ನಾಯಕತ್ವ ಬದಲಾವಣೆ ಬಗ್ಗೆ ಅನಗತ್ಯ ಮಾತು ಬೇಡ: ಮಲ್ಲಿಕಾರ್ಜುನ ಖರ್ಗೆ

Kannadaprabha News   | Kannada Prabha
Published : Jul 01, 2025, 09:22 AM IST
Congress Leader Mallikarjun Kharge

ಸಾರಾಂಶ

ನಾಯಕತ್ವ ಬದಲಾವಣೆ ಎಂಬುದು ಹೈಕಮಾಂಡ್‌ ಕೈಯಲ್ಲಿದೆ. ಈ ಬಗ್ಗೆ ರಾಜ್ಯದಲ್ಲಿ ಯಾರೂ ಮಾತನಾಡುವಂತಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ ಅನಗತ್ಯ ಸಮಸ್ಯೆ ಸೃಷ್ಟಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದಾರೆ.

ಬೆಂಗಳೂರು (ಜು.01): ನಾಯಕತ್ವ ಬದಲಾವಣೆ ಎಂಬುದು ಹೈಕಮಾಂಡ್‌ ಕೈಯಲ್ಲಿದೆ. ಈ ಬಗ್ಗೆ ರಾಜ್ಯದಲ್ಲಿ ಯಾರೂ ಮಾತನಾಡುವಂತಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ ಅನಗತ್ಯ ಸಮಸ್ಯೆ ಸೃಷ್ಟಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆಗಳೂ ಸ್ಥಳೀಯ ನಾಯಕರಿಗೂ ಯಾವುದೇ ಸಂಬಂಧವಿಲ್ಲ.

ಈ ಬಗ್ಗೆ ಅಧಿಕಾರ ಇರುವುದು ಹೈಕಮಾಂಡ್‌ಗೆ ಮಾತ್ರ. ಹೀಗಾಗಿ ಇಲ್ಲಿ ಯಾರೂ ಮಾತನಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಸುರ್ಜೇವಾಲ ಅವರು ಬೆಂಗಳೂರಿಗೆ ಬಂದಿದ್ದಾರೆ. ಅವರು ಶಾಸಕರೊಂದಿಗೆ ಚರ್ಚಿಸಿ ಶಾಸಕರು ಹೇಳುವುದನ್ನು ಹೈಕಮಾಂಡ್‌ಗೆ ವರದಿ ನೀಡುತ್ತಾರೆ. ಶಾಸಕರ ಸಮಸ್ಯೆಗಳು, ಕ್ಷೇತ್ರದ ಪಕ್ಷ ಸಂಘಟನೆ ಬಗ್ಗೆ ವಿವರಣೆ ಪಡೆಯಲಿದ್ದಾರೆ. ಆ ವರದಿ ಪರಿಶೀಲಿಸಿ ಹೈಕಮಾಂಡ್‌ ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಿದೆ ಎಂದು ಹೇಳಿದರು.

ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ಶಾಸಕರ ಬಹಿರಂಗ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮಲ್ಲಿಕಾರ್ಜುನ ಖರ್ಗೆ, ಅವರ ಎಲ್ಲಾ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ನಾನು ಎಐಸಿಸಿ ಮಟ್ಟದ ವಿಚಾರಗಳಿಗಷ್ಟೇ ಉತ್ತರ ಕೊಡುತ್ತೇನೆ. ಇಲ್ಲಿಯದ್ದು ಪ್ರತಿಯೊಂದಕ್ಕೂ ಉತ್ತರ ಕೊಡುತ್ತಾ ಹೋದರೆ ಸಾಕಷ್ಟು ವಿಚಾರ ಇದೆ. ನಾನು ಯಾವುದಕ್ಕೂ ಪ್ರತಿಕ್ರಿಯಿಸಲ್ಲ ಎಂದರು.

