ್ರೆಸ್ ತನ್ನ ಇತಿಹಾಸದಲ್ಲೇ ಅತ್ಯಂತ ಸಂಕಷ್ಟಎದುರಿಸುತ್ತಿರುವ ಹೊತ್ತಿನಲ್ಲೇ ಖರ್ಗೆ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿದ್ದಾರೆ. ಆಂತರಿಕವಾಗಿ ಪಕ್ಷವನ್ನು ಬಲಗೊಳಿಸುವುದು, ಬಣ ರಾಜಕೀಯಕ್ಕೆ ಬ್ರೇಕ್, ತಾವು ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಅಲ್ಲ ಎಂದು ಸಾಬೀತುಪಡಿಸುವುದು, ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿ ಕಟ್ಟುನಿಟ್ಟು ಜಾರಿ ಮೊದಲಾದ ಆಂತರಿಕ ಸವಾಲುಗಳ ಜೊತೆ, ಮೋದಿ ನೇತೃತ್ವದ ಬಿಜೆಪಿಗೆ ಸಡ್ಡು ಹೊಡೆಯಲು ಕಾರ್ಯತಂತ್ರ, ಹಿಂದಿನ ಮಿತ್ರಪಕ್ಷಗಳ ಜೊತೆ ಮರು ಹೊಂದಾಣಿಕೆ ಮೊದಲಾದ ಸವಾಲುಗಳು ಖರ್ಗೆ ಮುಂದಿದೆ.
ಖಡಕ್ ಖರ್ಗೆ ಮುಂದಿದೆ 5 ಕಟ್ಟರ್ ಸವಾಲು!
ಮೊದಲ ಸವಾಲು:
ವರ್ಷಾಂತ್ಯಕ್ಕೆ ಹಿಮಾಚಲ ಪ್ರದೇಶ, ಗುಜರಾತ್ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ತವರು ರಾಜ್ಯ ಕರ್ನಾಟಕ ಸೇರಿದಂತೆ ನಡೆಯುವ 9 ರಾಜ್ಯಗಳ ವಿಧಾನಸಭಾ ಚುನಾವಣೆ, 2024ರ ಲೋಕಸಭಾ ಚುನಾವಣೆ ಖರ್ಗೆ ಅವರ ಸಾಮರ್ಥ್ಯಕ್ಕೆ ಸವಾಲು ಹಾಕಲಿರುವ ಬೆಳವಣಿಗೆಗಳಾಗಿವೆ.
ರಾಜ್ಯ ನಾಯಕರು ದಿಲ್ಲಿಗೆ
ಬೆಂಗಳೂರು: ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ. ಸಿದ್ದರಾಮಯ್ಯ ಮಂಗಳವಾರವೇ ತೆರಳಿದ್ದು, ಬುಧವಾರ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್, ಧ್ರುವನಾರಾಯಣ, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್ ಮುಂತಾದವರು ತೆರಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.