ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ: ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ

By Sharath Sharma KalagaruFirst Published Oct 26, 2022, 11:06 AM IST
Highlights

Mallikarjun Kharge: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಸಮಾಧಿಗೆ ಭೇಟಿ ನೀಡಿ ನಮಿಸಿದರು. ಪಕ್ಷ ಸಂಘಟನೆ ಮತ್ತು ಬಿಜೆಪಿ ದುರಾಡಳಿತದ ವಿರುದ್ಧ ಹೋರಾಡಲು ಚುನಾವಣೆಗೆ ನಿಂತಿದ್ದೇನೆ ಎಂದು ಈ ಹಿಂದೆ ಖರ್ಗೆ ಹೇಳಿದ್ದರು.

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ದುರಾಡಳಿತದ ವಿರುದ್ಧ ಹೋರಾಡಲು ನನಗೆ ಅಧಿಕಾರ ಮತ್ತು ಶಕ್ತಿ ಬೇಕು. ಈ ಕಾರಣಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಈ ಹಿಂದೆ ಖರ್ಗೆ ಹೇಳಿದ್ದರು. ಖರ್ಗೆ ಕರ್ನಾಟಕದ ಹಿರಿಯ ರಾಜಕಾರಣಿ, ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದ ನಾಯಕ. ಅವರ ಆಯ್ಕೆಯಿಂದ ಕರ್ನಾಟಕ ಕಾಂಗ್ರೆಸ್‌ಗೂ ಹೆಚ್ಚು ಶಕ್ತಿ ಸಿಕ್ಕಿದೆ. 

ಅಭಿನಂದನೆ ಸಲ್ಲಿಸಿದ ಸೋನಿಯಾ:

ಖರ್ಗೆಯವರಿಗೆ ಹೃದಯಪೂರ್ವ ಅಭಿನಂದನೆಗಳು, ನನಗೆ ತುಂಬಾ ಖುಷಿಯಾಗಿದೆ. ಎಲ್ಲರ ಅಭಿಪ್ರಾಯದಂತೆ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಖರ್ಗೆ ಬೇರುಮಟ್ಟದಿಂದ ಬಂದ ನಾಯಕ. ಖರ್ಗೆ ನೇತೃತ್ವದ ಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲ್ಲಿದೆ. ನನಗೆ ಈತನ ಕೊಟ್ಟಿರುವ ಗೌರವಕ್ಕೆ, ಅಭಿಮಾನಕ್ಕೆ ನಾನು ಚಿರರುಣಿ. ನನ್ನ ಕೊನೆಯ ಉಸಿರು ಇರುವ ತನಕ ನಿಮಗೆ ರುಣಿ. ನನ್ನ ಮೇಲಿದ್ದ ದೊಡ್ಡ ಜವಾಬ್ದಾರಿ ಇಳಿದಿದೆ. ಈಗ ಖರ್ಗೆಯವರ ಮೇಲೆ ಇದೆ. ಹೊಸ ಅಧ್ಯಕ್ಷರಿಗೆ ಸವಾಲುಗಳು ಇವೆ. ಲೋಕತಂತ್ರದ ರೂಪದಲ್ಲಿ ಅಧ್ಯಕ್ಷರ ಆಯ್ಕೆಯಾಗಿದೆ. ಅದೇ ರೀತಿ ಎಲ್ಲಾ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಸವಾಲುಗಳನ್ನು ಎದುರಿಸಬೇಕಿದೆ. ಕಾಂಗ್ರೆಸ್ ಮುಂದೆ ಈ ಹಿಂದೆ ಇಂಥದ್ದೇ ಸವಾಲುಗಳು ಬಂದಿದ್ದವು. ಆದ್ರೆ ಕಾಂಗ್ರೆಸ್ ಯಾವಾಗಲೂ ಹಿಮ್ಮುಖವಾಗಿರಲಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ 24 ವರ್ಷಗಳ ಬಳಿಕ ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬೇತರ ವ್ಯಕ್ತಿಯ ಪಾಲಾಗಿದೆ. ಜೊತೆಗೆ, ಸುಮಾರು 5 ದಶಕಗಳ ಬಳಿಕ ಕನ್ನಡಿಗರೊಬ್ಬರಿಗೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ನೇತೃತ್ವ ಸಿಕ್ಕಿದಂತಾಗಿದೆ. 1969ರಲ್ಲಿ ನಿಜಲಿಂಗಪ್ಪ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು.

ಕಾಂಗ್ರೆಸ್‌ ಪಕ್ಷದ ಮುಖ್ಯ ಕಚೇರಿಯಲ್ಲಿ ನೂತನ ಅಧ್ಯಕ್ಷರ ಅಧಿಕಾರ ಸ್ವಿಕಾರ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷರ ಚುನಾವಣೆ ನೇತೃತ್ವ ವಹಿಸಿದ್ದ ಮಧುಸೂದನ್‌ ಮಿಸ್ತ್ರಿ ಅವರು ಖರ್ಗೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಮಾಣ ಪತ್ರ ವಿತರಿಸಿದರು. ಬಳಿಕ 2 ದಶಕಗಳಿಗೂ ಹೆಚ್ಚಿನ ಕಾಲ ಪಕ್ಷವನ್ನು ಮುನ್ನಡೆಸಿದ್ದ ಹಾಲಿ ಅಧ್ಯಕ್ಷೆಯೂ ಆಗಿರುವ ಸೋನಿಯಾ ಗಾಂಧಿ ಅವರು ಪಕ್ಷದ ಹೊಣೆಯನ್ನು ಖರ್ಗೆ ಹೆಗಲಿಗೆ ವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಅ.17ರಂದು ನಡೆದ ಚುನಾವಣೆಯಲ್ಲಿ ಖರ್ಗೆ 6800 ಹೆಚ್ಚು ಮತಗಳ ಅಂತರದಿಂದ ಶಶಿ ತರೂರ್‌ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.