ಅಭಿವೃದ್ಧಿಗೂ ಒತ್ತು ಕೊಡಿ: ಬೆಂಗಳೂರನ್ನು ಸಿಂಗಾಪುರ ಮಾಡುವತ್ತ ನಮ್ಮ ಸರ್ಕಾರ ಹೆಜ್ಜೆ ಇಟ್ಟಿರುವುದು ಸಂತೋಷದ ವಿಚಾರ. ಆದರೆ, ಕಲ್ಯಾಣ ಕರ್ನಾಟಕ ಭಾಗವನ್ನು ಬೆಂಗಳೂರು-ಮೈಸೂರು ಮಾದರಿಯಲ್ಲಿ ಅಭಿವೃದ್ದಿ ಮಾಡಿದರೆ ಇಲ್ಲಿನ ಜನ ರಾಜ್ಯ ಸರ್ಕಾರಕ್ಕೆ ಚಿರಋುಣಿಯಾಗಿರುತ್ತಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ಆರೋಗ್ಯ ಅವಿಷ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯನವರ ಮೈಸೂರು ಮತ್ತು ಡಿ.ಕೆ.ಶಿವಕುಮಾರ್‌ ಅವರ ಬೆಂಗಳೂರಿನಂತೆ ಈ ಪ್ರದೇಶದ ಅಭಿವೃದ್ಧಿ ಮಾಡಿದರೆ ಜನ ನಿಮ್ಮನ್ನು ಮರೆಯಲ್ಲ ಎಂದು ವೇದಿಕೆ ಮೇಲಿದ್ದ ಸಿಎಂ., ಡಿಸಿಎಂಗೆ ಅವರು ಸಲಹೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2025-26ನೇ ಸಾಲಿಗೆ 5,000 ಕೋಟಿ ರೂ. ಅನುದಾನ ನೀಡಿದ್ದಾರೆ. ಅಷ್ಟೂ ಹಣವನ್ನು ಇದೇ ವರ್ಷದಲ್ಲಿ ಖರ್ಚು ಮಾಡುವ ಮೂಲಕ ಈ ಪ್ರದೇಶದ ಜನರ ಅಭ್ಯುದಯಕ್ಕೆ ಶ್ರಮಿಸಬೇಕು. ಇಂದಿಲ್ಲಿ ಚಾಲನೆ ನೀಡಿದ ಎಲ್ಲಾ ಕೆಲಸಗಳನ್ನು ಇದೇ ವರ್ಷದಲ್ಲಿ ಪೂರ್ಣಗೊಳಿಸಿ. ಮುಂದಿನ ವರ್ಷ ಮತ್ತೆ ಹೊಸ ಯೋಜನೆಗಳತ್ತ ಮುಂದಾಗಿ ಎಂದು ಸಲಹೆ ನೀಡಿದರು.

ಈ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಾಗಿ, ಇಲ್ಲಿನ ಶಿಕ್ಷಣ ವ್ಯವಸ್ಥೆ, ಗುಣಮಟ್ಟ ಕುಂಠಿತವಾಗಿದೆ. ಗಣಿತ, ವಿಜ್ಞಾನ, ಆಂಗ್ಲ ಶಿಕ್ಷಕರ ಕೊರತೆ ಹೆಚ್ಚಿದೆ. ಬೇರೆ ಪ್ರದೇಶದಿಂದ ಇಲ್ಲಿಗೆ ನೇಮಕವಾಗುವ ಶಿಕ್ಷಕರು ಒಂದೇ ವರ್ಷದಲ್ಲಿ ವರ್ಗಾವಣೆ ಮಾಡಿಕೊಂಡು ಹೋಗುವ ದುಃಸ್ಥಿತಿ ಇಲ್ಲಿದೆ. ಪರಿಣಾಮ ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಈ ಪ್ರದೇಶದ ಜಿಲ್ಲೆಗಳನ್ನು ರ‍್ಯಾಂಕ್ ಪಟ್ಟಿಯಲ್ಲಿ ಕೆಳಗಿನಿಂದ ನೋಡಬೇಕಾದ ಅನಿವಾರ್ಯತೆ ಇದೆ. ಈ ಭಾಗದಲ್ಲಿ ಉದ್ಯೋಗ ನೇಮಕಾತಿಗೆ 371ಜೆ ಕಾಯ್ದೆಯಲ್ಲಿ ಹಣಕಾಸು ಇಲಾಖೆ ಅನುಮೋದನೆ ಪಡೆಯುವ ಅವಶ್ಯಕತೆ ಇಲ್ಲ. ಹೀಗಾಗಿ, ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಸ್ಥಳೀಯರಿಗೆ ಉದ್ಯೋಗ ನೀಡುವತ್ತ ಗಮನ ಹರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