'Useless Fellows': ಡಿಕೆಶಿ ಘೋಷಣೆಗೆ ಸಿಟ್ಟಾದ ಖರ್ಗೆ: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಗುಡುಗು!

Published : Jun 21, 2026, 08:54 PM IST
Mallikarjun Kharge

ಸಾರಾಂಶ

Mallikarjun Kharge: ಬಿ.ಕೆ. ಹರಿಪ್ರಸಾದ್ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಪರ ಘೋಷಣೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ. ವ್ಯಕ್ತಿಪೂಜೆ ಬೇಡ, ಪಕ್ಷದ ಶಿಸ್ತು ಕಾಪಾಡಿ ಎಂದು ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಜೂ.21): ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭ ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಸಂದೇಶ ನೀಡುವ ವೇದಿಕೆಯಾಗಬೇಕಿತ್ತು. ಆದರೆ ಕಾರ್ಯಕ್ರಮದ ವೇಳೆ ಡಿ.ಕೆ. ಶಿವಕುಮಾರ್ ಪರ ಘೋಷಣೆಗಳು ಮೊಳಗುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದರು.

ತಮ್ಮ ಭಾಷಣದ ವೇಳೆ "ಡಿಕೆ... ಡಿಕೆ..." ಎಂಬ ಘೋಷಣೆಗಳು ಕೇಳಿಬಂದಾಗ ಗರಂ ಆದ ಖರ್ಗೆ, "ಇಷ್ಟು ಜನ ಮಾತ್ರ ಕೂಗಿದರೆ ಇಡೀ ದೇಶ ನಿಮ್ಮ ಕೈಗೆ ಸಿಗುತ್ತಾ? ಯೂಸ್ ಲೆಸ್ ಫೆಲೋಸ್. ಇದು ಪಕ್ಷವನ್ನು ಒಗ್ಗೂಡಿಸುವ ವೇದಿಕೆ. ಇಲ್ಲಿ ವ್ಯಕ್ತಿಪೂಜೆಗೆ ಅವಕಾಶ ಇಲ್ಲ" ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷವೇ ನಾಯಕರಿಗೆ ಶಕ್ತಿ ನೀಡಿದೆ ಹೊರತು ವ್ಯಕ್ತಿಗಳಿಂದ ಕಾಂಗ್ರೆಸ್ ಬೆಳೆದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು. ಘೋಷಣೆಗಳನ್ನು ಮುಂದುವರಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಭಾಷಣ ಮುಂದುವರಿಸಿದ ಖರ್ಗೆ, ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಮೆಚ್ಚಿ ಮಾತನಾಡಿದರು. "ಡಿ.ಕೆ. ಶಿವಕುಮಾರ್ ಪಕ್ಷ ಸಂಘಟನೆಯನ್ನು ಬಲಪಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಉತ್ತಮ ವಾತಾವರಣ ನಿರ್ಮಾಣವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ದೇಶದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸುವ ಜವಾಬ್ದಾರಿ ಬಿ.ಕೆ. ಹರಿಪ್ರಸಾದ್ ಅವರ ಮೇಲಿದೆ ಎಂದು ಹೇಳಿದರು.

ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧವೂ ಕಿಡಿಕಾರಿದ ಖರ್ಗೆ, ಶಿಕ್ಷಣ ಮತ್ತು ಆಡಳಿತ ವ್ಯವಸ್ಥೆಗಳಲ್ಲಿ ಸೈದ್ಧಾಂತಿಕ ಪ್ರಭಾವ ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿದರು. "ಕರ್ನಾಟಕಕ್ಕೆ ಮೋದಿ ಕೊಟ್ಟಿರುವುದು ನಿರುದ್ಯೋಗ ಮತ್ತು ಬೆಲೆ ಏರಿಕೆ ಮಾತ್ರ" ಎಂದು ಟೀಕಿಸಿದ ಅವರು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಪಾರದರ್ಶಕ ತನಿಖೆ ನಡೆಯಬೇಕು

ರಾಮ ಮಂದಿರದ ನಿಧಿ ಮತ್ತು ನಿರ್ವಹಣೆ ಕುರಿತಂತೆ ಪ್ರಶ್ನೆ ಎತ್ತಿದ ಖರ್ಗೆ, ದೇವಸ್ಥಾನದ ಹಣಕಾಸು ವ್ಯವಹಾರಗಳ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ಮತ್ತು ಆರ್ಥಿಕ ದುರುಪಯೋಗ ನಡೆಯುತ್ತಿದೆ ಎಂಬ ಆರೋಪವನ್ನೂ ಮಾಡಿದರು.

ನೀಟ್ ಪರೀಕ್ಷೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದ ಖರ್ಗೆ, ಪರೀಕ್ಷಾ ವ್ಯವಸ್ಥೆಯ ದೋಷಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ರಾಜ್ಯಗಳಿಗೆ ಪರೀಕ್ಷೆ ನಡೆಸುವ ಅಧಿಕಾರ ನೀಡಬೇಕು ಹಾಗೂ ಸಿಇಟಿ ಮತ್ತು ಪಿಯುಸಿ ಅಂಕಗಳ ಆಧಾರದ ಮೇಲೆ ರ್ಯಾಂಕಿಂಗ್ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಭಾಷಣದ ಕೊನೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ಅವರಿಗೆ ಕಿವಿಮಾತು ಹೇಳಿದ ಖರ್ಗೆ, "ನಿಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಒಳಗೇ ಚರ್ಚಿಸಿ ಬಗೆಹರಿಸಿಕೊಳ್ಳಿ. ಮಾಧ್ಯಮಗಳ ಮುಂದೆ ಮಾತನಾಡುವುದು ಪಕ್ಷದ ಇಮೇಜ್‌ಗೆ ಹಾನಿ ಉಂಟುಮಾಡುತ್ತದೆ" ಎಂದು ಸಲಹೆ ನೀಡಿದರು. ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಅಧಿಕಾರ ಮತ್ತು ಜವಾಬ್ದಾರಿ ನೀಡುವಂತೆ ನಾಯಕತ್ವಕ್ಕೆ ಸೂಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Chetan Ahimsa Political Party: ನಟ ಚೇತನ್ ಅಹಿಂಸಾ ಹೊಸ ರಾಜಕೀಯ ಪಕ್ಷ ಸ್ಥಾಪನೆ; ಇಲ್ಲಿವೆ ಪ್ರಣಾಳಿಕೆ 10 ಅಂಶಗಳು
CM Vijay: ದಳಪತಿ ವಿಜಯ್ ರಾಜಕೀಯ ಗೆಲುವು ದಿಢೀರ್ ಆಗಿದ್ದಲ್ಲ; ಅದಕ್ಕೂ ಮೊದಲು ಏನೆಲ್ಲಾ ಮಾಡಿದ್ರು ಗೊತ್ತಾ?