ಮನ್‌ಮೋಹನ್ ಸಿಂಗ್ 2.0 ವರ್ಶನ್ ಖರ್ಗೆ, ನೂತನ ಅಧ್ಯಕ್ಷರ ಟೀಕಿಸಿದ ನಾಯಕನಿಗೆ ಗೇಟ್‌ಪಾಸ್!

ಸಮಾರಂಭಕ್ಕೆ ಭರದ ಸಿದ್ಧತೆ:

ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರಕ್ಕಾಗಿ ಎಐಸಿಸಿ ಕಚೇರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಬುಧವಾರದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ಭಾರತ್‌ ಜೋಡೋ ಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿದಂತೆ ಪಕ್ಷದ ಬಹುತೇಕ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.

ಸ್ಮಾರಕಗಳಿಗೆ ನಮನ:

ಬುಧವಾರ ಅಧಿಕಾರ ಸ್ವೀಕಾರಕ್ಕೂ ಮುನ್ನ ಖರ್ಗೆ, ಮಹಾತ್ಮಾ ಗಾಂಧಿ, ಜವಹರಲಾಲ್‌, ಲಾಲ್‌ ಬಹಾದ್ದೂರ್‌ ಶಾಸ್ತ್ರಿ, ರಾಜೀವ್‌ ಗಾಂಧಿ, ಜಗಜೀವನ್‌ರಾಮ್‌ ಅವರ ಸಮಾಧಿಸ್ಥಳಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಂಕಷ್ಟದಲ್ಲಿ ಹೊಣೆ:

ಚುನಾವಣಾ ರಾಜಕೀಯಲ್ಲಿ ಕಾಂಗ್ರೆಸ್‌ ತನ್ನ ಇತಿಹಾಸದಲ್ಲೇ ಅತ್ಯಂತ ಸಂಕಷ್ಟಎದುರಿಸುತ್ತಿರುವ ಹೊತ್ತಿನಲ್ಲೇ ಖರ್ಗೆ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. ಆಂತರಿಕವಾಗಿ ಪಕ್ಷವನ್ನು ಬಲಗೊಳಿಸುವುದು, ಬಣ ರಾಜಕೀಯಕ್ಕೆ ಬ್ರೇಕ್‌, ತಾವು ಗಾಂಧಿ ಕುಟುಂಬದ ರಬ್ಬರ್‌ ಸ್ಟಾಂಪ್‌ ಅಲ್ಲ ಎಂದು ಸಾಬೀತುಪಡಿಸುವುದು, ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿ ಕಟ್ಟುನಿಟ್ಟು ಜಾರಿ ಮೊದಲಾದ ಆಂತರಿಕ ಸವಾಲುಗಳ ಜೊತೆ, ಮೋದಿ ನೇತೃತ್ವದ ಬಿಜೆಪಿಗೆ ಸಡ್ಡು ಹೊಡೆಯಲು ಕಾರ್ಯತಂತ್ರ, ಹಿಂದಿನ ಮಿತ್ರಪಕ್ಷಗಳ ಜೊತೆ ಮರು ಹೊಂದಾಣಿಕೆ ಮೊದಲಾದ ಸವಾಲುಗಳು ಖರ್ಗೆ ಮುಂದಿದೆ.

ಖಡಕ್‌ ಖರ್ಗೆ ಮುಂದಿದೆ 5 ಕಟ್ಟರ್‌ ಸವಾಲು!

ಮೊದಲ ಸವಾಲು:

ವರ್ಷಾಂತ್ಯಕ್ಕೆ ಹಿಮಾಚಲ ಪ್ರದೇಶ, ಗುಜರಾತ್‌ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ತವರು ರಾಜ್ಯ ಕರ್ನಾಟಕ ಸೇರಿದಂತೆ ನಡೆಯುವ 9 ರಾಜ್ಯಗಳ ವಿಧಾನಸಭಾ ಚುನಾವಣೆ, 2024ರ ಲೋಕಸಭಾ ಚುನಾವಣೆ ಖರ್ಗೆ ಅವರ ಸಾಮರ್ಥ್ಯಕ್ಕೆ ಸವಾಲು ಹಾಕಲಿರುವ ಬೆಳವಣಿಗೆಗಳಾಗಿವೆ.

ರಾಜ್ಯ ನಾಯಕರು ದಿಲ್ಲಿಗೆ

ಬೆಂಗಳೂರು: ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ. ಸಿದ್ದರಾಮಯ್ಯ ಮಂಗಳವಾರವೇ ತೆರಳಿದ್ದು, ಬುಧವಾರ ಡಿ.ಕೆ.ಶಿವಕುಮಾರ್‌, ಬಿ.ಕೆ.ಹರಿಪ್ರಸಾದ್‌, ಸಲೀಂ ಅಹಮದ್‌, ಧ್ರುವನಾರಾಯಣ, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್‌ ಮುಂತಾದವರು ತೆರಳಿ, ಅಧಿಕಾರ ಸ್ವೀಕಾರದ ಸಮಯದಲ್ಲಿ ಜತೆಗಿದ್ದರು.

click me!